Gold Loan: ಗೋಲ್ಡ್ ಲೋನ್‌ಗೂ ಮುನ್ನ ಈ 5 ವಿಷಯ ತಿಳಿದಿರಲಿ, ಇಲ್ಲದಿದ್ದರೆ ನಷ್ಟ ಖಚಿತ
Gold Loan: ಗೋಲ್ಡ್ ಲೋನ್ ಪಡೆಯುವ ಮೊದಲು ಬಡ್ಡಿದರ, ಹೆಚ್ಚುವರಿ ಶುಲ್ಕ, ಮರುಪಾವತಿ ನಿಯಮಗಳು ಹಾಗೂ ಅಗತ್ಯಕ್ಕೆ ತಕ್ಕಷ್ಟು ಸಾಲದ ಮೊತ್ತವನ್ನು ಪರಿಶೀಲಿಸಿದರೆ ಅನಗತ್ಯ ಆರ್ಥಿಕ ನಷ್ಟವನ್ನು ತಪ್ಪಿಸಿಕೊಳ್ಳಬಹುದು.

Gold Loan: ತುರ್ತು ಸಂದರ್ಭಗಳಲ್ಲಿ ಹಣದ ಅಗತ್ಯ ಎದುರಾದಾಗ ಹೆಚ್ಚಿನ ಜನರು ಆಯ್ಕೆ ಮಾಡುತ್ತಿರುವ ಸಾಲಗಳಲ್ಲಿ ಗೋಲ್ಡ್ ಲೋನ್ (Gold Loan) ಪ್ರಮುಖವಾಗಿದೆ. ಬಂಗಾರದ ಬೆಲೆ ಏರಿಕೆಯಾಗಿರುವುದರಿಂದ ಹೆಚ್ಚಿನ ಮೊತ್ತದ ಸಾಲ ಸುಲಭವಾಗಿ ದೊರೆಯುತ್ತಿದ್ದು, ಕಡಿಮೆ ದಾಖಲೆಗಳು ಹಾಗೂ ವೇಗವಾದ ಅನುಮೋದನೆಯಿಂದ ಈ ಸಾಲಕ್ಕೆ ಬೇಡಿಕೆಯೂ ಹೆಚ್ಚಿದೆ.
ಗೋಲ್ಡ್ ಲೋನ್‌ನಲ್ಲಿ ನಿಮ್ಮ ಬಂಗಾರವನ್ನು ಬ್ಯಾಂಕ್ ಅಥವಾ ಹಣಕಾಸು ಸಂಸ್ಥೆಯಲ್ಲಿ ಅಡಮಾನ ಇಟ್ಟು ಅದರ ಮೌಲ್ಯದ ಆಧಾರದ ಮೇಲೆ ಸಾಲ ಪಡೆಯಲಾಗುತ್ತದೆ. ನಿಗದಿತ ಅವಧಿಯಲ್ಲಿ ಬಡ್ಡಿ ಸೇರಿದಂತೆ ಸಾಲವನ್ನು ಮರುಪಾವತಿಸಿದ ಬಳಿಕ ನಿಮ್ಮ ಚಿನ್ನವನ್ನು ವಾಪಸ್ ಪಡೆಯಬಹುದು. ಇತರ ಹಲವು ಸಾಲಗಳಿಗಿಂತ ಇದರ ಬಡ್ಡಿದರ ಸಾಮಾನ್ಯವಾಗಿ ಕಡಿಮೆ ಇರುತ್ತದೆ.
ಆದರೆ ಗೋಲ್ಡ್ ಲೋನ್ ಪಡೆಯುವ ಮೊದಲು ಕೆಲವು ವಿಷಯಗಳನ್ನು ಗಮನಿಸುವುದು ಅತ್ಯಗತ್ಯ. ಅಗತ್ಯಕ್ಕಿಂತ ಹೆಚ್ಚು ಸಾಲ ಪಡೆಯುವುದರಿಂದ ನಂತರ ಮಾಸಿಕ ಕಂತು ಅಥವಾ ಒಟ್ಟು ಮರುಪಾವತಿ ಮೊತ್ತ ಹೆಚ್ಚಾಗಿ ಆರ್ಥಿಕ ಹೊರೆ ಉಂಟಾಗಬಹುದು. ಆದ್ದರಿಂದ ನಿಮ್ಮ ನಿಜವಾದ ಅಗತ್ಯಕ್ಕೆ ತಕ್ಕಷ್ಟು ಮಾತ್ರ ಸಾಲ ಪಡೆಯುವುದು ಉತ್ತಮ ಎಂದು ಹಣಕಾಸು ತಜ್ಞರು ಸಲಹೆ ನೀಡುತ್ತಾರೆ.
ಸಾಲ ನೀಡುವ ಬ್ಯಾಂಕ್ ಅಥವಾ ಸಂಸ್ಥೆಯ ಬಡ್ಡಿದರ, ಪ್ರೊಸೆಸಿಂಗ್ ಶುಲ್ಕ, ಚಿನ್ನದ ಮೌಲ್ಯಮಾಪನ ಶುಲ್ಕ, ನವೀಕರಣ ಶುಲ್ಕ ಹಾಗೂ ವಿಳಂಬ ಪಾವತಿ ದಂಡ ಸೇರಿದಂತೆ ಎಲ್ಲ ವೆಚ್ಚಗಳನ್ನು ಮುಂಚಿತವಾಗಿ ತಿಳಿದುಕೊಳ್ಳಬೇಕು. ಕಡಿಮೆ ಬಡ್ಡಿದರ ಮಾತ್ರ ನೋಡಿ ನಿರ್ಧಾರ ಕೈಗೊಳ್ಳದೇ, ಒಟ್ಟಾರೆ ವೆಚ್ಚವನ್ನು ಹೋಲಿಕೆ ಮಾಡುವುದು ಸೂಕ್ತ.
ಮರುಪಾವತಿಯ ವಿಧಾನವನ್ನೂ ನಿಮ್ಮ ಆದಾಯಕ್ಕೆ ಅನುಗುಣವಾಗಿ ಆಯ್ಕೆ ಮಾಡಬೇಕು. ಕೆಲವರು ಮಾಸಿಕ EMI ಮೂಲಕ ಪಾವತಿಸಬಹುದು, ಇನ್ನು ಕೆಲವರು ಅವಧಿ ಮುಗಿದ ಬಳಿಕ ಒಟ್ಟು ಮೊತ್ತವನ್ನು ಒಮ್ಮೆಗೆ ಪಾವತಿಸುವ ಆಯ್ಕೆಯನ್ನು ಬಳಸಬಹುದು. ಯಾವ ವಿಧಾನ ನಿಮಗೆ ಅನುಕೂಲ ಎಂಬುದನ್ನು ಮೊದಲೇ ನಿರ್ಧರಿಸಿಕೊಳ್ಳುವುದು ಉತ್ತಮ.
ಅದೇ ರೀತಿ ಸಾಲವನ್ನು ನಿಗದಿತ ಅವಧಿಗೂ ಮುನ್ನ ತೀರಿಸಿದರೆ ಯಾವುದೇ ಹೆಚ್ಚುವರಿ ಶುಲ್ಕ ವಿಧಿಸಲಾಗುತ್ತದೆಯೇ ಎಂಬುದನ್ನೂ ಪರಿಶೀಲಿಸಿ. ಎಲ್ಲಾ ನಿಯಮಗಳು ಮತ್ತು ಷರತ್ತುಗಳನ್ನು ಸ್ಪಷ್ಟವಾಗಿ ಅರ್ಥಮಾಡಿಕೊಂಡ ನಂತರವೇ ಗೋಲ್ಡ್ ಲೋನ್ ಪಡೆಯುವುದರಿಂದ ಭವಿಷ್ಯದಲ್ಲಿ ಅನಗತ್ಯ ಆರ್ಥಿಕ ಸಮಸ್ಯೆಗಳನ್ನು ತಪ್ಪಿಸಬಹುದು.



