LPG ಗ್ಯಾಸ್ ಸಿಲಿಂಡರ್ ಬುಕ್ಕಿಂಗ್‌ಗೆ ಹೊಸ ನಂಬರ್‌ಗಳು ಪ್ರಕಟ
ಇಂಡೇನ್ LPG ಗ್ರಾಹಕರಿಗೆ ಹೊಸ ಬುಕ್ಕಿಂಗ್ ಸೌಲಭ್ಯ. ಮಿಸ್ಡ್ ಕಾಲ್ ಮತ್ತು IVRS ಮೂಲಕ ಈಗ ಸುಲಭವಾಗಿ ಗ್ಯಾಸ್ ಸಿಲಿಂಡರ್ ಬುಕ್ ಮಾಡಲು ಹೊಸ ದೂರವಾಣಿ ನಂಬರ್‌ಗಳನ್ನು ಕಂಪನಿ ಪ್ರಕಟಿಸಿದೆ.

LPG Gas Cylinder: ದೇಶದಾದ್ಯಂತ LPG ಗ್ಯಾಸ್ ಸಿಲಿಂಡರ್‌ಗಳ ಬೇಡಿಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಇಂಡೇನ್ ಕಂಪನಿ ಗ್ರಾಹಕರಿಗೆ ಮತ್ತೊಂದು ಸುಲಭ ಸೇವೆಯನ್ನು ಪರಿಚಯಿಸಿದೆ. ಈಗಿನ ಬುಕ್ಕಿಂಗ್ ವಿಧಾನಗಳ ಜೊತೆಗೆ ಹೊಸ ದೂರವಾಣಿ ನಂಬರ್‌ಗಳ ಮೂಲಕವೂ ಸಿಲಿಂಡರ್ ಬುಕ್ ಮಾಡುವ ಅವಕಾಶ ಕಲ್ಪಿಸಲಾಗಿದೆ.
ಇತ್ತೀಚೆಗೆ ಮಧ್ಯಪ್ರಾಚ್ಯದ ಉದ್ವಿಗ್ನತೆ ಹಾಗೂ ಇರಾನ್ ಸಂಬಂಧಿತ ಯುದ್ಧ ಪರಿಸ್ಥಿತಿಗಳ ಕಾರಣದಿಂದ ಭಾರತದಲ್ಲೂ LPG ಸಿಲಿಂಡರ್ ಪೂರೈಕೆ ಕುರಿತು ಕೆಲ ದಿನಗಳಿಂದ ಗೊಂದಲದ ಪರಿಸ್ಥಿತಿ ನಿರ್ಮಾಣವಾಗಿತ್ತು. ಕೆಲ ಪ್ರದೇಶಗಳಲ್ಲಿ ಸಿಲಿಂಡರ್ ಕೊರತೆ ಉಂಟಾಗಿದೆ ಎಂಬ ಮಾತುಗಳು ಹರಿದಾಡಿದವು. ಆದರೆ ಪರಿಸ್ಥಿತಿ ಕ್ರಮೇಣ ನಿಯಂತ್ರಣಕ್ಕೆ ಬರುತ್ತಿದ್ದು, ಗ್ಯಾಸ್ ಕಂಪನಿಗಳು ಸರಬರಾಜು ಮತ್ತು ಬುಕ್ಕಿಂಗ್ ವ್ಯವಸ್ಥೆಯನ್ನು ಸುಧಾರಿಸಲು ಕ್ರಮ ಕೈಗೊಂಡಿವೆ.
ಈ ನಡುವೆ ಕೆಲಡೆ ಡೀಲರ್‌ಗಳು ಮತ್ತು ಸ್ಥಳೀಯ ವ್ಯಾಪಾರಿಗಳು ಕಪ್ಪುಬಜಾರ್ ಮಾಡುವ ಬಗ್ಗೆ ದೂರುಗಳು ಕೇಳಿಬಂದ ಹಿನ್ನೆಲೆ, ಗ್ರಾಹಕರಿಗೆ ನೇರವಾಗಿ ಬುಕ್ಕಿಂಗ್ ಮಾಡಲು ಹೊಸ ಮಾರ್ಗಗಳನ್ನು ಇಂಡೇನ್ ಪರಿಚಯಿಸಿದೆ.
ಇಂಡೇನ್ ಕಂಪನಿ ತಿಳಿಸಿರುವಂತೆ, ಈಗ ಗ್ರಾಹಕರು ಮಿಸ್ಡ್ ಕಾಲ್ ಮೂಲಕವೂ LPG ಸಿಲಿಂಡರ್ ಬುಕ್ ಮಾಡಬಹುದು. ಇದಕ್ಕಾಗಿ ನೀಡಿರುವ ಮಿಸ್ಡ್ ಕಾಲ್ ನಂಬರ್ – 8927225667.
ಇದಲ್ಲದೆ IVRS ನಂಬರ್ – 8391990070 ಗೆ ಕರೆ ಮಾಡಿ ಕೂಡಾ ಸಿಲಿಂಡರ್ ಬುಕ್ಕಿಂಗ್ ಮಾಡಬಹುದಾಗಿದೆ.
ಗಮನಿಸಬೇಕಾದ ವಿಷಯವೆಂದರೆ, ಈಗಾಗಲೇ ಬಳಕೆಯಲ್ಲಿರುವ ಹಳೆಯ ಬುಕ್ಕಿಂಗ್ ನಂಬರ್‌ಗಳು ಸಹ ಮುಂದುವರಿಯುತ್ತವೆ. ಹೊಸ ನಂಬರ್‌ಗಳು ಗ್ರಾಹಕರಿಗೆ ಹೆಚ್ಚುವರಿ ಸೌಲಭ್ಯಕ್ಕಾಗಿ ಮಾತ್ರ ಬಿಡುಗಡೆ ಮಾಡಲಾಗಿದೆ ಎಂದು ಕಂಪನಿ ಸ್ಪಷ್ಟಪಡಿಸಿದೆ.



