ಬ್ಯಾಂಕ್ ಲಾಕರ್ ಬಳಸುವ ಲಕ್ಷಾಂತರ ಗ್ರಾಹಕರಿಗೆ ಸಂಬಂಧಿಸಿದಂತೆ ಮಹತ್ವದ ಮಾಹಿತಿ
Bank Lockers: ಬ್ಯಾಂಕ್ ಲಾಕರ್‌ಗಳಲ್ಲಿ ಇಡುವ ವಸ್ತುಗಳ ಮೌಲ್ಯ ಆಧಾರವಾಗಿ ವಿಮೆ ಸಿಗುವುದಿಲ್ಲ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಲೋಕಸಭೆಯಲ್ಲಿ ತಿಳಿಸಿದ್ದಾರೆ. ಲಾಕರ್ ಹಾನಿಯಾದರೆ ಮಾತ್ರ ನಿಗದಿತ ಪರಿಹಾರ ನೀಡಲಾಗುತ್ತದೆ ಎಂದು ಹೇಳಿದ್ದಾರೆ.

Bank Lockers: ಬ್ಯಾಂಕ್ ಲಾಕರ್‌ಗಳನ್ನು ಬಳಸುವ ಲಕ್ಷಾಂತರ ಗ್ರಾಹಕರಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಮಹತ್ವದ ಮಾಹಿತಿ ನೀಡಿದೆ. ಲೋಕಸಭೆಯಲ್ಲಿ ಕೇಳಲಾದ ಪ್ರಶ್ನೆಗೆ ಉತ್ತರ ನೀಡಿದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಲಾಕರ್‌ಗಳಲ್ಲಿ ಇಡುವ ವಸ್ತುಗಳ ಆಧಾರದಲ್ಲಿ ಪ್ರತ್ಯೇಕ ವಿಮಾ ಕವರೇಜ್ ನೀಡುವುದು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ.
ಅವರ ಮಾತಿನಂತೆ, ಬ್ಯಾಂಕ್‌ಗಳಿಗೆ ಲಾಕರ್‌ಗಳಲ್ಲಿ ಗ್ರಾಹಕರು ಯಾವ ವಸ್ತುಗಳನ್ನು ಇಟ್ಟಿದ್ದಾರೆ ಎಂಬುದನ್ನು ತಿಳಿದುಕೊಳ್ಳುವ ಅಧಿಕಾರವೇ ಇಲ್ಲ. ಅದನ್ನು ಪರಿಶೀಲಿಸುವುದು ಅಥವಾ ದಾಖಲೆ ಮಾಡುವುದು ಬ್ಯಾಂಕಿಂಗ್ ನಿಯಮಗಳಿಗೆ ವಿರುದ್ಧವಾಗಿದೆ.
ವಸ್ತುಗಳ ಮೌಲ್ಯ ಆಧಾರವಾಗಿ ವಿಮೆ ಇಲ್ಲ
ಲಾಕರ್ ಒಳಗೆ ಚಿನ್ನ, ಆಭರಣ, ದಾಖಲೆಗಳು ಅಥವಾ ಇತರ ಮೌಲ್ಯಯುತ ವಸ್ತುಗಳನ್ನು ಇಟ್ಟಿದ್ದರೂ, ಅವುಗಳ ಮೌಲ್ಯ ಆಧಾರವಾಗಿ ಪ್ರತ್ಯೇಕ ವಿಮೆ ನೀಡಲು ಸಾಧ್ಯವಿಲ್ಲ ಎಂದು ಸಚಿವೆ ಸ್ಪಷ್ಟಪಡಿಸಿದರು. ಪ್ರತಿಯೊಬ್ಬ ಗ್ರಾಹಕರ ಲಾಕರ್‌ನಲ್ಲಿ ಏನು ಇದೆ ಎಂಬುದು ಬ್ಯಾಂಕ್‌ಗಳಿಗೆ ತಿಳಿಯದೇ ಇರುವುದರಿಂದ, ಅದರ ಮೌಲ್ಯ ನಿರ್ಧಾರ ಮಾಡುವುದು ಅಸಾಧ್ಯ.
ಈ ಕಾರಣದಿಂದ ಲಾಕರ್ ಒಳಗಿನ ವಸ್ತುಗಳ ಮೌಲ್ಯಕ್ಕೆ ಅನುಗುಣವಾಗಿ ಬೇರೆ ಬೇರೆ ವಿಮಾ ಕವರೇಜ್ ನೀಡುವ ವ್ಯವಸ್ಥೆ ಇಲ್ಲ ಎಂದು ಅವರು ಹೇಳಿದರು.
ಲಾಕರ್ ಹಾನಿಯಾದರೆ ಎಷ್ಟು ಪರಿಹಾರ?
ಬ್ಯಾಂಕ್ ಲಾಕರ್‌ಗೆ ಕಳ್ಳತನ, ಅಗ್ನಿ ಅಥವಾ ಇತರೆ ಕಾರಣಗಳಿಂದ ಹಾನಿ ಉಂಟಾದರೆ ಗ್ರಾಹಕರಿಗೆ ನಿಗದಿತ ಪರಿಹಾರ ಮಾತ್ರ ಸಿಗುತ್ತದೆ. ಪ್ರಸ್ತುತ ನಿಯಮಗಳ ಪ್ರಕಾರ ವಾರ್ಷಿಕ ಲಾಕರ್ ಬಾಡಿಗೆ ಮೊತ್ತದ 100 ಪಟ್ಟು ಪರಿಹಾರ ನೀಡಲಾಗುತ್ತದೆ.
ಅಂದರೆ, ಲಾಕರ್‌ನಲ್ಲಿ ಇಟ್ಟಿರುವ ವಸ್ತುಗಳ ನಿಖರ ಮೌಲ್ಯ ಎಷ್ಟೇ ಇದ್ದರೂ, ಅದಕ್ಕೆ ಅನುಗುಣವಾಗಿ ಬ್ಯಾಂಕ್ ಪರಿಹಾರ ನೀಡುವುದಿಲ್ಲ. ಈಗಿನ ನಿಯಮಗಳಲ್ಲಿ ಯಾವುದೇ ಬದಲಾವಣೆ ಮಾಡುವ ಬಗ್ಗೆ ಸರ್ಕಾರದ ಮಟ್ಟದಲ್ಲಿ ಚರ್ಚೆ ನಡೆಯುತ್ತಿಲ್ಲ ಎಂದು ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.



