ಒಂದು ಬ್ಯಾಂಕ್‌ನಿಂದ ಇನ್ನೊಂದು ಬ್ಯಾಂಕ್‌ಗೆ ಖಾತೆ ಬದಲಾವಣೆ ಸುಲಭ! ಹೊಸ ನಿಯಮ ತರಲು ಸಿದ್ಧತೆ
ಮೊಬೈಲ್ ನಂಬರ್ ಪೋರ್ಟ್ ಮಾಡುವ ರೀತಿಯಲ್ಲಿ ಮುಂದಿನ ದಿನಗಳಲ್ಲಿ ಬ್ಯಾಂಕ್ ಖಾತೆಯನ್ನೂ ಒಂದು ಬ್ಯಾಂಕ್‌ನಿಂದ ಮತ್ತೊಂದು ಬ್ಯಾಂಕ್‌ಗೆ ಬದಲಾಯಿಸುವ ವ್ಯವಸ್ಥೆ ತರಲು RBI ಯೋಚನೆ ನಡೆಸಿದ್ದು, ಗ್ರಾಹಕರಿಗೆ ಬ್ಯಾಂಕಿಂಗ್ ಸೇವೆಗಳು ಇನ್ನಷ್ಟು ಸುಲಭವಾಗುವ ಸಾಧ್ಯತೆ ಇದೆ.

Bank Account Switching System: ಬ್ಯಾಂಕಿಂಗ್ ಸೇವೆಗಳನ್ನು ಇನ್ನಷ್ಟು ಸರಳ ಹಾಗೂ ಗ್ರಾಹಕ ಸ್ನೇಹಿಯಾಗಿಸಲು ಭಾರತೀಯ ರಿಸರ್ವ್ ಬ್ಯಾಂಕ್ (RBI) ಹೊಸ ವ್ಯವಸ್ಥೆಯನ್ನು ರೂಪಿಸಲು ಮುಂದಾಗಿದೆ. ಮೊಬೈಲ್ ಸಿಮ್ ನಂಬರ್ ಪೋರ್ಟ್ ಮಾಡುವ ರೀತಿಯಲ್ಲಿ, ಮುಂದಿನ ದಿನಗಳಲ್ಲಿ ಬ್ಯಾಂಕ್ ಖಾತೆಯನ್ನು ಒಂದು ಬ್ಯಾಂಕ್‌ನಿಂದ ಮತ್ತೊಂದು ಬ್ಯಾಂಕ್‌ಗೆ ಬದಲಾಯಿಸುವ ಅವಕಾಶ ದೊರಕುವ ಸಾಧ್ಯತೆ ಇದೆ.
ಪ್ರಸ್ತುತ ಬಹುತೇಕ ಜನರು ತಮ್ಮ ಬ್ಯಾಂಕ್ ಖಾತೆಗೆ ವೇತನ, EMI, ವಿಮೆ ಪಾವತಿ, ಇತರ ಸ್ವಯಂ ಪಾವತಿಗಳನ್ನು ಲಿಂಕ್ ಮಾಡಿರುತ್ತಾರೆ. ಈ ಕಾರಣದಿಂದ ಬೇರೆ ಬ್ಯಾಂಕ್‌ಗೆ ಖಾತೆ ಬದಲಾಯಿಸಲು ಸಾಕಷ್ಟು ತೊಂದರೆ ಎದುರಾಗುತ್ತದೆ. ಈ ಸಮಸ್ಯೆಯನ್ನು ಪರಿಹರಿಸಲು RBI ಹೊಸ ವ್ಯವಸ್ಥೆ ರೂಪಿಸುವ ಬಗ್ಗೆ ಕಾರ್ಯನಿರ್ವಹಿಸುತ್ತಿದೆ.
‘ಪೇಮೆಂಟ್ಸ್ ಸ್ವಿಚಿಂಗ್ ಸಿಸ್ಟಮ್’ ಮೇಲೆ ಕೆಲಸ
ಗ್ರಾಹಕರಿಗೆ ಸುಲಭವಾಗುವಂತೆ ಪೇಮೆಂಟ್ಸ್ ಸ್ವಿಚಿಂಗ್ ಸಿಸ್ಟಮ್ ಎಂಬ ಹೊಸ ಪ್ಲಾಟ್‌ಫಾರ್ಮ್ ರೂಪಿಸಲು RBI ಯೋಚನೆ ನಡೆಸುತ್ತಿದೆ. ಇದು ಒಂದು ಕೇಂದ್ರಿತ ವ್ಯವಸ್ಥೆಯಾಗಿ ಕಾರ್ಯನಿರ್ವಹಿಸಿ, ವಿವಿಧ ಬ್ಯಾಂಕ್‌ಗಳ ನಡುವೆ ಪಾವತಿಗಳನ್ನು ನಿರ್ವಹಿಸಲು ಸಹಾಯ ಮಾಡಲಿದೆ.
ಈ ವ್ಯವಸ್ಥೆ ಜಾರಿಗೆ ಬಂದರೆ, ಗ್ರಾಹಕರು ತಮ್ಮ ಬ್ಯಾಂಕ್ ಖಾತೆ ಸಂಖ್ಯೆಯನ್ನು ಹಾಗೆಯೇ ಉಳಿಸಿಕೊಂಡು, ಬೇಕಾದರೆ ಬ್ಯಾಂಕ್ ಮಾತ್ರ ಬದಲಾಯಿಸಬಹುದು. ಇದರಿಂದ ಹಣಕಾಸು ವ್ಯವಹಾರಗಳಲ್ಲಿ ಯಾವುದೇ ಅಡಚಣೆ ಇಲ್ಲದೆ ಬ್ಯಾಂಕ್ ಸೇವೆ ಪಡೆಯಲು ಸಾಧ್ಯವಾಗಲಿದೆ.
ಅಂತಾರಾಷ್ಟ್ರೀಯ ಪಾವತಿಗಳಿಗೂ ವೇಗ
ಇದಕ್ಕು ಜೊತೆಗೆ RBI Payments Vision 2028 ಎಂಬ ಹೊಸ ರೋಡ್‌ಮ್ಯಾಪ್ ಬಿಡುಗಡೆ ಮಾಡಿದೆ. ಇದರ ಭಾಗವಾಗಿ ಅಂತಾರಾಷ್ಟ್ರೀಯ ಹಣ ವರ್ಗಾವಣೆ ವ್ಯವಸ್ಥೆಯನ್ನು ಕೂಡ ಸುಧಾರಿಸುವ ಯೋಜನೆ ಇದೆ.
ವಿದೇಶಿ ಪಾವತಿಗಳಲ್ಲಿ ಇರುವ ತಾಂತ್ರಿಕ ಹಾಗೂ ನಿಯಂತ್ರಣ ಅಡೆತಡೆಗಳನ್ನು ಕಡಿಮೆ ಮಾಡಿ, ವ್ಯವಹಾರಗಳನ್ನು ವೇಗವಾಗಿ ಹಾಗೂ ಪಾರದರ್ಶಕವಾಗಿ ನಡೆಸುವ ಉದ್ದೇಶ ಇದೆ. ವಿಶೇಷವಾಗಿ ವ್ಯಾಪಾರಿಗಳು ಹಾಗೂ NRI ಗ್ರಾಹಕರಿಗೆ ಇದು ಹೆಚ್ಚಿನ ಪ್ರಯೋಜನ ತರಬಹುದು.
ಒಟ್ಟಿನಲ್ಲಿ, ಈ ಹೊಸ ವ್ಯವಸ್ಥೆಗಳು ಜಾರಿಗೆ ಬಂದರೆ ಬ್ಯಾಂಕಿಂಗ್ ಕ್ಷೇತ್ರದಲ್ಲಿ ದೊಡ್ಡ ಬದಲಾವಣೆ ಕಾಣಬಹುದು. ಗ್ರಾಹಕರು ಸುಲಭವಾಗಿ ಬ್ಯಾಂಕ್ ಬದಲಾಯಿಸುವ ಅವಕಾಶ ಪಡೆಯುವ ಸಾಧ್ಯತೆ ಇದೆ.



