10 ರೂಪಾಯಿ ನೋಟುಗಳು ಇನ್ಮುಂದೆ ಇರಲ್ವಾ? ಹಾಗಾದ್ರೆ ಆರ್ಬಿಐ ಸ್ಪಷ್ಟನೆ ಏನು?
ದೈನಂದಿನ ವ್ಯವಹಾರಗಳಲ್ಲಿ ಬಹಳ ಅಗತ್ಯವಾದ ₹10 ರೂಪಾಯಿ ನೋಟುಗಳ ಭವಿಷ್ಯ ಕುರಿತು ಚರ್ಚೆ ಜೋರಾಗಿದೆ. ನೋಟುಗಳ ಬದಲು ₹10 ರೂಪಾಯಿ ನಾಣ್ಯಗಳಿಗೆ ಆರ್ಬಿಐ ಹೆಚ್ಚು ಒತ್ತು ನೀಡುತ್ತಿರುವುದು ಗಮನ ಸೆಳೆಯುತ್ತಿದೆ.
Image Source: Ai Generated
- 10 ರೂಪಾಯಿ ನೋಟುಗಳ ಭವಿಷ್ಯ ಕುರಿತು ಜನರಲ್ಲಿ ಗೊಂದಲ
- 10 ರೂಪಾಯಿ ನಾಣ್ಯಗಳ ಕುರಿತು ಆರ್ಬಿಐ ಸ್ಪಷ್ಟನೆ
- ನೋಟು–ನಾಣ್ಯ ವೆಚ್ಚ ವ್ಯತ್ಯಾಸ ಆರ್ಬಿಐ ನಿರ್ಧಾರಕ್ಕೆ ಕಾರಣ
ಬೆಳಗಿನ ಹಾಲು ಖರೀದಿಯಿಂದ ಹಿಡಿದು ಕಿರಾಣಿ ಅಂಗಡಿ, ತರಕಾರಿ ಮಾರುಕಟ್ಟೆ, ಬಸ್ ಹಾಗೂ ಆಟೋ ಪ್ರಯಾಣದವರೆಗೆ ₹10 ರೂಪಾಯಿ ನೋಟುಗಳ ಬಳಕೆ ಅಪಾರ. ಸಣ್ಣ ಮೊತ್ತದ ವ್ಯವಹಾರಗಳಿಗೆ ಈ ನೋಟುಗಳು ಜನರ ಬದುಕಿನ ಅವಿಭಾಜ್ಯ ಭಾಗವಾಗಿವೆ. ಆದರೆ ಇತ್ತೀಚೆಗೆ ₹10 ರೂಪಾಯಿ ನೋಟುಗಳು ಕಡಿಮೆಯಾಗುತ್ತಿರುವ ಅನುಭವ ಬಹುತೇಕರಿಗೆ ಆಗುತ್ತಿದೆ.
10 ರೂಪಾಯಿ ನಾಣ್ಯಗಳತ್ತ ಏಕೆ ಆರ್ಬಿಐ ಒಲವು?
₹10 ರೂಪಾಯಿ ನೋಟುಗಳನ್ನು ಮುದ್ರಿಸುವ ವೆಚ್ಚ ಕಡಿಮೆಯಾದರೂ, ಅವುಗಳ ಆಯುಷ್ಯ ಬಹಳ ಕಡಿಮೆ. ವರದಿಗಳ ಪ್ರಕಾರ, ಸಾವಿರ ₹10 ರೂಪಾಯಿ ನೋಟುಗಳನ್ನು ಮುದ್ರಿಸಲು ಆರ್ಬಿಐಗೆ ಸುಮಾರು ₹966 ಖರ್ಚಾಗುತ್ತದೆ. ಆದರೆ ಈ ನೋಟುಗಳು ಒಂದು ವರ್ಷಕ್ಕೂ ಮೊದಲು ಹರಿದು ಹೋಗುವ ಸಾಧ್ಯತೆ ಹೆಚ್ಚು.
ಇದಕ್ಕೆ ಹೋಲಿಸಿದರೆ, ₹10 ರೂಪಾಯಿ ನಾಣ್ಯ ತಯಾರಿಕೆಗೆ ಪ್ರತಿ ನಾಣ್ಯಕ್ಕೆ ಸುಮಾರು ₹5.54 ವೆಚ್ಚವಾಗುತ್ತದೆ. ಆದರೆ ಅವು ಹಲವು ವರ್ಷಗಳ ಕಾಲ ಹಾಳಾಗದೆ ಬಳಕೆಗೆ ಲಭ್ಯವಿರುತ್ತವೆ. ಇದೇ ಕಾರಣಕ್ಕೆ ಆರ್ಬಿಐ ನೋಟುಗಳಿಗಿಂತ ನಾಣ್ಯಗಳತ್ತ ಹೆಚ್ಚು ಗಮನ ಹರಿಸುತ್ತಿದೆ ಎನ್ನಲಾಗುತ್ತಿದೆ.
ಇದನ್ನೂ ಓದಿ: 2026ರಲ್ಲಿ ಸ್ವಂತ ಮನೆ ಮಾಡಿಕೊಳ್ಳುವ ಕನಸಾ? ಹಾಗಾದ್ರೆ, ಹೋಮ್ ಲೋನ್ ಬೆಸ್ಟ್ ಆಪ್ಷನ್ ಇದು
10 ರೂಪಾಯಿ ನಾಣ್ಯಗಳು ಚಲಾವಣೆಯಲ್ಲಿಲ್ಲ ಅನ್ನೋದು ಸುಳ್ಳು
₹10 ರೂಪಾಯಿ ನಾಣ್ಯಗಳು ಮಾನ್ಯವಲ್ಲ ಎಂಬ ವದಂತಿಗಳು ಕಳೆದ ಕೆಲವು ವರ್ಷಗಳಿಂದ ಹರಡಿವೆ. ಇದರಿಂದ ಅನೇಕರು ನಾಣ್ಯಗಳನ್ನು ಸ್ವೀಕರಿಸಲು ನಿರಾಕರಿಸುತ್ತಿದ್ದರು. ಈ ಹಿನ್ನೆಲೆಯಲ್ಲಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಸ್ಪಷ್ಟನೆ ನೀಡಿ, ₹10 ರೂಪಾಯಿ ನಾಣ್ಯಗಳು ಸಂಪೂರ್ಣವಾಗಿ ಕಾನೂನುಬದ್ಧ ಎಂದು ಹೇಳಿದೆ.
₹10 ರೂಪಾಯಿ ನಾಣ್ಯಗಳನ್ನು ತೆಗೆದುಕೊಳ್ಳಲು ಯಾರಾದರೂ ನಿರಾಕರಿಸಿದರೆ, ಬ್ಯಾಂಕ್ ಅಥವಾ ಸಂಬಂಧಿತ ಅಧಿಕಾರಿಗಳಿಗೆ ದೂರು ನೀಡಬಹುದೆಂದು ಆರ್ಬಿಐ ತಿಳಿಸಿದೆ. ಈ ಕುರಿತು ಬ್ಯಾಂಕ್ಗಳಲ್ಲಿ ಹಾಗೂ ಸಾಮಾಜಿಕ ಮಾಧ್ಯಮಗಳಲ್ಲಿ ಸಹ ಮಾಹಿತಿ ಹಂಚಲಾಗಿದೆ.
ಇದನ್ನೂ ಓದಿ: 75 ಸಾವಿರ ಬೆಲೆಯ ಈ ಸ್ಕೂಟರ್ ದಾಖಲೆ ಮಾರಾಟ, ಜೂಪಿಟರ್, ಆಕ್ಸೆಸ್ಗೂ ಗಟ್ಟಿ ಪೈಪೋಟಿ
ಮಾರುಕಟ್ಟೆಯಲ್ಲಿ ಈಗಿನ ಸ್ಥಿತಿ ಹೇಗಿದೆ?
ಹಳೆಯ ಹಾಗೂ ಹೊಸ ಮಾದರಿಯ ₹10 ರೂಪಾಯಿ ನಾಣ್ಯಗಳನ್ನು ಆರ್ಬಿಐ ನಿರಂತರವಾಗಿ ಬಿಡುಗಡೆ ಮಾಡುತ್ತಿದೆ. ₹10 ರೂಪಾಯಿ ನೋಟುಗಳ ಲಭ್ಯತೆ ಕಡಿಮೆಯಾಗುತ್ತಿರುವ ಹಿನ್ನೆಲೆ, ಈಗ ಮಾರುಕಟ್ಟೆಯಲ್ಲಿ ನಾಣ್ಯಗಳ ಸ್ವೀಕಾರ ನಿಧಾನವಾಗಿ ಹೆಚ್ಚುತ್ತಿದೆ. ಜನರಲ್ಲಿ ಅರಿವು ಹೆಚ್ಚಾಗುತ್ತಿರುವುದರಿಂದ, ₹10 ರೂ ನಾಣ್ಯಗಳ ಬಗ್ಗೆ ಇದ್ದ ಗೊಂದಲ ಕ್ರಮೇಣ ಕಡಿಮೆಯಾಗುತ್ತಿದೆ ಎಂದು ವ್ಯಾಪಾರಿಗಳು ಹೇಳುತ್ತಾರೆ.



