ಜೊಮಾಟೊ ಪ್ಲಾಟ್‌ಫಾರ್ಮ್ ಫೀ ಹೆಚ್ಚಳ: ಫುಡ್ ಆರ್ಡರ್ ಈಗ ಇನ್ನಷ್ಟು ದುಬಾರಿ

Zomato platform fee: ಜೊಮಾಟೊ ತನ್ನ ಪ್ಲಾಟ್‌ಫಾರ್ಮ್ ಶುಲ್ಕವನ್ನು 12.50 ರೂನಿಂದ 14.90 ರೂಗೆ ಹೆಚ್ಚಿಸಿದ್ದು, ಪ್ರತಿಯೊಂದು ಫುಡ್ ಆರ್ಡರ್ ಮೇಲೂ ಈ ಶುಲ್ಕ ಅನ್ವಯವಾಗಲಿದೆ. ಇದರಿಂದ ಗ್ರಾಹಕರಿಗೆ ಫುಡ್ ಡೆಲಿವರಿ ಮತ್ತಷ್ಟು ದುಬಾರಿಯಾಗಲಿದೆ.

Zomato platform fee: ಆನ್‌ಲೈನ್ ಫುಡ್ ಡೆಲಿವರಿ ಸೇವೆ ಬಳಸುವ ಗ್ರಾಹಕರಿಗೆ ಮತ್ತೊಂದು ದರ ಏರಿಕೆಯ ಶಾಕ್ ಎದುರಾಗಿದೆ. ಫುಡ್ ಡೆಲಿವರಿ ಕಂಪನಿಯಾದ ಜೊಮಾಟೊ ತನ್ನ ಪ್ಲಾಟ್‌ಫಾರ್ಮ್ ಫೀ ಅನ್ನು ಮತ್ತೆ ಹೆಚ್ಚಿಸಿದ್ದು, ಇದೀಗ 12.50 ರೂ ಇದ್ದ ಶುಲ್ಕವನ್ನು 14.90 ರೂಗೆ ಏರಿಸಲಾಗಿದೆ.

ಈ ಹೊಸ ದರ ಪ್ರಕಾರ ಪ್ರತಿಯೊಬ್ಬ ಗ್ರಾಹಕ ನೀಡುವ ಪ್ರತಿಯೊಂದು ಆರ್ಡರ್ ಮೇಲೂ ಪ್ಲಾಟ್‌ಫಾರ್ಮ್ ಶುಲ್ಕ ಅನ್ವಯವಾಗಲಿದೆ. ಒಟ್ಟು 2.40 ರೂ ಹೆಚ್ಚಳವಾಗಿದ್ದು, ಇದು ಸುಮಾರು 19 ಶೇಕಡಾ ಏರಿಕೆಗೆ ಸಮಾನವಾಗಿದೆ.

ಒಂದು ವರ್ಷದೊಳಗೆ ಎರಡನೇ ಬಾರಿ ದರ ಏರಿಕೆ

ಜೊಮಾಟೊ ಕಳೆದ ಒಂದು ವರ್ಷದೊಳಗೆ ಎರಡನೇ ಬಾರಿ ಪ್ಲಾಟ್‌ಫಾರ್ಮ್ ಶುಲ್ಕವನ್ನು ಹೆಚ್ಚಿಸಿದೆ. 2025ರ ಸೆಪ್ಟೆಂಬರ್ ತಿಂಗಳಲ್ಲಿ ಕೂಡ ಇದೇ ರೀತಿಯ ಹೆಚ್ಚಳ ಮಾಡಲಾಗಿತ್ತು. ಈಗ ಮತ್ತೆ ದರ ಏರಿಕೆಯಾಗಿರುವುದು ಗ್ರಾಹಕರಿಗೆ ಹೆಚ್ಚುವರಿ ಹೊರೆ ತಂದಿದೆ.

ಈ ಪ್ಲಾಟ್‌ಫಾರ್ಮ್ ಫೀ ಮೇಲೆ ಜಿಎಸ್‌ಟಿ ಕೂಡ ಅನ್ವಯವಾಗುವುದರಿಂದ ಒಟ್ಟು ವೆಚ್ಚ ಇನ್ನಷ್ಟು ಹೆಚ್ಚಾಗುತ್ತದೆ. ಇತ್ತೀಚೆಗೆ ಅನೇಕ ಅಗತ್ಯ ವಸ್ತುಗಳ ಬೆಲೆ ಏರಿಕೆಯ ನಡುವೆ ಫುಡ್ ಡೆಲಿವರಿ ಸೇವೆಯಲ್ಲೂ ದರ ಹೆಚ್ಚಳವಾಗಿರುವುದು ಗ್ರಾಹಕರ ಗಮನ ಸೆಳೆಯುತ್ತಿದೆ.

ಇತರ ಫುಡ್ ಡೆಲಿವರಿ ಆ್ಯಪ್‌ಗಳಲ್ಲಿ ಶುಲ್ಕ ಎಷ್ಟು?

ಭಾರತದಲ್ಲಿ ಎರಡನೇ ದೊಡ್ಡ ಫುಡ್ ಡೆಲಿವರಿ ಆ್ಯಪ್ ಆಗಿರುವ ಸ್ವಿಗ್ಗಿ ತನ್ನ ಪ್ಲಾಟ್‌ಫಾರ್ಮ್ ಫೀ ಅನ್ನು ಸುಮಾರು 14.99 ರೂ ಎಂದು ನಿಗದಿಪಡಿಸಿದೆ.

ಇನ್ನೊಂದು ಆ್ಯಪ್ ಆಗಿರುವ ಮ್ಯಾಜಿಕ್‌ಪಿನ್‌ನಲ್ಲಿ ಈ ಶುಲ್ಕ ಸುಮಾರು 14.20 ರೂ ಇದೆ. ಹೀಗಾಗಿ ಸ್ವಿಗ್ಗಿ ಮತ್ತು ಜೊಮಾಟೊ ನಡುವೆ ಬಹುತೇಕ ಸಮಾನ ಪ್ಲಾಟ್‌ಫಾರ್ಮ್ ಶುಲ್ಕ ಕಂಡುಬರುತ್ತಿದ್ದು, ಮ್ಯಾಜಿಕ್‌ಪಿನ್ ಸ್ವಲ್ಪ ಕಡಿಮೆ ದರ ವಿಧಿಸುತ್ತಿದೆ.

ಫುಡ್ ಡೆಲಿವರಿ ಆ್ಯಪ್‌ಗಳಲ್ಲಿ ಗ್ರಾಹಕರು ಪಾವತಿಸುವ ಶುಲ್ಕಗಳು

ಒಂದು ಫುಡ್ ಆರ್ಡರ್ ಮಾಡುವಾಗ ಗ್ರಾಹಕರು ಕೇವಲ ಆಹಾರದ ಬೆಲೆಯನ್ನು ಮಾತ್ರ ಪಾವತಿಸುವುದಿಲ್ಲ. ಆರ್ಡರ್ ಮೇಲೆ ಹಲವು ರೀತಿಯ ಶುಲ್ಕಗಳು ಸೇರಿಕೊಳ್ಳುತ್ತವೆ.

ಸಾಮಾನ್ಯವಾಗಿ ಪ್ಲಾಟ್‌ಫಾರ್ಮ್ ಫೀ, ಡೆಲಿವರಿ ಪಾರ್ಟ್ನರ್ ಶುಲ್ಕ, ಜಿಎಸ್‌ಟಿ ಮತ್ತು ರೆಸ್ಟೋರೆಂಟ್ ಪ್ಯಾಕಿಂಗ್ ಚಾರ್ಜಸ್ ಸೇರಿ ಹಲವು ವಿಧದ ಶುಲ್ಕಗಳನ್ನು ಗ್ರಾಹಕರಿಂದ ವಸೂಲಿ ಮಾಡಲಾಗುತ್ತದೆ. ಕೆಲ ಸಂದರ್ಭಗಳಲ್ಲಿ ಸರ್ಜಿಂಗ್ ಪ್ರೈಸ್ ಎಂಬ ಹೆಚ್ಚುವರಿ ಶುಲ್ಕವೂ ವಿಧಿಸಲಾಗುತ್ತದೆ.

ಇದರ ಜೊತೆಗೆ ಜೊಮಾಟೊ ಸಂಸ್ಥೆ “Feeding India” ಯೋಜನೆಗೆ ದೇಣಿಗೆ ರೂಪದಲ್ಲಿ ಪ್ರತಿಯೊಂದು ಆರ್ಡರ್‌ಗೆ ಸುಮಾರು 4 ರೂ ಸಂಗ್ರಹಿಸುವ ವ್ಯವಸ್ಥೆಯನ್ನೂ ಹೊಂದಿದೆ.

ಆ್ಯಪ್ ಮೂಲಕ ಆರ್ಡರ್ ಮಾಡಿದರೆ ವೆಚ್ಚ ಹೆಚ್ಚು ಏಕೆ?

ಫುಡ್ ಡೆಲಿವರಿ ಆ್ಯಪ್‌ಗಳು ಕೇವಲ ಗ್ರಾಹಕರಿಂದ ಮಾತ್ರವಲ್ಲ, ರೆಸ್ಟೋರೆಂಟ್‌ಗಳಿಂದಲೂ ಕಮಿಷನ್ ಶುಲ್ಕವನ್ನು ಪಡೆಯುತ್ತವೆ. ಕೆಲ ಸಂದರ್ಭಗಳಲ್ಲಿ ಈ ಕಮಿಷನ್ ಶೇ.30 ಕ್ಕಿಂತಲೂ ಹೆಚ್ಚಾಗಿರುತ್ತದೆ.

ಉದಾಹರಣೆಗೆ, ನೀವು ರೆಸ್ಟೋರೆಂಟ್‌ಗೆ ಹೋಗಿ 250 ರೂ ಬೆಲೆಯ ತಿಂಡಿಯನ್ನು ಪ್ಯಾಕ್ ಮಾಡಿಸಿಕೊಂಡರೆ ಅಷ್ಟೇ ವೆಚ್ಚವಾಗಬಹುದು. ಆದರೆ ಅದೇ ಆಹಾರವನ್ನು ಆ್ಯಪ್ ಮೂಲಕ ಮನೆಗೆ ಆರ್ಡರ್ ಮಾಡಿದರೆ ವಿವಿಧ ಶುಲ್ಕಗಳು ಸೇರಿ 350 ರೂ ಗಿಂತಲೂ ಹೆಚ್ಚು ವೆಚ್ಚವಾಗುವ ಸಾಧ್ಯತೆ ಇದೆ.

Related Stories