ಸೇನಾ ಶಿಬಿರದ ಮೇಲೆ ಆತ್ಮಾಹುತಿ ದಾಳಿ, ಮೂವರು ಯೋಧರ ಸಾವು

ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರರು ದಾಳಿ ನಡೆಸಿದ್ದಾರೆ. ರಾಜೌರಿಯಲ್ಲಿರುವ ಸೇನಾ ನೆಲೆ ಶಿಬಿರದ ಮೇಲೆ ಉಗ್ರರು ಆತ್ಮಾಹುತಿ ದಾಳಿ ನಡೆಸಿದ್ದಾರೆ.

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರರು ದಾಳಿ ನಡೆಸಿದ್ದಾರೆ. ರಾಜೌರಿಯಲ್ಲಿರುವ ಸೇನಾ ನೆಲೆ ಶಿಬಿರದ ಮೇಲೆ ಉಗ್ರರು ಆತ್ಮಾಹುತಿ ದಾಳಿ ನಡೆಸಿದ್ದಾರೆ. ಪರಿಣಾಮ ಮೂವರು ಯೋಧರು ಹುತಾತ್ಮರಾಗಿದ್ದಾರೆ. ಇತರ ಐವರು ಯೋಧರು ಗಾಯಗೊಂಡಿದ್ದಾರೆ. ಇಬ್ಬರು ಬಂದೂಕುಧಾರಿಗಳು ಸಾವನ್ನಪ್ಪಿದ್ದಾರೆ. ಭಯೋತ್ಪಾದಕರು ರಾಜೌರಿಯಿಂದ 25 ಕಿಮೀ ದೂರದಲ್ಲಿರುವ ದರ್ಹಾಲ್ ಪ್ರದೇಶದ ಪರ್ಗಲ್‌ನಲ್ಲಿರುವ ಸೇನಾ ಶಿಬಿರವನ್ನು ಗುರಿಯಾಗಿಸಿಕೊಂಡಿದ್ದಾರೆ.

ಗುರುವಾರ ಮುಂಜಾನೆ ಉಗ್ರರು ಸೇನಾ ಶಿಬಿರದ ಬೇಲಿಯನ್ನು ದಾಟಿ ಒಳಗೆ ಪ್ರವೇಶಿಸಲು ಯತ್ನಿಸಿದರು. ಇದರಿಂದ ಎಚ್ಚೆತ್ತ ಭದ್ರತಾ ಸಿಬ್ಬಂದಿ ಅವರ ಮೇಲೆ ಗುಂಡು ಹಾರಿಸಿದ್ದಾರೆ. ಎರಡು ಬಣಗಳ ನಡುವೆ ನಡೆದ ಘರ್ಷಣೆಯಲ್ಲಿ ಮೂವರು ಯೋಧರು ಹುತಾತ್ಮರಾಗಿದ್ದಾರೆ. ಇಬ್ಬರು ಉಗ್ರರು ಹತರಾಗಿದ್ದಾರೆ. ಬೇಸ್ ಕ್ಯಾಂಪ್ ಸುತ್ತಮುತ್ತ ಬೇರೆಯವರಿರುವ ಶಂಕೆ ವ್ಯಕ್ತವಾಗಿದ್ದು, ಭದ್ರತಾ ಸಿಬ್ಬಂದಿ ವ್ಯಾಪಕ ತಪಾಸಣೆ ನಡೆಸುತ್ತಿದ್ದಾರೆ.