Noida Boy Balcony Fall | ಅಪಾರ್ಟ್‌ಮೆಂಟ್‌ನ 4ನೇ ಮಹಡಿಯಿಂದ ಬಿದ್ದ 6 ವರ್ಷದ ಬಾಲಕ; ಸಿಸಿಟಿವಿ ದೃಶ್ಯ ವೈರಲ್
Noida Boy Balcony Fall: ಅಪಾರ್ಟ್‌ಮೆಂಟ್‌ನ ನಾಲ್ಕನೇ ಮಹಡಿಯಿಂದ ಕೆಳಗೆ ಬಿದ್ದ ಆರು ವರ್ಷದ ಬಾಲಕ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಎರಡನೇ ಮಹಡಿಯ ಚಾವಣಿಯ ಮೇಲೆ ಬಿದ್ದ ಬಾಲಕನ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

- 4ನೇ ಮಹಡಿಯಿಂದ ಕೆಳಗೆ ಬಿದ್ದ ಬಾಲಕ
- 2ನೇ ಮಹಡಿಯ ಚಾವಣಿಯ ಮೇಲೆ ಬಿದ್ದು ಪಾರು
- ಸಿಸಿಟಿವಿಯಲ್ಲಿ ಸೆರೆಯಾದ ಆಘಾತಕಾರಿ ದೃಶ್ಯ
ನೋಯ್ಡಾ: ಬಹುಮಹಡಿ ಕಟ್ಟಡಗಳಲ್ಲಿ ಮಕ್ಕಳ ಸುರಕ್ಷತೆ ಎಷ್ಟು ಮುಖ್ಯ ಎಂಬುದನ್ನು ನೆನಪಿಸುವ ಆಘಾತಕಾರಿ ಘಟನೆ ಉತ್ತರ ಪ್ರದೇಶದ ನೋಯ್ಡಾದಲ್ಲಿ ನಡೆದಿದೆ. ನಾಲ್ಕನೇ ಮಹಡಿಯ ಬಾಲ್ಕನಿಯಿಂದ ಕೆಳಗೆ ಬಿದ್ದ ಆರು ವರ್ಷದ ಬಾಲಕ ಅದೃಷ್ಟವಶಾತ್ ಯಾವುದೇ ಗಾಯಗಳಿಲ್ಲದೆ ಬದುಕುಳಿದಿದ್ದಾನೆ. ಈ ಘಟನೆಯ ದೃಶ್ಯ ಅಪಾರ್ಟ್‌ಮೆಂಟ್‌ನ ಸಿಸಿಟಿವಿ (CCTV) ಕ್ಯಾಮೆರಾದಲ್ಲಿ ದಾಖಲಾಗಿದೆ.
ಸೆಕ್ಟರ್ 82ರ ಗ್ರೀನ್ ವ್ಯೂ ಅಪಾರ್ಟ್‌ಮೆಂಟ್‌ನಲ್ಲಿ ಶುಕ್ರವಾರ ಸಂಜೆ ಸುಮಾರು 6 ಗಂಟೆಗೆ ಈ ಘಟನೆ ಸಂಭವಿಸಿದೆ. ಬಾಲ್ಕನಿಯಲ್ಲಿ ನಿಂತಿದ್ದ ಬಾಲಕ ಏಕಾಏಕಿ ಆಯತಪ್ಪಿ ಕೆಳಗೆ ಬಿದ್ದಿದ್ದಾನೆ. ಆದರೆ ಆತ ನೇರವಾಗಿ ನೆಲಕ್ಕೆ ಅಪ್ಪಳಿಸದೆ, ಎರಡನೇ ಮಹಡಿಯ ಫ್ಲ್ಯಾಟ್‌ನ ಸಿಮೆಂಟ್ ಚಾವಣಿಯ ಮೇಲೆ ಬಿದ್ದಿದ್ದಾನೆ.
ಬಾಲಕ ಕೆಳಗೆ ಬಿದ್ದ ಶಬ್ದ ಕೇಳುತ್ತಿದ್ದಂತೆ ಅಪಾರ್ಟ್‌ಮೆಂಟ್ ನಿವಾಸಿಗಳು ಸ್ಥಳಕ್ಕೆ ಧಾವಿಸಿದ್ದಾರೆ. ಅಲ್ಲಿ ಕಂಡ ದೃಶ್ಯ ಅವರನ್ನು ಮತ್ತಷ್ಟು ಅಚ್ಚರಿಗೊಳಿಸಿದೆ. ಚಾವಣಿಯ ಮೇಲೆ ಬಿದ್ದಿದ್ದ ಬಾಲಕ ಸ್ವತಃ ಎದ್ದು ಕೆಳಗೆ ಇಳಿಯಲು ಪ್ರಯತ್ನಿಸುತ್ತಿದ್ದ ಎನ್ನಲಾಗಿದೆ. ಬಳಿಕ ಆತನನ್ನು ಪರಿಶೀಲಿಸಿದಾಗ ಯಾವುದೇ ಗಾಯಗಳು ಕಂಡುಬಂದಿಲ್ಲ ಎಂದು ತಿಳಿದುಬಂದಿದೆ.
नोएडा के सेक्टर-82 स्थित ग्रीन व्यू अपार्टमेंट में चौथी मंजिल से गिरा छह साल का बच्चा, उठ खड़ा हुआ! https://t.co/r9yjDRLDU7
— Kamal Sharma (@kamalsharma87) November 29, 2026
ಇನ್ನು ಘಟನೆ ನಡೆದ ಸಮಯದಲ್ಲಿ ಬಾಲಕ ಮನೆಯಲ್ಲಿ ಒಬ್ಬನೇ ಇದ್ದ ಎಂಬ ಮಾಹಿತಿ ಸ್ಥಳೀಯರಿಂದ ಲಭ್ಯವಾಗಿದೆ. ಬಾಲಕನ ತಂದೆ ವಿದೇಶದಲ್ಲಿ ಕೆಲಸ ಮಾಡುತ್ತಿದ್ದು, ಪೋಷಕರು ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ ಎನ್ನಲಾಗಿದೆ. ಬಾಲಕ ತನ್ನ ಅಜ್ಜಿಯೊಂದಿಗೆ ನೆಲೆಸಿದ್ದ. ಘಟನೆ ನಡೆದಾಗ ಅಜ್ಜಿ ಮಾರುಕಟ್ಟೆಗೆ ತೆರಳಿದ್ದರಿಂದ ಮನೆಯಲ್ಲಿ ಯಾರೂ ಇರಲಿಲ್ಲ ಎಂದು ಸ್ಥಳೀಯರು ತಿಳಿಸಿದ್ದಾರೆ.
ಈ ಘಟನೆಯ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ (Social Media) ವ್ಯಾಪಕವಾಗಿ ಹರಿದಾಡುತ್ತಿದೆ. ನಾಲ್ಕನೇ ಮಹಡಿಯಿಂದ ಬಿದ್ದರೂ ಬಾಲಕ ಸುರಕ್ಷಿತವಾಗಿ ಪಾರಾಗಿರುವುದು ಹಲವರಲ್ಲಿ ಅಚ್ಚರಿ ಮೂಡಿಸಿದೆ.
ಆದರೆ ಈ ಘಟನೆ ಅಪಾರ್ಟ್‌ಮೆಂಟ್‌ಗಳಲ್ಲಿ ಮಕ್ಕಳ ಸುರಕ್ಷತೆಯ ಬಗ್ಗೆ ಮತ್ತೊಮ್ಮೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಬಾಲ್ಕನಿಗಳಲ್ಲಿ ಸುರಕ್ಷತಾ ಜಾಲ, ಗ್ರಿಲ್ ಹಾಗೂ ಮಕ್ಕಳಿಗೆ ಅಪಾಯವಾಗದಂತಹ ವ್ಯವಸ್ಥೆಗಳನ್ನು ಅಳವಡಿಸುವ ಅಗತ್ಯವಿದೆ ಎಂಬ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ.




