ಆಸ್ಪತ್ರೆಗೆ ನುಗ್ಗಿ ಮನಬಂದಂತೆ ಹಲ್ಲೆ, ಮೂವರ ಸಾವು, ಆರು ಮಂದಿಗೆ ಗಾಯ
ಅರುಣಾಚಲ ಪ್ರದೇಶದ (Arunachal Pradesh) ಪೂರ್ವ ಕಮೆಂಗ್ ಜಿಲ್ಲೆಯ ಎಸ್ ಇಪಿಎ ಆಸ್ಪತ್ರೆಗೆ (SEPA Hospital) ವ್ಯಕ್ತಿಯೊಬ್ಬ ನುಗ್ಗಿ ಅಲ್ಲಿದ್ದವರ ಮೇಲೆ ಮನಬಂದಂತೆ ಹಲ್ಲೆ ನಡೆಸಿದ್ದರಿಂದ ಸ್ವಲ್ಪ ಕಾಲ ಉದ್ವಿಗ್ನ ಪರಿಸ್ಥಿತಿ ಉಂಟಾಗಿತ್ತು.
ಸಿಕ್ಕಿರುವ ಮಾಹಿತಿ ಪ್ರಕಾರ ಈ ದಾಳಿಯಲ್ಲಿ ಮೂವರು ಸಾವನ್ನಪ್ಪಿದ್ದಾರೆ. ಅಲ್ಲದೆ ಆರು ಮಂದಿ ಗಾಯಗೊಂಡಿದ್ದಾರೆ. ಮೃತರಲ್ಲಿ ದಾಳಿಕೋರನ ಪತ್ನಿ ಹಾಗೂ ಆತನ ಎರಡು ವರ್ಷದ ಮಗಳೂ ಸೇರಿದ್ದಾರೆ.
ಘಟನೆಯ ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಧಾವಿಸಿ ತನಿಖೆ ಆರಂಭಿಸಿದ್ದಾರೆ. ಗಾಯಗೊಂಡ ಆರು ಮಂದಿಯಲ್ಲಿ ಒಬ್ಬ ಪೊಲೀಸ್ ಸಿಬ್ಬಂದಿ ಸೇರಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಪೂರ್ವ ಕಮೆಂಗ್ ಜಿಲ್ಲಾ (East Kameng District) ಪೊಲೀಸ್ ವರಿಷ್ಠಾಧಿಕಾರಿ ಕೆ ಸಿಕೋಮ್ ಮಾತನಾಡಿ, ನಿಕಮ್ ಸಂಗ್ಬಿಯಾ ಎಂಬ ವ್ಯಕ್ತಿ ಬೆಳಿಗ್ಗೆ 11.30 ರ ಸುಮಾರಿಗೆ ಸೆಪಾ ಸಿವಿಲ್ ಆಸ್ಪತ್ರೆಗೆ ಪ್ರವೇಶಿಸಿ ಜನರ ಮೇಲೆ ಮನಬಂದಂತೆ ದಾಳಿ ಮಾಡಲು ಪ್ರಾರಂಭಿಸಿದನು.
ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ತನ್ನ ಸಹೋದರಿಯ ಮೇಲೆ ಮೊದಲು ಹಲ್ಲೆ ನಡೆಸಿದ ದುಷ್ಕರ್ಮಿ, ನಂತರ ಇತರರ ಮೇಲೆ ಹಲ್ಲೆ ನಡೆಸಿದ್ದಾನೆ ಎಂದು ಎಸ್ಪಿ ತಿಳಿಸಿದ್ದಾರೆ.
ಹತ್ಯೆಗೀಡಾದವರಲ್ಲಿ ದಾಳಿಕೋರನ ಪತ್ನಿ, ಮಗಳು ಮತ್ತು ಇನ್ನೊಬ್ಬ ವ್ಯಕ್ತಿ ಸೇರಿದ್ದಾರೆ ಎಂದು ಅವರು ಹೇಳಿದರು. ದಾಳಿಕೋರನನ್ನು ತಡೆಯಲು ಯತ್ನಿಸುತ್ತಿದ್ದಾಗ ಪೊಲೀಸ್ ಅಧಿಕಾರಿ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಅವರು ಹೇಳಿದರು.
ಉತ್ತಮ ಚಿಕಿತ್ಸೆಗಾಗಿ ಅವರನ್ನು ಇಟಾನಗರಕ್ಕೆ ಸ್ಥಳಾಂತರಿಸಲಾಗಿದೆ. ಬಳಿಕ ಹಲ್ಲೆ ನಡೆಸಿದ ವ್ಯಕ್ತಿಯನ್ನು ಬಂಧಿಸಿ ಆತನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
Attack In Arunachal Pradesh Hospital, Three Were Killed And Six Others Injured