Video: ದೆವ್ವ ಬಿಡಿಸುವ ನೆಪದಲ್ಲಿ ಮಗುವಿನ ಎದೆಯ ಮೇಲೆ ಕಾಲಿಟ್ಟು ತುಳಿದ ವೃದ್ಧ
ಮೌಢ್ಯದ ಹೆಸರಿನಲ್ಲಿ ಪುಟ್ಟ ಮಗುವಿನ ಮೇಲೆ ವೃದ್ಧನೊಬ್ಬ ಅಮಾನುಷವಾಗಿ ಹಲ್ಲೆ ನಡೆಸಿದ ವಿಡಿಯೋ ವೈರಲ್ ಆಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿ ಕಠಿಣ ಕ್ರಮಕ್ಕೆ ಒತ್ತಾಯ ಕೇಳಿಬಂದಿದೆ.

- ವೈರಲ್ ವಿಡಿಯೋ ನೋಡಿ ನೆಟ್ಟಿಗರ ಆಕ್ರೋಶ
- ಮಗುವಿನ ಎದೆಯ ಮೇಲೆ ಕಾಲಿಟ್ಟು ತುಳಿದ ವೃದ್ಧ
- ಮೌಢ್ಯ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯ
Child Assaulted In Exorcism Ritual: ದೆವ್ವ ಬಿಡಿಸುವ ಹೆಸರಿನಲ್ಲಿ ಪುಟ್ಟ ಮಗುವಿನ ಮೇಲೆ ವೃದ್ಧನೊಬ್ಬ ಅಮಾನುಷವಾಗಿ ಹಲ್ಲೆ ನಡೆಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಾರ್ವಜನಿಕರಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮೌಢ್ಯ ಮತ್ತು ಅಂಧಶ್ರದ್ಧೆಯ ಹೆಸರಿನಲ್ಲಿ ನಡೆಯುತ್ತಿರುವ ಈ ಕ್ರೌರ್ಯ ಕಂಡು ಹಲವರು ಬೇಸರ ವ್ಯಕ್ತಪಡಿಸಿದ್ದಾರೆ.
ವೈರಲ್ ಆಗಿರುವ ದೃಶ್ಯಗಳಲ್ಲಿ ವೃದ್ಧನೊಬ್ಬ ಮಗುವಿನ ಕಾಲು ಹಿಡಿದು ಗಾಳಿಯಲ್ಲಿ ಸುತ್ತಿಸುವುದು ಕಾಣಿಸಿಕೊಂಡಿದೆ. ಬಳಿಕ ನೆಲದ ಮೇಲೆ ಬಿದ್ದಿದ್ದ ಮಗುವಿನ ಎದೆಯ ಮೇಲೆ ಕಾಲಿಟ್ಟು ತುಳಿದಿರುವ ದೃಶ್ಯವೂ ವಿಡಿಯೋದಲ್ಲಿ ದಾಖಲಾಗಿದೆ. ಮಗು ಎದ್ದೇಳಲು ಪ್ರಯತ್ನಿಸಿದಾಗಲೆಲ್ಲಾ ಮತ್ತೆ ಕಾಲಿನಿಂದ ಒದ್ದು ಕೆಳಕ್ಕೆ ತಳ್ಳುತ್ತಿರುವುದು ಕಂಡುಬಂದಿದೆ.
ಅಸಹಾಯಕ ಮಗುವಿನ ಅಳಲು ಮತ್ತು ತಪ್ಪಿಸಿಕೊಳ್ಳಲು ನಡೆಸಿದ ಹೋರಾಟ ಸಾಮಾಜಿಕ ಜಾಲತಾಣ ಬಳಕೆದಾರರ ಮನಸ್ಸನ್ನು ಕಲುಕಿದೆ. ಧಾರ್ಮಿಕ ಆಚರಣೆ ಅಥವಾ ದೆವ್ವ ಬಿಡಿಸುವ ವಿಧಿ ಎಂದು ಹೇಳಿಕೊಂಡು ಮಗುವಿನ ಮೇಲೆ ದೌರ್ಜನ್ಯ ನಡೆಸಿರುವುದನ್ನು ಜನರು ತೀವ್ರವಾಗಿ ಖಂಡಿಸಿದ್ದಾರೆ.
ಈ ಘಟನೆ ನಡೆಯುವ ವೇಳೆ ಸುತ್ತಮುತ್ತ ಹಲವರು ಇದ್ದರೂ ಯಾರೂ ಮಗುವಿನ ರಕ್ಷಣೆಗೆ ಮುಂದಾಗದಿರುವುದು ಪ್ರಶ್ನೆಗೆ ಕಾರಣವಾಗಿದೆ. “ಇದು ಚಿಕಿತ್ಸೆ ಅಲ್ಲ, ಇದು ಕ್ರೌರ್ಯ” ಎಂದು ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದು, ಮಗುವಿನ ಮೇಲಿನ ಹಲ್ಲೆ ನಡೆಸಿದ ವೃದ್ಧನ ವಿರುದ್ಧ ತಕ್ಷಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
2026ರಲ್ಲಿಯೂ ಇಂತಹ ಮೂಢನಂಬಿಕೆಗಳು ಸಮಾಜದಲ್ಲಿ ಮುಂದುವರಿಯುತ್ತಿರುವುದು ದುರಂತಕರ ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ. ಮಕ್ಕಳ ರಕ್ಷಣಾ ಕಾಯ್ದೆಯಡಿ ಕಠಿಣ ಕ್ರಮ ಕೈಗೊಂಡು ಇಂತಹ ಘಟನೆಗಳಿಗೆ ಕಡಿವಾಣ ಹಾಕಬೇಕು ಎಂಬ ಒತ್ತಾಯವೂ ಕೇಳಿಬರುತ್ತಿದೆ.
ಸದ್ಯ ವೈರಲ್ ವಿಡಿಯೋ ಆಧರಿಸಿ ಪೊಲೀಸರು ತನಿಖೆ ಆರಂಭಿಸಬೇಕು ಹಾಗೂ ಮಗುವಿಗೆ ಸೂಕ್ತ ರಕ್ಷಣೆ ಮತ್ತು ವೈದ್ಯಕೀಯ ನೆರವು ಒದಗಿಸಬೇಕು ಎಂದು ಸಾಮಾಜಿಕ ಜಾಲತಾಣಗಳಲ್ಲಿ ಒತ್ತಾಯ ಹೆಚ್ಚಾಗಿದೆ.
🚨SHOCKING | In the name of exorcism, an old man was seen brutally assaulting a kid pic.twitter.com/eFgeJqH1K3
— The Tatva (@thetatvaindia) May 10, 2026



