ಬೆಂಗಳೂರು: ಹೊಸಕೋಟೆಯಲ್ಲಿ ಉಚಿತ ಕುರಿ ಸಾಕಾಣಿಕೆ ತರಬೇತಿ! ಊಟ ವಸತಿ ವ್ಯವಸ್ಥೆಯೂ ಇರಲಿದೆ
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆಯಲ್ಲಿ ನಿರುದ್ಯೋಗಿ ಪುರುಷರು ಮತ್ತು ಮಹಿಳೆಯರಿಗಾಗಿ 13 ದಿನಗಳ ಉಚಿತ ಕುರಿ ಸಾಕಾಣಿಕೆ ತರಬೇತಿ ಶಿಬಿರ ಆಯೋಜಿಸಲಾಗಿದ್ದು, ಊಟ ವಸತಿ ವ್ಯವಸ್ಥೆಯೂ ಇರಲಿದೆ.

ಬೆಂಗಳೂರು (Bengaluru) ಗ್ರಾಮಾಂತರ ಜಿಲ್ಲೆಯ ಹೊಸಕೋಟೆ (Hoskote) ತಾಲೂಕಿನ ಹಸಿಗಾಳ ಹೋಬಳಿಯ ಸೊಣ್ಣಹಳ್ಳಿಪುರ ಗ್ರಾಮದಲ್ಲಿರುವ ಕೆನರಾ ಬ್ಯಾಂಕ್ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆಯಲ್ಲಿ (Canara Bank RSETI) ನಿರುದ್ಯೋಗಿ ಪುರುಷರು ಮತ್ತು ಮಹಿಳೆಯರಿಗಾಗಿ ಉಚಿತ ಕುರಿ ಸಾಕಾಣಿಕೆ ತರಬೇತಿ ಆಯೋಜಿಸಲಾಗಿದೆ.
13 ದಿನಗಳ ಕಾಲ ನಡೆಯುವ ಈ ತರಬೇತಿಯಲ್ಲಿ ಕುರಿ ಸಾಕಾಣಿಕೆಯ (Sheep Farming) ಜೊತೆಗೆ ವೈಜ್ಞಾನಿಕವಾಗಿ ಹಸು, ಮೇಕೆ, ಹಂದಿ ಹಾಗೂ ಕೋಳಿ ಸಾಕಾಣಿಕೆ ಬಗ್ಗೆಯೂ ಮಾಹಿತಿ ನೀಡಲಾಗುತ್ತದೆ. ತೋಟಗಾರಿಕಾ ಬೆಳೆಗಳು ಮತ್ತು ಸಾವಯವ ಗೊಬ್ಬರ ತಯಾರಿಕೆಯ ಕುರಿತು ಕೂಡ ತರಬೇತಿ ನೀಡಲಾಗುವುದು.
ತರಬೇತಿಗೆ 18 ವರ್ಷ ಮೇಲ್ಪಟ್ಟು 49 ವರ್ಷದೊಳಗಿನ ಆಸಕ್ತರು ಅರ್ಜಿ ಸಲ್ಲಿಸಬಹುದು. ಅಕ್ಟೋಬರ್ 7, 2026ರಂದು ಬುಧವಾರ ತರಬೇತಿ ಸಂಸ್ಥೆಯಲ್ಲಿ ನಡೆಯುವ ಆಯ್ಕೆ ಪ್ರಕ್ರಿಯೆಗೆ ಪಡಿತರ ಚೀಟಿ, ಆಧಾರ್ ಕಾರ್ಡ್ ಮತ್ತು ನಾಲ್ಕು ಪಾಸ್‌ಪೋರ್ಟ್ ಅಳತೆಯ ಭಾವಚಿತ್ರಗಳೊಂದಿಗೆ ಹಾಜರಾಗಬೇಕು.
ತರಬೇತಿ ಅವಧಿಯಲ್ಲಿ ಶಿಬಿರಾರ್ಥಿಗಳಿಗೆ ಉಚಿತ ತರಬೇತಿ, ಊಟ ಮತ್ತು ವಸತಿ (Free Training) ವ್ಯವಸ್ಥೆ ಕಲ್ಪಿಸಲಾಗುತ್ತದೆ. ಅನುಭವಿ ಸಂಪನ್ಮೂಲ ವ್ಯಕ್ತಿಗಳು ವಿವಿಧ ವಿಷಯಗಳ ಕುರಿತು ಪ್ರಾಯೋಗಿಕ ಹಾಗೂ ಅಗತ್ಯ ಮಾಹಿತಿಯನ್ನು ನೀಡಲಿದ್ದಾರೆ.
ತರಬೇತಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದವರಿಗೆ ಸಂಸ್ಥೆಯ ವತಿಯಿಂದ ಪ್ರಮಾಣಪತ್ರ (Training Certificate) ನೀಡಲಾಗುತ್ತದೆ. ಗ್ರಾಮೀಣ ಪ್ರದೇಶದ ಬಿ.ಪಿ.ಎಲ್ ರೇಷನ್ ಕಾರ್ಡ್ ಹೊಂದಿರುವ ಅಭ್ಯರ್ಥಿಗಳಿಗೆ ಆದ್ಯತೆ ನೀಡಲಾಗುವುದು ಎಂದು ತಿಳಿಸಲಾಗಿದೆ.
ಒಟ್ಟು 35 ಮಂದಿಗೆ ಮಾತ್ರ ತರಬೇತಿಯಲ್ಲಿ ಅವಕಾಶವಿದ್ದು, ಮೊದಲು ಬಂದವರಿಗೆ ಮೊದಲ ಆದ್ಯತೆ ನೀಡಲಾಗುತ್ತದೆ. ಹೀಗಾಗಿ ಆಸಕ್ತಿ ಹೊಂದಿರುವವರು ಅಗತ್ಯ ದಾಖಲೆಗಳೊಂದಿಗೆ ನಿಗದಿತ ದಿನಾಂಕದಂದು ತರಬೇತಿ ಸಂಸ್ಥೆಯನ್ನು ಸಂಪರ್ಕಿಸುವುದು ಅಗತ್ಯವಾಗಿದೆ.
ಹೆಚ್ಚಿನ ಮಾಹಿತಿಗಾಗಿ 9886935603, 9591514154, 8970476050, 9686248369 ಹಾಗೂ 6363139123 ಸಂಖ್ಯೆಗೆ ಸಂಪರ್ಕಿಸಬಹುದು.
ಕರ್ನಾಟಕ ರಾಜ್ಯದ ಮೂಲೆಮೂಲೆಗಳ ಕನ್ನಡ ಸುದ್ದಿಗಳ ಜೊತೆಗೆ ದಿನದ ಪ್ರಮುಖ ಬೆಳವಣಿಗೆಗಳನ್ನು Kannada News Today ಮೂಲಕ ತಿಳಿಯಿರಿ.



