ವಿದ್ಯುತ್ ತಂತಿ ಮೇಲೆ ಹಾರಿದ ಮಂಗ, ಬೈಕ್ ನಲ್ಲಿ ಹೋಗುತ್ತಿದ್ದ ಮೂವರ ದಾರುಣ ಸಾವು
ಉತ್ತರ ಪ್ರದೇಶದ ಘೋರಕ್‌ಪುರದಲ್ಲಿ ವಿದ್ಯುತ್ ತಂತಿ ಮೇಲೆ ಮಂಗ ಜಿಗಿದಿದ್ದರಿಂದ ತಂತಿ ತುಂಡಾಗಿ ಬಿದ್ದು ಬೈಕ್ ನಲ್ಲಿ ಹೋಗುತ್ತಿದ್ದ ಮೂವರು ದಾರುಣ ಸಾವನ್ನಪ್ಪಿದ್ದಾರೆ
ಉತ್ತರ ಪ್ರದೇಶದ ಘೋರಕ್‌ಪುರದಲ್ಲಿ ಇತ್ತೀಚೆಗೆ ನಡೆದ ದಾರುಣ ಘಟನೆಯೊಂದು, ಸಾವು ನಮ್ಮ ಕೈಯಲ್ಲಿಲ್ಲ ಎಂಬುದನ್ನು ಸಾಬೀತುಪಡಿಸಿದೆ. ಘೋರಕ್‌ಪುರದ ಸೋನ್‌ಬರ್ಸಾ ಮಾರುಕಟ್ಟೆ ಪ್ರದೇಶದಲ್ಲಿ ನಡೆದ ಘಟನೆಯ ಸುದ್ದಿ ಸ್ಥಳೀಯವಾಗಿ ಬೆಚ್ಚಿಬೀಳಿಸಿದೆ.
ಘಟನೆಯ ವಿವರ: ಸ್ಥಳೀಯ ನಿವಾಸಿಯಾದ ವ್ಯಕ್ತಿಯೊಬ್ಬರು ತಮ್ಮ ಮಗಳು ಮತ್ತು ಸೊಸೆಯೊಂದಿಗೆ ಬೈಕ್‌ನಲ್ಲಿ ಹೋಗುತ್ತಿದ್ದಾಗ ಮಾರುಕಟ್ಟೆ ಪ್ರದೇಶದ ಡಂಪಿಂಗ್ ಯಾರ್ಡ್ ಸಮೀಪಿಸುತ್ತಿದ್ದಂತೆ ಮಂಗ (ಕೋತಿ) ಅವರ ಮೇಲಿದ್ದ 11 ಕೆವಿ ವಿದ್ಯುತ್ ತಂತಿ ಮೇಲೆ ಹಾರಿದೆ.
ಮಂಗ ಜಿಗಿದ ರಭಸಕ್ಕೆ ಹಾಗೂ ತಂತಿಗಳು ಸ್ಪರ್ಶವಾದ ಕಾರಣಕ್ಕೆ ತಂತಿ ತುಂಡಾಗಿ ಬೈಕ್ ಮೇಲೆ ಬಿದ್ದಿದೆ. ಇದರಿಂದ ಮೂವರಿಗೂ ವಿದ್ಯುತ್ ಸ್ಪರ್ಶವಾಗಿದೆ, ಎಲ್ಲರೂ ನೋಡುತ್ತಿದ್ದಂತೆ ಕ್ಷಣಾರ್ಧದಲ್ಲಿ ಮೂವರೂ ಬೆಂಕಿಗೆ ಆಹುತಿಯಾಗಿದ್ದಾರೆ.
ಸ್ಥಳೀಯರು ಅವರನ್ನು ರಕ್ಷಿಸಲು ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ. ಈ ಘಟನೆಗೆ ಸಂಬಂಧಿಸಿದ ದೃಶ್ಯಗಳು ಸ್ಥಳೀಯ ಸಿಸಿಟಿವಿ ಕ್ಯಾಮೆರಾಗಳಲ್ಲಿ ದಾಖಲಾಗಿವೆ. ಕೋತಿ ಹಾರಿದ ರಭಸಕ್ಕೆ ವಿದ್ಯುತ್ ತಂತಿ ತುಂಡಾಗಿದ್ದು, ಮೃತರ ಕುಟುಂಬಕ್ಕೆ 5 ಲಕ್ಷ ರೂಪಾಯಿ ಪರಿಹಾರ ಘೋಷಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಘಟನೆ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
Father, Daughter, and Niece Burned to Death After Live Wire Falls on Them