ಘೋರ ದುರಂತ: ಅಗ್ನಿ ಅವಘಡ, ಒಂದೇ ಕುಟುಂಬದ 6 ಮಂದಿ ಸಾವು
ಉತ್ತರ ಭಾರತದ ಮಧ್ಯಪ್ರದೇಶದ ಸಿಯೋನಿ ಜಿಲ್ಲೆಯಲ್ಲಿ ಚಿನ್ನದ ವ್ಯಾಪಾರಿಯ ಮೂರು ಅಂತಸ್ತಿನ ಮನೆಯಲ್ಲಿ ಮುಂಜಾನೆ ಬೆಂಕಿ ಕಾಣಿಸಿಕೊಂಡಿದ್ದು, ನಿದ್ರೆಯಲ್ಲಿದ್ದ ಕುಟುಂಬಕ್ಕೆ ಹೊರಬರಲು ಸಾಧ್ಯವಾಗದೆ ಆರು ಮಂದಿ ಮೃತಪಟ್ಟಿದ್ದಾರೆ.

ಮಧ್ಯಪ್ರದೇಶದ (Madhya Pradesh) ಸಿಯೋನಿ (Seoni) ಜಿಲ್ಲೆಯಲ್ಲಿ ಸಂಭವಿಸಿದ ಅಗ್ನಿ ಅವಘಡವೊಂದು ಇಡೀ ಪ್ರದೇಶವನ್ನು ಬೆಚ್ಚಿಬೀಳಿಸಿದೆ. ಒಂದೇ ಕುಟುಂಬದ ಆರು ಮಂದಿ ಬೆಂಕಿಯ ಕೆನ್ನಾಲಿಗೆಗೆ ಸಿಲುಕಿ ಮೃತಪಟ್ಟಿದ್ದು, ದೀಪಾವಳಿ ಸಂಭ್ರಮದ ಬೆನ್ನಲ್ಲೇ ಸಂಭವಿಸಿದ ಈ ದುರಂತ ಸ್ಥಳೀಯರಲ್ಲಿ ಆಘಾತ ಮೂಡಿಸಿದೆ.
ಮಹಾವೀರ್ ವಾರ್ಡ್‌ನ ಜೈನ ಮಂದಿರದ ಸಮೀಪವಿರುವ ಚಿನ್ನದ ವ್ಯಾಪಾರಿ ಕುಂದನ್ ಲಾಲ್ ಸೋನಿ ಅವರಿಗೆ ಸೇರಿದ ಮೂರು ಅಂತಸ್ತಿನ ಮನೆಯಲ್ಲಿ ಸೋಮವಾರ (ನವೆಂಬರ್ 9) ಬೆಳಗಿನ ಜಾವ ಸುಮಾರು 4ರಿಂದ 4.30ರ ನಡುವೆ ಬೆಂಕಿ ಕಾಣಿಸಿಕೊಂಡಿದೆ. ಮನೆಯೊಳಗೆ ಎಲ್ಲರೂ ಇದ್ದ ಸಂದರ್ಭದಲ್ಲಿ ಬೆಂಕಿ ವೇಗವಾಗಿ ಹರಡಿದ್ದರಿಂದ ಹೊರಬರಲು ಸಾಧ್ಯವಾಗದೆ ಹಲವರು ಸಿಲುಕಿಕೊಂಡಿದ್ದರು ಎನ್ನಲಾಗಿದೆ.
ಮಾಹಿತಿ ತಿಳಿಯುತ್ತಿದ್ದಂತೆ ಅಗ್ನಿಶಾಮಕ ದಳ ಮತ್ತು ರಕ್ಷಣಾ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದರು. ಬೆಂಕಿ ನಂದಿಸುವುದರ ಜೊತೆಗೆ ಮನೆಯೊಳಗೆ ಸಿಲುಕಿದ್ದವರನ್ನು ಹೊರತರುವ ಕಾರ್ಯಾಚರಣೆ ನಡೆಸಿದರು. ಈ ವೇಳೆ ನಾಲ್ವರನ್ನು ಸುರಕ್ಷಿತವಾಗಿ ರಕ್ಷಿಸಲಾಗಿದ್ದು, ಗಾಯಗೊಂಡವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಉಪವಿಭಾಗೀಯ ಪೊಲೀಸ್ ಅಧಿಕಾರಿ ಅಪೂರ್ವ ಭಲಾವಿ ತಿಳಿಸಿದ್ದಾರೆ.
#WATCH | Madhya Pradesh: Visuals from the spot after six members of a family died last night after a fire broke out at their residence in Seoni. The incident occurred in the Chhapara block headquarters of the district. https://t.co/kNI77vfBCJ
— ANI (@ANI) November 9, 2026
ಈ ಘಟನೆಯಲ್ಲಿ ಮೃತಪಟ್ಟವರನ್ನು ಕುಂದನ್ ಲಾಲ್ ಸೋನಿ (75), ಅವರ ಪತ್ನಿ ರಾಜಕುಮಾರಿ ಸೋನಿ (65), ರಿತು ಸೋನಿ (42), ಸ್ಮೃತಿ ಸೋನಿ (40), ಸೂರ್ಯ ಸೋನಿ (45) ಮತ್ತು ಆದಿತ್ಯ ಸೋನಿ (16) ಎಂದು ಗುರುತಿಸಲಾಗಿದೆ. ಮೃತರಲ್ಲಿ ಮೂವರು ಮಹಿಳೆಯರು ಹಾಗೂ ಒಬ್ಬ ಅಪ್ರಾಪ್ತ ಬಾಲಕ ಸೇರಿದ್ದಾರೆ.
ಮನೆಯಲ್ಲಿದ್ದ ಒಟ್ಟು ಹತ್ತು ಮಂದಿಯಲ್ಲಿ ಆರು ಜನ ಪ್ರಾಣ ಕಳೆದುಕೊಂಡಿರುವುದು ಕುಟುಂಬಕ್ಕೆ ದೊಡ್ಡ ಆಘಾತ ತಂದಿದೆ. ಇನ್ನು ಬೆಂಕಿ ಕಾಣಿಸಿಕೊಳ್ಳಲು ಕಾರಣವೇನು ಎಂಬುದು ಸದ್ಯಕ್ಕೆ ಸ್ಪಷ್ಟವಾಗಿಲ್ಲ. ವಿದ್ಯುತ್ ಅವಘಡ ಸೇರಿದಂತೆ ಇತರ ಸಾಧ್ಯತೆಗಳ ಕುರಿತು ಪೊಲೀಸರು ಪರಿಶೀಲನೆ ನಡೆಸುತ್ತಿದ್ದು, ಅಗ್ನಿ ದುರಂತದ ನಿಖರ ಕಾರಣ ಪತ್ತೆಹಚ್ಚಲು ತನಿಖೆ ಮುಂದುವರಿದಿದೆ.
ಕರ್ನಾಟಕ ರಾಜ್ಯದ ಮೂಲೆಮೂಲೆಗಳ ಕನ್ನಡ ಸುದ್ದಿಗಳ ಜೊತೆಗೆ ದಿನದ ಪ್ರಮುಖ ಬೆಳವಣಿಗೆಗಳನ್ನು Kannada News Today ಮೂಲಕ ತಿಳಿಯಿರಿ.







