ಪ್ರೀತಿಸಿ ಮದುವೆಯಾದ 2 ತಿಂಗಳಿಗೆ ಪತ್ನಿಯನ್ನು ರಾಡ್‌ನಿಂದ ಹೊಡೆದು ಕೊಂದ ಪತಿ

ಉತ್ತರ ಪ್ರದೇಶದ ಕಾನ್ಪುರ ದೇಹತ್‌ನಲ್ಲಿ ಪ್ರೀತಿಸಿ ಮದುವೆಯಾದ ಎರಡು ತಿಂಗಳಲ್ಲೇ ಪತ್ನಿಯನ್ನು ಪತಿ ಕಬ್ಬಿಣದ ರಾಡ್‌ನಿಂದ ಹೊಡೆದು ಹತ್ಯೆ ಮಾಡಿದ್ದಾನೆ. ಬಳಿಕ ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾನೆ.

ಕಾನ್ಪುರ: ಪ್ರೀತಿಸಿ ಮದುವೆಯಾದ ಪತ್ನಿಯನ್ನೇ ಪತಿ ಕಬ್ಬಿಣದ ರಾಡ್‌ನಿಂದ (Iron Rod) ಹೊಡೆದು ಹತ್ಯೆ ಮಾಡಿರುವ ಆಘಾತಕಾರಿ ಘಟನೆ ಉತ್ತರ ಪ್ರದೇಶದ (UP) ಕಾನ್ಪುರ ದೇಹತ್ ಜಿಲ್ಲೆಯ ಅಕ್ಬರ್‌ಪುರದಲ್ಲಿ ನಡೆದಿದೆ. ಮದುವೆಯಾಗಿ ಕೇವಲ ಎರಡು ತಿಂಗಳು ಕಳೆದಿರುವಾಗಲೇ ದಂಪತಿಯ ಸಂಬಂಧ ದುರಂತ ಅಂತ್ಯ ಕಂಡಿದೆ.

ಮೃತ ಮಹಿಳೆಯನ್ನು ಸಪ್ನಾ ಅಲಿಯಾಸ್ ಆಸ್ಮಾ (29) ಎಂದು ಗುರುತಿಸಲಾಗಿದೆ. ಆಕೆಯ ಪತಿ ಗಜೇಂದ್ರ ಶಾಂಖ್ವಾರ್ (30) ವೃತ್ತಿಯಲ್ಲಿ ಗಾರೆ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ. ಇಬ್ಬರೂ ಅಕ್ಬರ್‌ಪುರದ ಆರ್‌ಟಿಒ ಕಚೇರಿ ಸಮೀಪದ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು.

ಭಾನುವಾರ ಬೆಳಗ್ಗೆ ಸಪ್ನಾ ಮೊಬೈಲ್‌ನಲ್ಲಿ ಯಾರೊಂದಿಗೋ ಮಾತನಾಡುತ್ತಿದ್ದ ವೇಳೆ ದಂಪತಿ ನಡುವೆ ಮಾತಿನ ಚಕಮಕಿ ಆರಂಭವಾಗಿದೆ ಎನ್ನಲಾಗಿದೆ. ಬಳಿಕ ಜಗಳ ತೀವ್ರಗೊಂಡಿದ್ದು, ಕೋಪಗೊಂಡ ಗಜೇಂದ್ರ ಮನೆಯಲ್ಲಿದ್ದ ಕಬ್ಬಿಣದ ರಾಡ್‌ನಿಂದ ಆಕೆಯ ತಲೆಗೆ ಹೊಡೆದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ತೀವ್ರವಾಗಿ ಗಾಯಗೊಂಡ ಸಪ್ನಾ ರಕ್ತದ ಮಡುವಿನಲ್ಲಿ ಕುಸಿದುಬಿದ್ದಿದ್ದಾರೆ. ಘಟನೆ ಬಳಿಕ ಗಜೇಂದ್ರನೇ ಪೊಲೀಸರಿಗೆ (Police) ಕರೆ ಮಾಡಿ ತನ್ನ ಪತ್ನಿಯನ್ನು ಕೊಂದಿರುವುದಾಗಿ ತಿಳಿಸಿದ್ದಾನೆ ಎನ್ನಲಾಗಿದೆ. ಮಾಹಿತಿ ಸಿಕ್ಕ ಕೂಡಲೇ ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ.

ಪೊಲೀಸರು ಸಪ್ನಾಳನ್ನು ಅಕ್ಬರ್‌ಪುರ ಮೆಡಿಕಲ್ ಕಾಲೇಜಿಗೆ (Medical College) ಕರೆದೊಯ್ದಿದ್ದಾರೆ. ಆದರೆ ಪರೀಕ್ಷಿಸಿದ ವೈದ್ಯರು ಆಕೆ ಮೃತಪಟ್ಟಿರುವುದನ್ನು ದೃಢಪಡಿಸಿದ್ದಾರೆ. ಬಳಿಕ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ (Postmortem) ಕಳುಹಿಸಲಾಗಿದೆ.

ಗಜೇಂದ್ರ ಹಾಗೂ ಸಪ್ನಾ ಎರಡು ತಿಂಗಳ ಹಿಂದಷ್ಟೇ ಪ್ರೀತಿಸಿ ನ್ಯಾಯಾಲಯದಲ್ಲಿ ವಿವಾಹವಾಗಿದ್ದರು ಎನ್ನಲಾಗಿದೆ. ಇದು ಅಂತರ್‌ಧರ್ಮೀಯ ವಿವಾಹವಾಗಿದ್ದು, ಗಜೇಂದ್ರಗೆ ಈ ಹಿಂದೆಯೇ ಮದುವೆಯಾಗಿತ್ತು. ಮೊದಲ ಪತ್ನಿಯಿಂದ ಓರ್ವ ಪುತ್ರನಿದ್ದಾನೆ ಎಂಬ ಮಾಹಿತಿಯೂ ಪೊಲೀಸರಿಗೆ ಸಿಕ್ಕಿದೆ.

ಪತ್ನಿ ಮೊಬೈಲ್‌ನಲ್ಲಿ ಮಾತನಾಡುತ್ತಿದ್ದ ವಿಚಾರವೇ ಜಗಳಕ್ಕೆ ಕಾರಣವಾಗಿತ್ತೇ ಅಥವಾ ಇದರ ಹಿಂದೆ ಬೇರೆ ಯಾವುದಾದರೂ ಕಾರಣವಿದೆಯೇ ಎಂಬುದನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ. ಗಜೇಂದ್ರನನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದ್ದು, ಪ್ರಕರಣದ (Murder Case) ಸಂಪೂರ್ಣ ಹಿನ್ನೆಲೆಯನ್ನು ತನಿಖೆ ಮೂಲಕ ಪತ್ತೆಹಚ್ಚಲಾಗುತ್ತಿದೆ.

English Summary▼

Satish Raj Goravigere

12 ವರ್ಷಗಳ ಪತ್ರಿಕಾ ಅನುಭವ ಹೊಂದಿರುವ ಸತೀಶ್ ರಾಜ್ ಗೊರವಿಗೆರೆ ರವರು, 2019ರಲ್ಲಿ ಕನ್ನಡ ನ್ಯೂಸ್ ಟುಡೇ ಸ್ಥಾಪಿಸಿದವರು. ಬೆಂಗಳೂರು, ಕರ್ನಾಟಕ ಹಾಗೂ ರಾಷ್ಟ್ರೀಯ… More »

Related Stories