ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಬಿರುಗಾಳಿ ಸಹಿತ ಭಾರೀ ಮಳೆ

ದೆಹಲಿ ಮತ್ತು ಎನ್‌ಸಿಆರ್ ಪ್ರದೇಶಗಳಲ್ಲಿ ಗುಡುಗು ಗಾಳಿ ಸಹಿತ ಭಾರೀ ಮಳೆಯಾಗಿದೆ

Delhi, India, ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿ ಸೇರಿದಂತೆ ಎನ್‌ಸಿಆರ್‌ನ ಹಲವು ಭಾಗಗಳಲ್ಲಿ ಸೋಮವಾರ ಸಂಜೆ ಭಾರಿ ಮಳೆಯಾಗಿದೆ. ಬಿರುಗಾಳಿಯಿಂದಾಗಿ ಹಲವೆಡೆ ಮರಗಳು ಧರೆಗುರುಳಿವೆ. ಇದರಿಂದ ವಿದ್ಯುತ್ ಪೂರೈಕೆ ಹಾಗೂ ಸಂಚಾರಕ್ಕೆ ತೀವ್ರ ಅಡಚಣೆ ಉಂಟಾಗಿತ್ತು. ಪ್ರತಿಕೂಲ ಹವಾಮಾನದಿಂದಾಗಿ ವಿಮಾನ ಸೇವೆಗಳ ಮೇಲೆ ಪರಿಣಾಮ ಬೀರಬಹುದು ಎಂದು ಇಂಡಿಗೋ ಪ್ರಯಾಣಿಕರಿಗೆ ಸೂಚಿಸಿದೆ. ಮಳೆಗೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಹಲವೆಡೆ ಕಟ್ಟಡಗಳ ಎಸಿಗಳು ನೇತಾಡುತ್ತಿರುವುದು ಕಂಡುಬಂದಿದೆ. ಧಾರಾಕಾರ ಮಳೆಗೆ ಹಲವೆಡೆ ಮರಗಳು ಕುಸಿದು ವಾಹನಗಳ ಮೇಲೆ ಬಿದ್ದಿವೆ. ಇದರಿಂದ ಟ್ರಾಫಿಕ್ ಜಾಮ್ ಉಂಟಾಗಿತ್ತು. ಮಂಡಿ ಹೌಸ್, ರೈಸಿನಾ ರಸ್ತೆ, ಜಂತರ್ ಮಂತರ್, ಐಟಿಒ ಮತ್ತಿತರ ಕಡೆ ವಾಹನ ಸಂಚಾರ ಸ್ಥಗಿತಗೊಂಡಿತ್ತು.

ದೆಹಲಿ ಮಾತ್ರವಲ್ಲದೆ ಗುರಗಾಂವ್ ಮತ್ತು ನೋಯ್ಡಾದಲ್ಲೂ ತುಂತುರು ಮಳೆಯಾಗಿದೆ. ಏತನ್ಮಧ್ಯೆ, ಸೋಮವಾರ ದೆಹಲಿಯ ಪಶ್ಚಿಮ, ವಾಯುವ್ಯ, ದಕ್ಷಿಣ ಮತ್ತು ನೈಋತ್ಯ ಭಾಗಗಳಲ್ಲಿ ಗಂಟೆಗೆ 50 ಕಿಮೀ ವೇಗದಲ್ಲಿ ಬಲವಾದ ಗಾಳಿ ಬೀಸುವ ನಿರೀಕ್ಷೆಯಿದೆ ಎಂದು ಹವಾಮಾನ ಕಚೇರಿ ತಿಳಿಸಿದೆ.

ರೋಹ್ಟಕ್, ಭಿವಾನಿ, ಚಾರ್ಖಿ, ದಾದ್ರಿ, ಮಟನ್‌ಹೈಲ್, ಜಜ್ಜರ್, ಫಾರೂಕ್ ನಗರ, ಕೋಸ್ಲಿ, ಸೊಹಾನಾ, ರೆವಾರಿ, ಪಲ್ವಾಲ್, ಬವಾಲ್, ನುಹ್, ಔರಂಗಾಬಾದ್, ಹೊಡಾಲ್ (ಹರಿಯಾಣ) ನಲ್ಲಿ ತುಂತುರು ಮಳೆಯಾಗುವ ಸಾಧ್ಯತೆಯಿದೆ. ರಾಷ್ಟ್ರ ರಾಜಧಾನಿಯ ಹಲವು ಭಾಗಗಳಲ್ಲಿ ಭಾನುವಾರ ಲಘು ಮಳೆಯಾಗಿದೆ. ಕಳೆದ ವಾರ ಗುಡುಗು ಸಿಡಿಲಿನ ಆರ್ಭಟಕ್ಕೆ ಮರಗಳು ಕುಸಿದು ಬಿದ್ದಿದ್ದು, ವಿಮಾನ ಸೇವೆಗೆ ತೊಂದರೆಯಾಗಿತ್ತು.

Follow us On

FaceBook Google News