ವಯನಾಡ್ ಭೂಕುಸಿತ ದುರಂತದ ಬಗ್ಗೆ ಕೇರಳ ಸರ್ಕಾರ ಪ್ರಮುಖ ನಿರ್ಧಾರ
ಕೇರಳದ ವಯನಾಡಿನಲ್ಲಿ ಕಳೆದ ವರ್ಷ ಸಂಭವಿಸಿದ ದುರಂತದ ಬಗ್ಗೆ ಪಿಣರಾಯಿ ವಿಜಯನ್ (Kerala CM Pinarayi vijayan) ಸರ್ಕಾರವು ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದೆ. ಭೂಕುಸಿತದಲ್ಲಿ (Missing in Landslide) ನಾಪತ್ತೆಯಾದವರನ್ನು ಮೃತರೆಂದು ಘೋಷಿಸಲು ನಿರ್ಧರಿಸಲಾಗಿದೆ. ಮಂಗಳವಾರ ಈ ಕುರಿತು ಆದೇಶ ಹೊರಡಿಸಿದೆ.
ಈ ನಿರ್ಧಾರವು ವಿಪತ್ತಿನಲ್ಲಿ ಕಳೆದುಕೊಂಡವರ ಕುಟುಂಬ ಸದಸ್ಯರಿಗೆ ಪ್ರಯೋಜನವನ್ನು ನೀಡುತ್ತದೆ ಮತ್ತು ಪರಿಹಾರವನ್ನು ನೀಡಲು ಸಹಾಯ ಮಾಡುತ್ತದೆ ಎನ್ನಲಾಗಿದೆ. ಕಾಣೆಯಾದವರ ಪಟ್ಟಿಯನ್ನು ಪರಿಶೀಲಿಸಲು ಕಂದಾಯ ಇಲಾಖೆ ಅಧಿಕಾರಿಗಳು ಸೇರಿದಂತೆ ಸ್ಥಳೀಯ, ಜಿಲ್ಲಾ ಮತ್ತು ರಾಜ್ಯ ಮಟ್ಟದ ಸಮಿತಿಗಳನ್ನು ರಚಿಸಲಾಗುವುದು ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಸಮಿತಿಯು ದುರಂತದಲ್ಲಿ ನಾಪತ್ತೆಯಾದವರ ಪಟ್ಟಿಯನ್ನು ಸಿದ್ಧಪಡಿಸಿ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರಕ್ಕೆ ಪರಿಶೀಲನೆಗಾಗಿ ಸಲ್ಲಿಸುತ್ತದೆ. ಡಿಡಿಎಂಎ ಪಟ್ಟಿಯನ್ನು ಪರಿಶೀಲಿಸಿ ರಾಜ್ಯ ಮಟ್ಟದ ಸಮಿತಿಗೆ ಕಳುಹಿಸಿದರೆ ಅಲ್ಲಿಂದ ಸರ್ಕಾರಕ್ಕೆ ಪಟ್ಟಿ ತಲುಪಲಿದೆ. ಈ ಪಟ್ಟಿಯಲ್ಲಿ ಯಾರ ಹೆಸರಿದೆಯೋ ಅವರನ್ನು ಮೃತರೆಂದು ಸರ್ಕಾರ ಘೋಷಿಸಿ ಅವರ ಸಂಬಂಧಿಕರಿಗೆ ಪರಿಹಾರ ನೀಡಲಿದೆ.
ಈ ನಡುವೆ ಕಳೆದ ವರ್ಷ ಜುಲೈ 30ರಂದು ವಯನಾಡಿನಲ್ಲಿ ಭೀಕರ ಪ್ರಕೃತಿ ವಿಕೋಪ ಸಂಭವಿಸಿದ್ದು ಗೊತ್ತೇ ಇದೆ. ಭಾರೀ ಮಳೆಯಿಂದಾಗಿ ಭೂಕುಸಿತ ಉಂಟಾಗಿದೆ. ಈ ಅನಾಹುತದಲ್ಲಿ ಹಳ್ಳಿ ಹಳ್ಳಿಯೇ ನಾಶವಾಯಿತು. ಈ ಘಟನೆಯಲ್ಲಿ ಸುಮಾರು 263 ಜನರು ಪ್ರಾಣ ಕಳೆದುಕೊಂಡಿದ್ದಾರೆ ಎಂದು ಸರ್ಕಾರಿ ದಾಖಲೆಗಳು ಹೇಳುತ್ತವೆ. ಇನ್ನೂ 35 ಮಂದಿ ನಾಪತ್ತೆಯಾಗಿದ್ದಾರೆ.
Kerala Government to Announce Missing in Wayanad Landslide as Dead