ಅಸ್ಥಿಪಂಜರ ಪತ್ತೆ! ಸ್ನೇಹಿತನನ್ನು ಕೊಂದು, ಮೃತದೇಹದ ಕಿವಿಯೋಲೆಗಳನ್ನು ಗಿರವಿ ಇಟ್ಟ ಆರೋಪಿ ಅರೆಸ್ಟ್
ಮಧ್ಯಪ್ರದೇಶದಲ್ಲಿ ಸ್ನೇಹಿತನನ್ನು ಕೊಂದು, ಮೃತದೇಹದ ಕಿವಿಯೋಲೆಗಳನ್ನು ತೆಗೆದು ಗಿರವಿ ಇಟ್ಟು ಸಾಲ ಪಡೆದ ಪ್ರಕರಣ ಬೆಳಕಿಗೆ ಬಂದಿದ್ದು, ಹತ್ತು ದಿನಗಳ ಬಳಿಕ ಅಸ್ಥಿಪಂಜರ ಪತ್ತೆಯಾಗಿದೆ.

ಮಧ್ಯಪ್ರದೇಶದ ರಾಜಗಢ್ ಜಿಲ್ಲೆಯಲ್ಲಿ ನಡೆದ ಭೀಕರ ಹತ್ಯೆ ಪ್ರಕರಣವೊಂದು ಜನರನ್ನು ಬೆಚ್ಚಿಬೀಳಿಸಿದೆ. ಸ್ನೇಹಿತನನ್ನೇ ಕೊಲೆ ಮಾಡಿದ ಆರೋಪಿಯು, ಮೃತನ ಕಿವಿಯಲ್ಲಿದ್ದ ಚಿನ್ನದ ಕಿವಿಯೋಲೆಗಳನ್ನು ತೆಗೆದು ಗಿರವಿ ಇಟ್ಟು ಸಾಲ (Gold Loan) ಪಡೆದಿದ್ದಾನೆ ಎಂಬ ಸಂಗತಿ ತನಿಖೆಯಲ್ಲಿ ಹೊರಬಂದಿದೆ.
ಗೋಲು ವಾಲ್ಮೀಕಿ ಎಂಬಾತ ಸುಮಾರು ಹತ್ತು ದಿನಗಳ ಹಿಂದೆ ಕಾಣೆಯಾಗಿದ್ದ. ಆತ ಸಾಮಾನ್ಯವಾಗಿ ಮೇಕೆ ಮೇಯಿಸಲು ಅರಣ್ಯ ಪ್ರದೇಶಕ್ಕೆ ತೆರಳುತ್ತಿದ್ದನು. ಘಟನೆ ನಡೆದ ದಿನವೂ ಆತ ಕಾಡಿಗೆ ಹೋಗಿದ್ದಾನೆ ಎಂದು ಕುಟುಂಬದವರು ತಿಳಿಸಿದ್ದಾರೆ.
ಆ ದಿನ ವಾಲ್ಮೀಕಿಯ ಸ್ನೇಹಿತ ರಘುವೀರ್ ಸೌಂದಿಯಾ ಮನೆಗೆ ಬಂದು ಅವನ ಬಗ್ಗೆ ವಿಚಾರಿಸಿದ್ದನು. ನಂತರ ಅಲ್ಲಿಂದ ತೆರಳಿದ್ದಾನೆ. ಆದರೆ ಸಂಜೆಗೂ ವಾಲ್ಮೀಕಿ ಮನೆಗೆ ಮರಳದೇ ಇದ್ದಾಗ ಕುಟುಂಬದವರು ಆತಂಕಗೊಂಡು ಹುಡುಕಾಟ ಆರಂಭಿಸಿದರು. ಮೊಬೈಲ್ ಸಂಪರ್ಕವೂ ಸಿಗದ ಕಾರಣ ಪೊಲೀಸರಿಗೆ ದೂರು ನೀಡಿದರು.
ಕುಟುಂಬದವರು ಆರಂಭದಿಂದಲೇ ರಘುವೀರ್ ಮೇಲೆ ಅನುಮಾನ ವ್ಯಕ್ತಪಡಿಸಿದ್ದರೂ, ಪೊಲೀಸರು ಮೊದಲಿಗೆ ಅದನ್ನು ಗಂಭೀರವಾಗಿ ಪರಿಗಣಿಸಿಲ್ಲ ಎಂಬ ಆರೋಪ ಕೇಳಿಬಂದಿದೆ. ವಿಶೇಷವೆಂದರೆ, ಆರೋಪಿ ಕೂಡ ಹುಡುಕಾಟದಲ್ಲಿ ಭಾಗವಹಿಸಿದ್ದಾನೆ.
ನಂತರ ಹಿರಿಯ ಅಧಿಕಾರಿಗಳ ಸೂಚನೆಯಂತೆ ರಘುವೀರ್‌ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ನಿಜಾಂಶ ಹೊರಬಂದಿದೆ. ತನ್ನ ಸ್ನೇಹಿತ ವಾಲ್ಮೀಕಿಯನ್ನು ಕೊಲೆ ಮಾಡಿ ಶವವನ್ನು ಹೂತು ಹಾಕಿದ್ದಾಗಿ ಆತ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದೇ ವೇಳೆ ಮೃತನ ಕಿವಿಯಲ್ಲಿದ್ದ ಚಿನ್ನದ ಕಿವಿಯೋಲೆಗಳನ್ನು ತೆಗೆದು ಗಿರವಿ ಇಟ್ಟು ಸುಮಾರು 40 ಸಾವಿರ ರೂಪಾಯಿ ಸಾಲ ಪಡೆದಿರುವುದನ್ನೂ ಆರೋಪಿ ಒಪ್ಪಿಕೊಂಡಿದ್ದಾನೆ. ಆರೋಪಿ ತೋರಿಸಿದ ಸ್ಥಳದಲ್ಲಿ ಶೋಧ ನಡೆಸಿದಾಗ ವಾಲ್ಮೀಕಿಯ ಅಸ್ಥಿಪಂಜರ ಪತ್ತೆಯಾಗಿದೆ.
ಪ್ರಕರಣ ಬೆಳಕಿಗೆ ಬಂದ ಬಳಿಕ ಕುಟುಂಬದವರು ಪೊಲೀಸರ ನಿರ್ಲಕ್ಷ್ಯದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, ಆರಂಭದಲ್ಲೇ ಸೂಕ್ತ ಕ್ರಮ ತೆಗೆದುಕೊಂಡಿದ್ದರೆ ಘಟನೆ ಬೇಗ ಪತ್ತೆಯಾಗುತ್ತಿತ್ತು ಎಂದು ಅಸಮಾಧಾನ ಹೊರಹಾಕಿದ್ದಾರೆ.



