ಬಾಲಿವುಡ್ ನಟ ಸೈಫ್ ಅಲಿ ಖಾನ್ ಮೇಲೆ ಮಧ್ಯರಾತ್ರಿ ಚಾಕುವಿನಿಂದ ಹಲ್ಲೆ
ಮುಂಬೈ: ಬಾಲಿವುಡ್ ನಟ ಸೈಫ್ ಅಲಿ ಖಾನ್ (Saif Ali Khan) ಮೇಲೆ ಅಪರಿಚಿತ ವ್ಯಕ್ತಿಯೊಬ್ಬ ಹಲ್ಲೆ ನಡೆಸಿದ್ದಾನೆ. ಗುರುವಾರ ಮುಂಜಾನೆ ಮುಂಬೈನಲ್ಲಿರುವ ಅವರ ನಿವಾಸಕ್ಕೆ ನುಗ್ಗಿದ ದುಷ್ಕರ್ಮಿಯೊಬ್ಬ ಸೈಫ್ ಅಲಿಖಾನ್ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿದ್ದಾನೆ.
ತಕ್ಷಣ ಕುಟುಂಬಸ್ಥರು ಲೀಲಾವತಿ ಆಸ್ಪತ್ರೆಗೆ ವರನ್ನು ದಾಖಲಿಸಿದ್ದಾರೆ.
ಸೈಫ್ ಅಲಿ ಖಾನ್ ತೀವ್ರವಾಗಿ ಗಾಯಗೊಂಡಿದ್ದಾರೆ. ಬೆನ್ನುಮೂಳೆಯ ಬಳಿಯೂ ಚಾಕುವಿನ ಗುರುತುಗಳಿವೆ ಎಂದು ಪೊಲೀಸರು ತಿಳಿಸಿದ್ದಾರೆ. ಬೆಳಗಿನ ಜಾವ 2 ಗಂಟೆ ವೇಳೆಗೆ ದುಷ್ಕರ್ಮಿ ಕಳ್ಳತನಕ್ಕೆ ಯತ್ನಿಸಿದ್ದು, ಈ ಅನುಕ್ರಮದಲ್ಲಿ ಸೈಫ್ ಮೇಲೆ ಹಲ್ಲೆ ನಡೆಸಿರುವುದು ಬೆಳಕಿಗೆ ಬಂದಿದೆ.
3.30ಕ್ಕೆ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ ಎಂದು ತಿಳಿದು ಬಂದಿದೆ. ಸದ್ಯ ವೈದ್ಯರು ಅವರಿಗೆ ಚಿಕಿತ್ಸೆ ನಡೆಸುತ್ತಿದ್ದಾರೆ. ಚಿಕಿತ್ಸೆಯ ನಂತರವಷ್ಟೇ ಸೈಫ್ ಆರೋಗ್ಯದ ಬಗ್ಗೆ ಸ್ಪಷ್ಟನೆ ಸಿಗಲಿದೆ. ಮುಂಬೈ ಕ್ರೈಂ ಬ್ರಾಂಚ್ ಪೊಲೀಸರು ಈ ಘಟನೆ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಪರಾರಿಯಾಗಿರುವ ಕಳ್ಳನಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.
ಪೊಲೀಸರು ಹೇಳಿದ್ದೇನು?
ಘಟನೆ ಕುರಿತು ಮುಂಬೈ ಪೊಲೀಸರು ಹೇಳಿಕೆ ಬಿಡುಗಡೆ ಮಾಡಿದ್ದಾರೆ. ನಿನ್ನೆ ರಾತ್ರಿ ಅಪರಿಚಿತ ವ್ಯಕ್ತಿಯೊಬ್ಬ ನಟ ಸೈಫ್ ಅಲಿ ಖಾನ್ ಮನೆಗೆ ನುಗ್ಗಿ ಆತನ ಸೇವಕಿ ಜೊತೆ ಜಗಳವಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಅವರು ಮಧ್ಯಪ್ರವೇಶಿಸಿ ವ್ಯಕ್ತಿಯನ್ನು ಶಾಂತಗೊಳಿಸಲು ಪ್ರಯತ್ನಿಸಿದಾಗ, ಅವರು ಸೈಫ್ ಅಲಿ ಖಾನ್ ಮೇಲೆ ಹಲ್ಲೆ ನಡೆಸಿ ಗಾಯಗೊಳಿಸಿದ್ದಾರೆ.
ಕರೀನಾ, ಮಕ್ಕಳು ಸೇಫ್
ಸೈಫ್ ಪತ್ನಿ, ನಟಿ ಕರೀನಾ ಕಪೂರ್, ಅವರ ಮಕ್ಕಳು ಸುರಕ್ಷಿತವಾಗಿದ್ದಾರೆ. ಘಟನೆ ಕುರಿತು ಕುಟುಂಬಸ್ಥರು ಇನ್ನೂ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ. ಘಟನೆ ಬಳಿಕ ಕಳ್ಳ ತಲೆಮರೆಸಿಕೊಂಡಿದ್ದಾನೆ. ಆತನನ್ನು ಹಿಡಿಯಲು ಮುಂಬೈ ಪೊಲೀಸರು ಮತ್ತು ಅಪರಾಧ ವಿಭಾಗದ ತಂಡ ನಿರತವಾಗಿದೆ.
Saif Ali Khan Attacked by Unknown Person at Mumbai Residence, Hospitalized with Serious Injuries