ನೇಗಿಲ ಯೋಗಿ ಯೋಜನೆ, ಬಡವರಿಗೆ 15 ಲಕ್ಷ ಉಚಿತ ಸೈಟ್ ಹಂಚಿಕೆ! ಬಂಪರ್ ಕೊಡುಗೆ, ಮಹತ್ವದ ಯೋಜನೆಗಳು ಘೋಷಣೆ
ಸಿಎಂ ಡಿಕೆ ಶಿವಕುಮಾರ್ ನೇತೃತ್ವದ ಸರ್ಕಾರದ 100 ದಿನಗಳ ಹಿನ್ನೆಲೆಯಲ್ಲಿ ನಡೆದ ಸಂಪುಟ ಸಭೆಯಲ್ಲಿ ಬಡವರು, ರೈತರು, ಮಹಿಳೆಯರು, ವಿದ್ಯಾರ್ಥಿಗಳು ಹಾಗೂ ಕಾರ್ಮಿಕರಿಗೆ ಹಲವು ಮಹತ್ವದ ಯೋಜನೆ ಘೋಷಿಸಲಾಗಿದೆ.

- 15 ಲಕ್ಷ ಉಚಿತ ನಿವೇಶನ ಹಂಚಿಕೆಗೆ ನಿರ್ಧಾರ
- ಸ್ಮಾರ್ಟ್‌ಕಾರ್ಡ್ ಮೂಲಕ ಉಚಿತ ಬಸ್ ಪ್ರಯಾಣ
- ರೈತರು, ಕಾರ್ಮಿಕರು, ವಿದ್ಯಾರ್ಥಿಗಳಿಗೆ ಹಲವು ಯೋಜನೆ
ಬೆಂಗಳೂರು (Bengaluru) ಸೆಪ್ಟೆಂಬರ್ 10: ಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ನೇತೃತ್ವದ ರಾಜ್ಯ ಸರ್ಕಾರ (Karnataka Government) 100 ದಿನಗಳನ್ನು ಪೂರೈಸಿರುವ ಹಿನ್ನೆಲೆಯಲ್ಲಿ ಸಂಪುಟ ಸಭೆಯಲ್ಲಿ ಹಲವು ಮಹತ್ವದ ನಿರ್ಧಾರಗಳನ್ನು ಕೈಗೊಳ್ಳಲಾಗಿದೆ. ಬಡವರು, ಮಹಿಳೆಯರು, ರೈತರು, ವಿದ್ಯಾರ್ಥಿಗಳು ಹಾಗೂ ಕಾರ್ಮಿಕರನ್ನು ಗಮನದಲ್ಲಿಟ್ಟುಕೊಂಡು ವಿವಿಧ ಯೋಜನೆಗಳಿಗೆ ಅನುಮೋದನೆ ನೀಡಲಾಗಿದೆ.
ಇವುಗಳಲ್ಲಿ ರಾಜ್ಯಾದ್ಯಂತ ಬಡವರಿಗೆ 15 ಲಕ್ಷ ಉಚಿತ ನಿವೇಶನ ಹಂಚಿಕೆ ಮಾಡುವ ಗುರಿ ಪ್ರಮುಖವಾಗಿದೆ. ಪ್ರತಿ ಜಿಲ್ಲೆಯಲ್ಲಿ 50 ಸಾವಿರ ನಿವೇಶನ ಹಂಚಿಕೆ ಮಾಡುವ ಉದ್ದೇಶ ಹೊಂದಲಾಗಿದ್ದು, ಮೊದಲ ಹಂತದಲ್ಲಿ 30 ಜಿಲ್ಲೆಗಳಲ್ಲಿ 5 ಲಕ್ಷ ಸೈಟ್‌ಗಳನ್ನು ಹಂಚಿಕೆ ಮಾಡಲು ಕ್ರಮ ಕೈಗೊಳ್ಳಲಾಗುತ್ತಿದೆ. ನಿವೇಶನಕ್ಕಾಗಿ ಸ್ಥಳ ಗುರುತಿಸುವಂತೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.
ನಿವೇಶನ ಹಂಚಿಕೆಯಲ್ಲಿ ಎಸ್‌ಸಿ, ಎಸ್‌ಟಿ ಮತ್ತು ಒಬಿಸಿ (SC, ST and OBC) ವರ್ಗಗಳಿಗೆ ಆದ್ಯತೆ ನೀಡಲು ನಿರ್ಧರಿಸಲಾಗಿದೆ. ಈ ಯೋಜನೆಯಿಂದ ಸ್ವಂತ ಜಾಗದ ನಿರೀಕ್ಷೆಯಲ್ಲಿರುವ ಬಡ ಕುಟುಂಬಗಳಿಗೆ ಅನುಕೂಲವಾಗುವ ಸಾಧ್ಯತೆಯಿದೆ.
ಇನ್ನು ಮಹಿಳೆಯರ ಉಚಿತ ಬಸ್ ಪ್ರಯಾಣಕ್ಕೆ ಸಂಬಂಧಿಸಿದಂತೆ ಹೊಸ ಸ್ಮಾರ್ಟ್‌ಕಾರ್ಡ್ (Smart Card) ನೀಡಲು ಸಂಪುಟ ಸಭೆ ಒಪ್ಪಿಗೆ ಸೂಚಿಸಿದೆ. ಶಕ್ತಿ ಯೋಜನೆಯಡಿ ಇದುವರೆಗೆ ಆಧಾರ್ ಕಾರ್ಡ್ ಬಳಸಿ ಉಚಿತ ಪ್ರಯಾಣ ಮಾಡುತ್ತಿದ್ದ ಮಹಿಳೆಯರು ಮುಂದೆ ಸ್ಮಾರ್ಟ್‌ಕಾರ್ಡ್ ತೋರಿಸಿ ಪ್ರಯಾಣಿಸಲು ಅವಕಾಶ ಕಲ್ಪಿಸುವ ಉದ್ದೇಶ ಸರ್ಕಾರದ್ದಾಗಿದೆ.
ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ‘ಮುಖ್ಯಮಂತ್ರಿ ನೇಗಿಲ ಯೋಗಿ’ ಯೋಜನೆಗೂ ಅನುಮೋದನೆ ನೀಡಲಾಗಿದೆ. ಮೂರು ಎಕರೆಗಿಂತ ಕಡಿಮೆ ಜಮೀನು ಹೊಂದಿರುವ ಬಡ ರೈತರ ಹೊಲಗಳನ್ನು ಉಳುಮೆ ಮಾಡಲು ಸರ್ಕಾರವೇ ಟ್ರ್ಯಾಕ್ಟರ್‌ಗಳನ್ನು ಬಾಡಿಗೆಗೆ ಪಡೆದು ಸೇವೆ ಒದಗಿಸುವ ಯೋಜನೆ ಇದಾಗಿದೆ. ಕೃಷಿ ಕೆಲಸಕ್ಕೆ ಕಾರ್ಮಿಕರ ಕೊರತೆ ಎದುರಾಗುತ್ತಿರುವ ಸಂದರ್ಭದಲ್ಲಿ ಈ ಕ್ರಮ ರೈತರಿಗೆ ನೆರವಾಗುವ ನಿರೀಕ್ಷೆಯಿದೆ.
ಕಾಲೇಜು ಮತ್ತು ವಿಶ್ವವಿದ್ಯಾಲಯಗಳಲ್ಲಿ ಮತ್ತೆ ವಿದ್ಯಾರ್ಥಿ ಸಂಘಗಳ ಚುನಾವಣೆ (Student Elections) ನಡೆಸಲು ಕೂಡ ಸಂಪುಟ ಸಭೆ ಅಸ್ತು ಎಂದಿದೆ. ವಿದ್ಯಾರ್ಥಿಗಳಲ್ಲಿ ನಾಯಕತ್ವ ಗುಣ, ಜವಾಬ್ದಾರಿ ಮತ್ತು ಪ್ರಜಾಪ್ರಭುತ್ವದ ಅರಿವು ಬೆಳೆಸುವುದು ಇದರ ಉದ್ದೇಶ ಎಂದು ಸರ್ಕಾರ ತಿಳಿಸಿದೆ.
ಕಾರ್ಮಿಕರಿಗಾಗಿ ‘ಶ್ರಮಿಕ ನಿವಾಸ’ ಯೋಜನೆ ಜಾರಿಗೆ ತರಲು ನಿರ್ಧರಿಸಲಾಗಿದೆ. ಕೈಗಾರಿಕೆಗಳಲ್ಲಿ ಕೆಲಸ ಮಾಡುವ ನೌಕರರು ಉದ್ಯೋಗದ ಸ್ಥಳದ ಸಮೀಪದಲ್ಲೇ ವಾಸಿಸಲು ಮನೆಗಳನ್ನು ನಿರ್ಮಿಸುವ ಉದ್ದಿಮೆಗಳಿಗೇ ಬಂಡವಾಳ ಸಹಾಯಧನ (Capital Subsidy) ನೀಡುವ ಪ್ರಸ್ತಾವನೆಗೆ ಅನುಮೋದನೆ ನೀಡಲಾಗಿದೆ. ಆರಂಭಿಕ ಹಂತದಲ್ಲಿ 10 ಸಾವಿರ ಮನೆ ನಿರ್ಮಿಸುವ ಯೋಜನೆ ರೂಪಿಸಲಾಗಿದೆ.
ಇದರ ಜೊತೆಗೆ 10 ಜಿಲ್ಲೆಗಳಲ್ಲಿ ಉದ್ಯೋಗ ನಿಧಿ ಯೋಜನೆ (Employment Incentive) ಜಾರಿಗೆ ತರಲು ನಿರ್ಧರಿಸಲಾಗಿದೆ. ಹೊಸ ಉದ್ಯೋಗ ಸೃಷ್ಟಿಸುವ ಕಂಪನಿಗಳಿಗೆ ಪ್ರತಿ ಹೊಸ ಉದ್ಯೋಗಿಯ ಮೇಲೆ ತಿಂಗಳಿಗೆ 2,500 ರೂಪಾಯಿ ಪ್ರೋತ್ಸಾಹಧನ ನೀಡುವ ಯೋಜನೆ ಇದಾಗಿದೆ.
ರೈತರಿಗೆ ತೇಗದ ಸಸಿಗಳನ್ನು ಒದಗಿಸುವ ‘ತೇಗ ಸಿರಿ’ ಯೋಜನೆಗೂ ಸಂಪುಟ ಸಭೆಯಲ್ಲಿ ಅನುಮೋದನೆ ದೊರೆತಿದೆ. ಸರ್ಕಾರದ 100 ದಿನಗಳ ಪೂರ್ಣತೆಯ ಸಂದರ್ಭದಲ್ಲಿ ಘೋಷಿಸಿರುವ ಈ ನಿರ್ಧಾರಗಳು ವಿವಿಧ ವರ್ಗಗಳ ಜನರಿಗೆ ನೆರವಾಗುವ ಉದ್ದೇಶ ಹೊಂದಿವೆ ಎಂದು ಸರ್ಕಾರ ತಿಳಿಸಿದೆ.



