Karnataka AQI: ಬೆಂಗಳೂರು ಗಾಳಿ ಇನ್ನೂ ಸುರಕ್ಷಿತವಲ್ಲ, ಕರ್ನಾಟಕ ರಾಜ್ಯದ ಹಲವೆಡೆ ಏರ್ ಕ್ವಾಲಿಟಿ ಆತಂಕಕಾರಿ
Karnataka AQI: ಬೆಂಗಳೂರು ಸೇರಿದಂತೆ ಕರ್ನಾಟಕದ ಹಲವೆಡೆ ವಾಯು ಗುಣಮಟ್ಟ ಕಳಪೆ ಮಟ್ಟದಲ್ಲೇ ಮುಂದುವರಿದಿದ್ದು, ಕೆಲವು ಜಿಲ್ಲೆಗಳಲ್ಲಿ AQI 200ರ ಗಡಿ ದಾಟಿರುವುದು ಆರೋಗ್ಯದ ಬಗ್ಗೆ ಗಂಭೀರ ಆತಂಕ ಮೂಡಿಸಿದೆ

- ಬೆಂಗಳೂರು ನಗರದಲ್ಲಿ AQI ಇನ್ನೂ ಕಳಪೆ ಮಟ್ಟ
- ಬಳ್ಳಾರಿ, ಶಿವಮೊಗ್ಗದಲ್ಲಿ ಗಾಳಿ ಮತ್ತಷ್ಟು ಹದಗೆಟ್ಟಿದೆ
- ಶ್ವಾಸಕೋಶ ಕಾಯಿಲೆಗಳ ಅಪಾಯ ಹೆಚ್ಚಳ
ಬೆಂಗಳೂರು (Bengaluru): ಕರ್ನಾಟಕ ರಾಜ್ಯದಲ್ಲಿ ವಾಯು ಮಾಲಿನ್ಯ ಸಮಸ್ಯೆ ದಿನದಿಂದ ದಿನಕ್ಕೆ ಗಂಭೀರವಾಗುತ್ತಿದೆ. ಬೆಂಗಳೂರಿನಲ್ಲಿ ಕಳೆದ ಕೆಲ ದಿನಗಳ ಹಿಂದೆ 200ರ ಗಡಿ ದಾಟಿದ್ದ ಏರ್ ಕ್ವಾಲಿಟಿ (Karnataka Air Quality) ಇಂಡೆಕ್ಸ್ ಇಂದು 182ರ ಮಟ್ಟದಲ್ಲಿ ದಾಖಲಾಗಿದೆ.
ಅಂಕೆಗಳಲ್ಲಿ ಸ್ವಲ್ಪ ಇಳಿಕೆ ಕಂಡರೂ, ಆರೋಗ್ಯದ ದೃಷ್ಟಿಯಿಂದ ಇದು ಇನ್ನೂ ಸುರಕ್ಷಿತ ಮಟ್ಟದಲ್ಲಿಲ್ಲ ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ.
ಬೆಂಗಳೂರು (Bengaluru AQI) ಮಾತ್ರವಲ್ಲದೆ ಮಂಗಳೂರು, ಶಿವಮೊಗ್ಗ ಮತ್ತು ಬಳ್ಳಾರಿ ಜಿಲ್ಲೆಗಳಲ್ಲೂ ವಾಯು ಗುಣಮಟ್ಟ ತೀವ್ರವಾಗಿ ಕುಸಿದಿದೆ. ವಿಶೇಷವಾಗಿ ಬಳ್ಳಾರಿಯಲ್ಲಿ AQI 204ಕ್ಕೆ ಏರಿದ್ದು, ಇದು “ಗಂಭೀರ” ಹಂತದತ್ತ ಸಾಗುತ್ತಿರುವ ಸೂಚನೆ ನೀಡುತ್ತಿದೆ. ಶಿವಮೊಗ್ಗದಲ್ಲಿ 182 ಮತ್ತು ಮಂಗಳೂರಿನಲ್ಲಿ 174 AQI ದಾಖಲಾಗಿದ್ದು, ಈ ಜಿಲ್ಲೆಗಳು ಬೆಂಗಳೂರಿಗಿಂತಲೂ ಕಳಪೆ ಗಾಳಿಯ ಪಟ್ಟಿಗೆ ಸೇರಿವೆ.
ತಜ್ಞರ ಪ್ರಕಾರ, ಈ ರೀತಿಯ ಕಲುಷಿತ ವಾತಾವರಣ ದೀರ್ಘಕಾಲ ಮುಂದುವರೆದರೆ ದೆಹಲಿಯಂತಹ ಪರಿಸ್ಥಿತಿ ರಾಜ್ಯದಲ್ಲೂ ಎದುರಾಗುವ ಸಾಧ್ಯತೆ ಇದೆ. ಶ್ವಾಸಕೋಶ ಕ್ಯಾನ್ಸರ್, ಅಸ್ತಮಾ, ಹೃದಯ ಸಂಬಂಧಿ ಕಾಯಿಲೆಗಳು ಹಾಗೂ ಉಸಿರಾಟದ ತೊಂದರೆಗಳ ಅಪಾಯ ಈ ಕಾರಣದಿಂದ ಹೆಚ್ಚಾಗುತ್ತಿದೆ.
ಇದನ್ನೂ ಓದಿ: ಬೆಂಗಳೂರು ಸೇರಿ ಕರ್ನಾಟಕ ರಾಜ್ಯದೆಲ್ಲೆಡೆ ಚಳಿ, ಮಂಜು ಮತ್ತು ತಂಪು ಗಾಳಿ ಪ್ರಭಾವ
ಇದಕ್ಕೆ ಪ್ರಮುಖ ಕಾರಣವಾಗಿರುವುದು PM2.5 ಮತ್ತು PM10 ಎಂಬ ಸೂಕ್ಷ್ಮ ಕಣಗಳು. ಮಾನವನ ಕೂದಲಿಗಿಂತಲೂ ಬಹಳ ಸಣ್ಣ ಗಾತ್ರದ ಈ ಕಣಗಳು ಉಸಿರಾಟದ ಮೂಲಕ ನೇರವಾಗಿ ಶ್ವಾಸಕೋಶದೊಳಗೆ ಪ್ರವೇಶಿಸಿ ರಕ್ತ ಪ್ರವಾಹಕ್ಕೂ ಸೇರುತ್ತವೆ. ಇಂದಿನ ಅಂಕಿಅಂಶಗಳ ಪ್ರಕಾರ PM2.5 ಪ್ರಮಾಣ 84 ಮತ್ತು PM10 ಪ್ರಮಾಣ 109ರಷ್ಟಿದೆ. ಇದರಿಂದ ಮಕ್ಕಳಿಂದ ಹಿಡಿದು ವೃದ್ಧರವರೆಗೂ ಎಲ್ಲರೂ ಎಚ್ಚರಿಕೆಯಿಂದ ಇರಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ರಾಜ್ಯದ ಇತರ ನಗರಗಳ ಇಂದಿನ ಗಾಳಿಯ ಗುಣಮಟ್ಟವನ್ನು ನೋಡಿದರೆ, ಬೆಂಗಳೂರು (180), ಮಂಗಳೂರು (174), ಮೈಸೂರು (175), ಬೆಳಗಾವಿ (156), ಕಲಬುರ್ಗಿ (170), ಶಿವಮೊಗ್ಗ (182), ಬಳ್ಳಾರಿ (204), ಹುಬ್ಬಳ್ಳಿ (166), ಉಡುಪಿ (176) ಹಾಗೂ ವಿಜಯಪುರ (174) AQI ದಾಖಲಾಗಿದೆ.
ಇದನ್ನೂ ಓದಿ: ಬೆಂಗಳೂರು ಭಾಗದ ಈ ಏರಿಯಾಗಳಲ್ಲಿ 2 ದಿನ ಕಾವೇರಿ ನೀರು ವ್ಯತ್ಯಯ
ತಜ್ಞರು ಹೊರಗಡೆ ಹೆಚ್ಚು ಸಮಯ ಕಳೆಯುವುದನ್ನು ತಪ್ಪಿಸಲು, ಮಾಸ್ಕ್ ಬಳಕೆ ಮತ್ತು ಮಕ್ಕಳ ಆರೋಗ್ಯದ ಮೇಲೆ ವಿಶೇಷ ಗಮನ ನೀಡಲು ಸಲಹೆ ನೀಡಿದ್ದಾರೆ.
ಗಾಳಿಯ ಗುಣಮಟ್ಟದ ಅಳತೆ ಪ್ರಕಾರ, 0–50 ಉತ್ತಮ, 50–100 ಮಧ್ಯಮ, 100–150 ಕಳಪೆ, 150–200 ಅನಾರೋಗ್ಯಕರ, 200–300 ಗಂಭೀರ ಮತ್ತು 300ಕ್ಕಿಂತ ಮೇಲು ಅಪಾಯಕಾರಿ ಎಂದು ವರ್ಗೀಕರಿಸಲಾಗಿದೆ. ಇಂದಿನ ಬಹುತೇಕ ನಗರಗಳು ಅನಾರೋಗ್ಯಕರ ಹಂತದಲ್ಲಿರುವುದು ಆತಂಕಕಾರಿ ಸಂಗತಿಯಾಗಿದೆ.



