ಬೆಳಗಾವಿ ಬಿಮ್ಸ್ ಆಸ್ಪತ್ರೆಯಲ್ಲಿ ಮತ್ತೋರ್ವ ಬಾಣಂತಿ ದುರ್ಮರಣ
ಜನವರಿ 31ರಂದು ವೈದ್ಯರು ಕುಟುಂಬಸ್ಥರಿಗೆ ಅವರ ಬಿಪಿ ಲೋ ಆಗಿದೆ, ಪರಿಸ್ಥಿತಿ ಗಂಭೀರವಾಗಿದೆ ಎಂದು ಮಾಹಿತಿ ನೀಡಿದ್ದರು. ಕೆಲವೇ ಹೊತ್ತಿನಲ್ಲೇ ಅವರು ಮೃತಪಟ್ಟಿದ್ದಾರೆ.
Belagavi : ಬಿಮ್ಸ್ ಆಸ್ಪತ್ರೆಯಲ್ಲಿ (BIMS Hospital) ಮತ್ತೋರ್ವ ಬಾಣಂತಿ ಸಾವಿನ ಪ್ರಕರಣ ನಡೆದಿದೆ. ಬೆಳಗಾವಿ ತಾಲೂಕಿನ ಕರಡಿಗುದ್ದಿ ಗ್ರಾಮದ ಗಂಗವ್ವ ಗೊಡಕುಂದ್ರಿ (31) ಎಂಬವರು ಮೃತಪಟ್ಟ ದುರ್ದೈವಿ. ಅವರು ಜನವರಿ 28ರಂದು ಬೆಳಗಾವಿಯ ಬಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದರು ಮತ್ತು ಜನವರಿ 30ರ ರಾತ್ರಿ ಹೆರಿಗೆ ನಡೆದಿತ್ತು.
ಹೆರಿಗೆ ನಂತರ ಗಂಗವ್ವ ಗೊಡಕುಂದ್ರಿ ಆರೋಗ್ಯದಲ್ಲಿ ಏರುಪೇರು ಕಾಣಿಸಿಕೊಂಡಿತ್ತು. ಜನವರಿ 31ರಂದು ವೈದ್ಯರು ಕುಟುಂಬಸ್ಥರಿಗೆ ಅವರ ಬಿಪಿ ಲೋ ಆಗಿದೆ, ಪರಿಸ್ಥಿತಿ ಗಂಭೀರವಾಗಿದೆ ಎಂದು ಮಾಹಿತಿ ನೀಡಿದ್ದರು. ಕೆಲವೇ ಹೊತ್ತಿನಲ್ಲೇ ಅವರು ಮೃತಪಟ್ಟಿದ್ದಾರೆ.
ಮರಣ ನಂತರ, ವೈದ್ಯರು ಕುಟುಂಬದಿಂದ ಖಾಲಿ ಪೇಪರ್ ಮೇಲೆ ಸಹಿ ಪಡೆದು ಮೃತದೇಹವನ್ನು ನೀಡಿದರೆಂದು ಆರೋಪಿಸಲಾಗಿದೆ. ಗಂಗವ್ವ ಅವರ ಸಹೋದರ ಶಂಕರಪ್ಪ, “ಸಮಯಕ್ಕೆ ಸರಿಯಾದ ಚಿಕಿತ್ಸೆ ನೀಡಿದ್ದರೆ ಅಕ್ಕ ಬದುಕಬಹುದಿತ್ತು. ವೈದ್ಯರ ನಿರ್ಲಕ್ಷ್ಯವೇ (Medical Negligence) ಸಾವಿಗೆ ಕಾರಣ” ಎಂದು ಆರೋಪಿಸಿದ್ದಾರೆ. ಈ ಸಂಬಂಧ ಬೆಳಗಾವಿಯ ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Another Tragic Death at Belagavi BIMS Hospital