ಆಸ್ತಿ ಆಸೆಗೆ ಅಜ್ಜಿಯನ್ನೇ ಕೊಂದ ಮಗ, ಸೊಸೆ! 7 ತಿಂಗಳ ಬಳಿಕ ಸತ್ಯ ಬಯಲು

ಬೀಳಗಿಯಲ್ಲಿ ಏಳು ತಿಂಗಳ ಹಿಂದೆ ನಡೆದಿದ್ದ ಗೌರವ್ವ ಕೊಡೆಕಲ್ ಕೊಲೆ ಪ್ರಕರಣವನ್ನು ಪೊಲೀಸರು ಭೇದಿಸಿದ್ದಾರೆ. ಆಸ್ತಿ ವಿವಾದದ ಹಿನ್ನೆಲೆಯಲ್ಲಿ ಮಗ, ಸೊಸೆ ಸೇರಿದಂತೆ ಮೂವರನ್ನು ಬಂಧಿಸಿದ್ದು, ತನಿಖೆಯಲ್ಲಿ ಮಹತ್ವದ ಸಂಗತಿಗಳು ಬಯಲಾಗಿವೆ.

ಬಾಗಲಕೋಟೆ (Bagalkot): ಏಳು ತಿಂಗಳ ಹಿಂದೆ ಬೀಳಗಿ ಪಟ್ಟಣದ ದೇವಸ್ಥಾನದಲ್ಲಿ ನಡೆದಿದ್ದ 65 ವರ್ಷದ ಗೌರವ್ವ ಕೊಡೆಕಲ್ ಅವರ ಕೊಲೆ ಪ್ರಕರಣಕ್ಕೆ ಕೊನೆಗೂ ತಿರುವು ಸಿಕ್ಕಿದೆ. ಪ್ರಕರಣದ ಸಂಬಂಧ ಮೃತರ ಕಿರಿಯ ಮಗ ಪಡಿಯಪ್ಪ, ಸೊಸೆ ಶಾಂತವ್ವ ಹಾಗೂ ಆಕೆಯ ಸಂಬಂಧಿ ಶಂಕರ್ ಎಂಬುವವರನ್ನು ಪೊಲೀಸರು ಬಂಧಿಸಿದ್ದಾರೆ.

ಮಾರ್ಚ್ 18 ಮತ್ತು 19ರ ಮಧ್ಯರಾತ್ರಿ ಬೀಳಗಿಯ ಕಟಕರ ಓಣಿಯ ಬೀರದೇವರ ದೇವಸ್ಥಾನದಲ್ಲಿ ಮಲಗಿದ್ದ ಗೌರವ್ವ ಅವರ ತಲೆ ಮೇಲೆ ಕಲ್ಲು ಎತ್ತಿಹಾಕಿ ಕೊಲೆ ಮಾಡಲಾಗಿತ್ತು.

ಪೊಲೀಸರು ರೇಖಾಚಿತ್ರ ಹಾಗೂ ಎಐ ತಂತ್ರಜ್ಞಾನದ ನೆರವಿನಿಂದ ತನಿಖೆ ನಡೆಸಿ, ಸಾವಿರಾರು ಜನರ ಗುರುತಿನ ಚೀಟಿಗಳನ್ನು ಪರಿಶೀಲಿಸಿದ್ದರು. ಬಳಿಕ ಸ್ಥಳೀಯರಿಂದ ಸಿಕ್ಕ ಮಾಹಿತಿ ಆಧರಿಸಿ ಕುಟುಂಬದವರ ಮೇಲೆ ಅನುಮಾನ ವ್ಯಕ್ತಪಡಿಸಿ ವಿಚಾರಣೆ ನಡೆಸಿದಾಗ ಪ್ರಕರಣದ ರಹಸ್ಯ ಬಯಲಾಗಿದೆ.

ಇದನ್ನೂ ಓದಿ: ಘೋರ ದುರಂತ: ವಿದ್ಯುತ್ ಶಾಕ್‌ಗೆ ತಾಯಿ-ಮಗ ದಾರುಣ ಸಾವು

ಗೌರವ್ವ ಅವರ ಹೆಸರಿನಲ್ಲಿದ್ದ ಐದು ಎಕರೆ ಜಮೀನನ್ನು ತಮ್ಮ ಹೆಸರಿಗೆ ವರ್ಗಾಯಿಸಬೇಕೆಂಬ ಆಸೆ ಕೊಲೆಗೆ ಕಾರಣವಾಗಿತ್ತು ಎನ್ನಲಾಗಿದೆ. ಈ ಸಂಬಂಧ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

ಸ್ಥಳೀಯರ ಪ್ರಕಾರ, ಗೌರವ್ವ ಅವರು ಹಲವು ವರ್ಷಗಳಿಂದ ಕುಟುಂಬದಿಂದ ದೂರವಾಗಿ ದೇವಸ್ಥಾನದಲ್ಲಿ ವಾಸಿಸುತ್ತಿದ್ದರು. ಮಕ್ಕಳಿಂದ ಕಿರುಕುಳ ಅನುಭವಿಸುತ್ತಿದ್ದ ಅವರು, ಜೀವನ ನಿರ್ವಹಣೆಗಾಗಿ ದೇವಸ್ಥಾನದಲ್ಲಿ ಸ್ವಚ್ಛತಾ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ. ಪ್ರಕರಣದಲ್ಲಿ ಆರೋಪಿಗಳ ಪಾತ್ರದ ಕುರಿತು ಪೊಲೀಸರು ಹೆಚ್ಚಿನ ತನಿಖೆ ಮುಂದುವರಿಸಿದ್ದಾರೆ.

English Summary▼

ಕರ್ನಾಟಕ ರಾಜ್ಯದ ಮೂಲೆಮೂಲೆಗಳ ಕನ್ನಡ ಸುದ್ದಿಗಳ ಜೊತೆಗೆ ದಿನದ ಪ್ರಮುಖ ಬೆಳವಣಿಗೆಗಳನ್ನು Kannada News Today ಮೂಲಕ ತಿಳಿಯಿರಿ.

Satish Raj Goravigere

12 ವರ್ಷಗಳ ಪತ್ರಿಕಾ ಅನುಭವ ಹೊಂದಿರುವ ಸತೀಶ್ ರಾಜ್ ಗೊರವಿಗೆರೆ ರವರು, 2019ರಲ್ಲಿ ಕನ್ನಡ ನ್ಯೂಸ್ ಟುಡೇ ಸ್ಥಾಪಿಸಿದವರು. ಬೆಂಗಳೂರು, ಕರ್ನಾಟಕ ಹಾಗೂ ರಾಷ್ಟ್ರೀಯ… More »

Related Stories