ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಚೆಂಡಿನಾಕಾರದ ಶಂಕಿತ ಬಾಂಬ್ ಸ್ಫೋಟ! ಬಾಲಕನಿಗೆ ಗಾಯ

ದಕ್ಷಿಣ ಕನ್ನಡದ ಬೆಳ್ತಂಗಡಿ ತಾಲೂಕಿನ ಬಂದಾರು ಗ್ರಾಮದಲ್ಲಿ ಚೆಂಡಿನಾಕಾರದ ಶಂಕಿತ ಬಾಂಬ್ ಸ್ಫೋಟಗೊಂಡು ಬಾಲಕ ಗಾಯಗೊಂಡಿದ್ದಾನೆ. ಬ್ಯಾಟ್‌ಗೆ ತಾಗುತ್ತಿದ್ದಂತೆ ಸ್ಫೋಟ ಸಂಭವಿಸಿ ಗ್ರಾಮದಲ್ಲಿ ಆತಂಕ ಉಂಟಾಗಿದೆ.

ಮನೆ ಅಂಗಳದಲ್ಲಿ ಕ್ರಿಕೆಟ್ ಆಟವಾಡುತ್ತಿದ್ದ ಮಕ್ಕಳಿಗೆ ಚೆಂಡಿನಂತೆ ಕಾಣಿಸಿದ ವಸ್ತುವೊಂದು ಸಿಕ್ಕಿತ್ತು. ಸಾಮಾನ್ಯ ಬಾಲ್ ಎಂದುಕೊಂಡು ಆಟ ಮುಂದುವರಿಸಿದ ಅವರು, ಅದನ್ನೇ ಬಳಸಿ ಬೌಲಿಂಗ್ ಮಾಡಿದ್ದಾರೆ. ಬ್ಯಾಟ್‌ಗೆ ತಾಗುತ್ತಿದ್ದಂತೆಯೇ ಭಾರೀ ಸದ್ದು ಕೇಳಿ ಸ್ಫೋಟ ಸಂಭವಿಸಿದೆ.

ಈ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಬಂದಾರು ಗ್ರಾಮದಲ್ಲಿ ನಡೆದಿದೆ. ಸ್ಫೋಟದಲ್ಲಿ ಅಭೀಶ್ ಎಂಬ ಬಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ತಕ್ಷಣವೇ ಬೆಳ್ತಂಗಡಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ವೈದ್ಯರು ಬಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ ಎಂದು ತಿಳಿಸಿದ್ದಾರೆ.

ಪ್ರಾಥಮಿಕ ಮಾಹಿತಿಯ ಪ್ರಕಾರ, ಇದು ಕಾಡು ಹಂದಿ ಬೇಟೆಗಾಗಿ ಅಡಗಿಸಿದ್ದ ಸ್ಫೋಟಕವಾಗಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಸದ್ಯ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸ್ಫೋಟಕಗಳ ಕಾಯ್ದೆ ಹಾಗೂ BNS ಕಾಯ್ದೆಯ ಅಡಿಯಲ್ಲಿ ತನಿಖೆ ಆರಂಭಿಸಲಾಗಿದೆ.

ಘಟನೆಯ ನಂತರ ಗ್ರಾಮದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಅಪರಿಚಿತ ವಸ್ತುಗಳನ್ನು ಮಕ್ಕಳಿಗೆ ಸ್ಪರ್ಶಿಸದಂತೆ ಜಾಗೃತಿ ಮೂಡಿಸುವ ಅಗತ್ಯವಿದೆ ಎಂದು ಸ್ಥಳೀಯರು ಅಭಿಪ್ರಾಯಪಟ್ಟಿದ್ದಾರೆ.

Related Stories