Ration Card: ರೇಷನ್ ಕಾರ್ಡ್ ರದ್ದಾಗಿದ್ದರೆ, ಅರ್ಜಿ ಸಲ್ಲಿಸಿ! 15 ದಿನದಲ್ಲಿ ಬಿಪಿಎಲ್ ಕಾರ್ಡ್ ವಿತರಣೆ

ಬಿಪಿಎಲ್ ಪಡಿತರ ಕಾರ್ಡ್ ರದ್ದಾಗಿದ್ದವರು ತಹಶೀಲ್ದಾರ್ ಕಚೇರಿಗೆ ಅರ್ಜಿ ಸಲ್ಲಿಸಿದರೆ 15 ದಿನಗಳಲ್ಲಿ ಕಾರ್ಡ್ ವಿತರಿಸಲಾಗುತ್ತದೆ ಎಂದು ಆಹಾರ ಸಚಿವ ಕೆ.ಹೆಚ್. ಮುನಿಯಪ್ಪ ಸ್ಪಷ್ಟಪಡಿಸಿದ್ದಾರೆ.

  • ಬಿಪಿಎಲ್ ಕಾರ್ಡ್ ವಿತರಣೆ ಅರ್ಜಿಗೆ 15 ದಿನಗಳ ಗಡುವು
  • ಇಂದಿರಾ ಕಿಟ್ ಯೋಜನೆ ಜನವರಿ–ಫೆಬ್ರವರಿಯಲ್ಲಿ ಜಾರಿ
  • ಅಕ್ರಮ ಪಡಿತರ ಸಾಗಾಟ ತಡೆಗೆ ಕಠಿಣ ಕ್ರಮ

ಬೆಂಗಳೂರು (Bengaluru): ಬಿಪಿಎಲ್ ರೇಷನ್ ಕಾರ್ಡ್ (BPL Ration Card) ರದ್ದಾಗಿರುವವರು ಆತಂಕಪಡಬೇಕಾಗಿಲ್ಲ. ತಹಶೀಲ್ದಾರ್ ಕಚೇರಿಗೆ ಭೇಟಿ ನೀಡಿ ಹೊಸದಾಗಿ ಅರ್ಜಿ ಸಲ್ಲಿಸಿದರೆ, ಪರಿಶೀಲನೆಯ ನಂತರ 15 ದಿನಗಳೊಳಗೆ ಪಡಿತರ ಕಾರ್ಡ್ ವಿತರಿಸಲಾಗುತ್ತದೆ ಎಂದು ಆಹಾರ ಸಚಿವ ಕೆ.ಹೆಚ್. ಮುನಿಯಪ್ಪ (K.H. Muniyappa) ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಅನರ್ಹವಾಗಿ ಬಿಪಿಎಲ್ ಕಾರ್ಡ್ ಹೊಂದಿರುವವರನ್ನು ಪತ್ತೆಹಚ್ಚುವ ಕಾರ್ಯವೂ ನಡೆಯುತ್ತಿದೆ ಎಂದು ಹೇಳಿದರು.

ಇಂದಿರಾ ಕಿಟ್ ಯೋಜನೆಯ (Indira Kit Scheme) ಕುರಿತು ಮಾತನಾಡಿದ ಸಚಿವರು, ಅಕ್ಕಿ ವಿತರಣೆ ಹೆಚ್ಚಿರುವುದರಿಂದ ಎಲ್ಲಾ ಕುಟುಂಬಗಳು ಅಷ್ಟು ಪ್ರಮಾಣದ ಅಕ್ಕಿಯನ್ನು ಬಳಸುವುದಿಲ್ಲ ಎಂಬ ಅಂಶವನ್ನು ಗಮನದಲ್ಲಿಟ್ಟುಕೊಂಡು ಹೊಸ ಯೋಜನೆ ರೂಪಿಸಲಾಗಿದೆ ಎಂದರು. ಈ ಯೋಜನೆಯಡಿ ಜನವರಿ ಅಥವಾ ಫೆಬ್ರವರಿಯಿಂದ ಬೇಳೆ, ಸಕ್ಕರೆ ಹಾಗೂ ಉಪ್ಪನ್ನು ವಿತರಿಸಲಾಗುತ್ತದೆ ಎಂದು ಸ್ಪಷ್ಟಪಡಿಸಿದರು.

ಪಡಿತರ ಅಕ್ಕಿಯನ್ನು ಹೊರ ರಾಜ್ಯಗಳಿಗೆ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಪ್ರಕರಣಗಳ ಬಗ್ಗೆ ಸರ್ಕಾರ ಕಠಿಣ ನಿಲುವು ತೆಗೆದುಕೊಂಡಿದೆ. ಈಗಾಗಲೇ 574 ಮಂದಿಯನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳಲಾಗಿದೆ. ಮುಂದಿನ ದಿನಗಳಲ್ಲಿ ಇಂತಹ ಅಕ್ರಮಗಳಿಗೆ ಅವಕಾಶ ನೀಡುವುದಿಲ್ಲ ಎಂದು ಮುನಿಯಪ್ಪ ಎಚ್ಚರಿಕೆ ನೀಡಿದರು.

ಇದನ್ನೂ ಓದಿ: ಎರಡು ತಿಂಗಳಲ್ಲಿ ಬಿಪಿಎಲ್ ಕುಟುಂಬಗಳಿಗೆ ಇಂದಿರಾ ಕಿಟ್ ವಿತರಣೆ; ಕೆ.ಎಚ್. ಮುನಿಯಪ್ಪ

ರಾಜ್ಯದ ಗ್ರಾಹಕರ ವ್ಯಾಜ್ಯ ಪರಿಹಾರ ವೇದಿಕೆಗಳ ಕಾರ್ಯಕ್ಷಮತೆ ಬಗ್ಗೆ ಮಾತನಾಡಿದ ಅವರು, ಒಟ್ಟು 2,55,466 ಪ್ರಕರಣಗಳಲ್ಲಿ 97 ಶೇಕಡಾ ಪ್ರಕರಣಗಳು ವಿಲೇವಾರಿಯಾಗಿವೆ ಎಂದು ಮಾಹಿತಿ ನೀಡಿದರು. ಬಾಕಿ ಉಳಿದಿರುವ ಪ್ರಕರಣಗಳನ್ನು ಶೀಘ್ರವಾಗಿ ಇತ್ಯರ್ಥಪಡಿಸಲು ಕೆಲ ಜಿಲ್ಲೆಗಳಲ್ಲಿ ಹೊಸ ಅಧ್ಯಕ್ಷರನ್ನು ನೇಮಿಸುವ ಪ್ರಕ್ರಿಯೆ ನಡೆಯಲಿದೆ ಎಂದರು.

ವೈದ್ಯಕೀಯ ನಿರ್ಲಕ್ಷ್ಯದಿಂದ ಜನರ ಪ್ರಾಣಕ್ಕೆ ಅಪಾಯ ಉಂಟಾಗುವ ಘಟನೆಗಳ ಬಗ್ಗೆ ಸಚಿವರು ಗಂಭೀರ ಅಸಮಾಧಾನ ವ್ಯಕ್ತಪಡಿಸಿದರು. ವೈದ್ಯರ ತಪ್ಪಿನಿಂದ ರೋಗಿಗಳಿಗೆ ಶಾಶ್ವತ ಹಾನಿಯಾಗುವಂತಹ ಪ್ರಕರಣಗಳಲ್ಲಿ ಕಠಿಣ ಶಿಕ್ಷೆ ನೀಡಬೇಕು ಎಂದು ಅಭಿಪ್ರಾಯಪಟ್ಟರು.

ಇತ್ತೀಚೆಗೆ ಸೈಬರ್ ಅಪರಾಧಗಳು ಹೆಚ್ಚಾಗುತ್ತಿದ್ದು, ಎಸ್‌ಎಂಎಸ್ ಹಾಗೂ ಒಟಿಪಿ ಮೂಲಕ ಜನರು ಹಣ ಕಳೆದುಕೊಳ್ಳುತ್ತಿರುವುದು ಆತಂಕಕಾರಿ ಸಂಗತಿ ಎಂದರು.

ಇದನ್ನು ತಡೆಯಲು ಉನ್ನತ ಮಟ್ಟದ ಅಧಿಕಾರಿಗಳೊಂದಿಗೆ ಸಭೆ ನಡೆಸಲಾಗುವುದು ಎಂದು ಹೇಳಿದರು. ಗ್ರಾಹಕರನ್ನು ಗೌರವದಿಂದ ನಡೆಸಿಕೊಂಡು ಸೇವೆ ಮಾಡುವುದು ಗಾಂಧೀಜಿಯವರ ಆಶಯವಾಗಿತ್ತು ಎಂದು ಅವರು ನೆನಪಿಸಿದರು.

TRENDING ARTICLES1 / 8

Satish Raj Goravigere

12 ವರ್ಷಗಳ ಪತ್ರಿಕಾ ಅನುಭವ ಹೊಂದಿರುವ ಸತೀಶ್ ರಾಜ್ ಗೊರವಿಗೆರೆ ರವರು, 2019ರಲ್ಲಿ ಕನ್ನಡ ನ್ಯೂಸ್ ಟುಡೇ ಸ್ಥಾಪಿಸಿದವರು. ಬೆಂಗಳೂರು, ಕರ್ನಾಟಕ ಹಾಗೂ ರಾಷ್ಟ್ರೀಯ… More »

Related Stories