ಬೆಂಗಳೂರು ನಗರದಲ್ಲೇ ಹೆಚ್ಚು ಕಿಡ್ನಾಪ್ ಪ್ರಕರಣ! 3 ವರ್ಷದಲ್ಲಿ 9,639 ಮಕ್ಕಳು ನಾಪತ್ತೆ

ಕಳೆದ ಮೂರು ವರ್ಷಗಳಲ್ಲಿ ಕರ್ನಾಟಕದಲ್ಲಿ ವರದಿಯಾದ ಮಕ್ಕಳ ಅಪಹರಣ ಪ್ರಕರಣಗಳ ಸಂಖ್ಯೆ ಆತಂಕ ಹುಟ್ಟಿಸುವಂತಿದ್ದು, ಒಟ್ಟು ಪ್ರಕರಣಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಬಾಲಕಿಯರೇ ಬಲಿಯಾಗಿರುವುದು ಗಂಭೀರ ಚಿಂತೆಗೆ ಕಾರಣವಾಗಿದೆ.

  • ಮಕ್ಕಳ ಅಪಹರಣ ಪ್ರಕರಣಗಳಲ್ಲಿ ಶೇ.71.5ರಷ್ಟು ಬಾಲಕಿಯರು
  • ಬೆಂಗಳೂರು ನಗರದಲ್ಲೇ ಹೆಚ್ಚು ಕಿಡ್ನಾಪ್ ಪ್ರಕರಣ
  • 3 ವರ್ಷದಲ್ಲಿ 9,639 ಮಕ್ಕಳು ಅಪಹರಣ, ನಾಪತ್ತೆ

ಬೆಂಗಳೂರು (Bengaluru): ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಉತ್ತಮವಾಗಿದೆ ಎನ್ನುವ ಮಾತಿನ ನಡುವೆಯೇ ಮಕ್ಕಳ ಅಪಹರಣ ಪ್ರಕರಣಗಳ ಸಂಖ್ಯೆ ಆತಂಕ ಉಂಟು ಮಾಡುತ್ತಿದೆ.

ಗೃಹ ಇಲಾಖೆ ಬಿಡುಗಡೆ ಮಾಡಿದ ಅಂಕಿಅಂಶಗಳ ಪ್ರಕಾರ, 2023ರಿಂದ 2025ರ ನವೆಂಬರ್ 15ರವರೆಗೆ ರಾಜ್ಯದಲ್ಲಿ ಒಟ್ಟು 9,639 ಮಕ್ಕಳು ಅಪಹರಣ ಅಥವಾ ನಾಪತ್ತೆಯಾಗಿದ್ದಾರೆ. ಈ ಸಂಖ್ಯೆ ಮಕ್ಕಳ ಸುರಕ್ಷತೆ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಎತ್ತಿದೆ.

ಬಾಲಕಿಯರೇ ಹೆಚ್ಚು ಗುರಿ

ಮೂರು ವರ್ಷಗಳಲ್ಲಿ ಅಪಹರಣಕ್ಕೊಳಗಾದ ಮಕ್ಕಳ ಪೈಕಿ 6,891 ಬಾಲಕಿಯರು ಇದ್ದಾರೆ. ಇದು ಒಟ್ಟು ಪ್ರಕರಣಗಳಲ್ಲಿನ ಶೇ.71.50ರಷ್ಟು. ಉಳಿದಂತೆ 2,748 ಗಂಡು ಮಕ್ಕಳು ಅಪಹರಣ ಅಥವಾ ನಾಪತ್ತೆಯಾಗಿದ್ದಾರೆ. ಹೆಣ್ಣು ಮಕ್ಕಳ ಮೇಲಿನ ಅಪಾಯ ಹೆಚ್ಚುತ್ತಿರುವುದು ಸಮಾಜದ ಮಟ್ಟದಲ್ಲಿ ಎಚ್ಚರಿಕೆ ನೀಡುವ ಸಂಗತಿಯಾಗಿದೆ.

ಇದನ್ನೂ ಓದಿ: ಪೊಲೀಸ್ ಸೋಗಿನಲ್ಲಿ ಸುಲಿಗೆ, ಬೆಂಗಳೂರಿನಲ್ಲಿ ನಕಲಿ ಪಿಎಸ್‌ಐ ಸೇರಿ ನಾಲ್ವರ ಬಂಧನ

ವರ್ಷವಾರು ಚಿತ್ರಣ

2023ರಲ್ಲಿ 3,039 ಮಕ್ಕಳು ಅಪಹರಣಕ್ಕೀಡಾಗಿದ್ದು, ಅವರಲ್ಲಿ 2,131 ಬಾಲಕಿಯರು ಮತ್ತು 903 ಗಂಡು ಮಕ್ಕಳು ಸೇರಿದ್ದಾರೆ. 2024ರಲ್ಲಿ ಈ ಸಂಖ್ಯೆ 3,411ಕ್ಕೆ ಏರಿಕೆಯಾಗಿದ್ದು, 2,436 ಬಾಲಕಿಯರು ಹಾಗೂ 975 ಬಾಲಕರು ನಾಪತ್ತೆಯಾಗಿದ್ದಾರೆ. 2025ರ ನವೆಂಬರ್ 15ರವರೆಗೆ 3,189 ಮಕ್ಕಳ ಅಪಹರಣ ವರದಿಯಾಗಿದ್ದು, ಇದರಲ್ಲಿ 2,324 ಬಾಲಕಿಯರು ಮತ್ತು 865 ಬಾಲಕರು ಸೇರಿದ್ದಾರೆ.

ಪತ್ತೆಯಾದರೂ, ಇನ್ನೂ ಸಿಗದ ಮಕ್ಕಳು

ಅಪಹರಣ ಪ್ರಕರಣಗಳಲ್ಲಿ ಬಹುತೇಕ ಮಕ್ಕಳು ಪತ್ತೆಯಾಗಿದ್ದರೂ, ಇನ್ನೂ ನೂರಾರು ಮಕ್ಕಳು ಮನೆ ಸೇರಿಲ್ಲ. 2023ರಲ್ಲಿ ಅಪಹರಣಗೊಂಡ 77 ಮಕ್ಕಳು ಇನ್ನೂ ಪತ್ತೆಯಾಗಿಲ್ಲ. 2024ರಲ್ಲಿ 145 ಮಕ್ಕಳು ಹಾಗೂ 2025ರಲ್ಲಿ ಇದುವರೆಗೆ 872 ಮಕ್ಕಳು ಪತ್ತೆಯಾಗದೆ ಉಳಿದಿದ್ದಾರೆ. ವಿಶೇಷವಾಗಿ 2025ರಲ್ಲಿ ಬಾಲಕಿಯರ ಪತ್ತೆಯಾಗದ ಪ್ರಕರಣಗಳ ಸಂಖ್ಯೆ ಹೆಚ್ಚು ಕಳವಳಕಾರಿ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: ಚಳಿ ಹಾಗೂ ಶೀತಗಾಳಿಗೆ ಕರ್ನಾಟಕ ತತ್ತರ! ಬೆಂಗಳೂರು ಸೇರಿ ರಾಜ್ಯದ 5 ಜಿಲ್ಲೆಗಳಿಗೆ ಅಲರ್ಟ್

ಬೆಂಗಳೂರು ನಗರದಲ್ಲೇ ಹೆಚ್ಚು ಪ್ರಕರಣ

ಮಕ್ಕಳ ಅಪಹರಣ ಪ್ರಕರಣಗಳಲ್ಲಿ ಬೆಂಗಳೂರು ನಗರ ಅಗ್ರಸ್ಥಾನದಲ್ಲಿದೆ. ಕಳೆದ ಮೂರು ವರ್ಷಗಳಲ್ಲಿ ನಗರದಲ್ಲಿ 3,268 ಮಕ್ಕಳ ಅಪಹರಣ ವರದಿಯಾಗಿದ್ದು, ಇವರಲ್ಲಿ 2,290 ಬಾಲಕಿಯರು ಸೇರಿದ್ದಾರೆ. ರಾಜ್ಯದ ಒಟ್ಟು ಅಪಹರಣ ಪ್ರಕರಣಗಳ ಪೈಕಿ ಸುಮಾರು 24 ಶೇಕಡಾ ಪ್ರಕರಣಗಳು ಬೆಂಗಳೂರಿನಲ್ಲೇ ದಾಖಲಾಗಿರುವುದು ಗಮನಾರ್ಹ.

ಇತರೆ ಜಿಲ್ಲೆಗಳ ಸ್ಥಿತಿಯೂ ಆತಂಕಕಾರಿ

ಬೆಂಗಳೂರು ಜಿಲ್ಲೆಯ ಹೊರತಾಗಿ ತುಮಕೂರು (450), ರಾಮನಗರ (305), ದಾವಣಗೆರೆ (301), ಶಿವಮೊಗ್ಗ (297), ಮಂಡ್ಯ (283), ಹಾಸನ (264) ಮತ್ತು ಚಿತ್ರದುರ್ಗ (244) ಜಿಲ್ಲೆಗಳಲ್ಲೂ (Karnataka Districts) ಮಕ್ಕಳ ಅಪಹರಣ ಪ್ರಕರಣಗಳು ಹೆಚ್ಚಾಗಿವೆ. ಈ ಜಿಲ್ಲೆಗಳಲ್ಲೂ ಬಹುತೇಕ ಪ್ರಕರಣಗಳಲ್ಲಿ ಬಾಲಕಿಯರ ಸಂಖ್ಯೆಯೇ ಹೆಚ್ಚಾಗಿದೆ.

ಪೊಲೀಸರಷ್ಟೇ ಅಲ್ಲ, ಪೋಷಕರ ಜವಾಬ್ದಾರಿಯೂ ಮುಖ್ಯ

ಮಕ್ಕಳ ಅಪಹರಣ ಪ್ರಕರಣಗಳಿಗೆ ಕೇವಲ ಪೊಲೀಸರನ್ನೇ ಹೊಣೆ ಮಾಡಲಾಗುವುದಿಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಪ್ರತಿಯೊಂದು ಪೊಲೀಸ್ ಠಾಣೆಯಲ್ಲೂ ಬಾಲ ಪೊಲೀಸ್ ಘಟಕ ಹಾಗೂ ಮಕ್ಕಳ ಕಲ್ಯಾಣಾಧಿಕಾರಿಗಳು ಕಾರ್ಯನಿರ್ವಹಿಸುತ್ತಿದ್ದಾರೆ.

ಆದರೆ, ಮಕ್ಕಳ ಮೇಲೆ ಪೋಷಕರ ನಿಗಾ, ಸಮುದಾಯದ ಎಚ್ಚರಿಕೆ ಮತ್ತು ಸಾರ್ವಜನಿಕ ಸಹಕಾರವೂ ಅತ್ಯಂತ ಅಗತ್ಯ ಎಂದು ಪೊಲೀಸರು ಅಭಿಪ್ರಾಯಪಟ್ಟಿದ್ದಾರೆ.

TRENDING ARTICLES1 / 7
Show More

Satish Raj Goravigere

12 ವರ್ಷಗಳ ಪತ್ರಿಕಾ ಅನುಭವ ಹೊಂದಿರುವ ಸತೀಶ್ ರಾಜ್ ಗೊರವಿಗೆರೆ ರವರು, 2019ರಲ್ಲಿ ಕನ್ನಡ ನ್ಯೂಸ್ ಟುಡೇ ಸ್ಥಾಪಿಸಿದವರು. ಬೆಂಗಳೂರು, ಕರ್ನಾಟಕ ಹಾಗೂ ರಾಷ್ಟ್ರೀಯ… More »

Related Stories