ಚಿತ್ರದುರ್ಗ ಬಸ್ ದುರಂತ: ಬೆಂಕಿ ದಾಹಕ್ಕೆ ಬಲಿಯಾದ ಜೀವಗಳು, ಮುಗಿಲು ಮುಟ್ಟಿದ ಆಕ್ರಂದನ
ಚಿತ್ರದುರ್ಗದ ಹಿರಿಯೂರು ಬಳಿ ಎನ್‌ಎಚ್ 48ರಲ್ಲಿ ಲಾರಿ ಡಿವೈಡರ್ ದಾಟಿ ಸೀಬರ್ಡ್ ಸ್ಲೀಪರ್ ಬಸ್‌ಗೆ ಡಿಕ್ಕಿ ಹೊಡೆದು ಬೆಂಕಿ ಹೊತ್ತಿಕೊಂಡು 17ಕ್ಕೂ ಹೆಚ್ಚು ಪ್ರಯಾಣಿಕರು ಸಾವನ್ನಪ್ಪಿದ ಭೀಕರ ದುರಂತ ಸಂಭವಿಸಿದೆ, ಪ್ರಯಾಣಿಕರಲ್ಲಿ ಗೋಕರ್ಣದವರೇ ಹೆಚ್ಚು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ ಎಂದು ಹೇಳಿದ್ದಾರೆ
- ಚಿತ್ರದುರ್ಗ ಬಸ್ ಅಪಘಾತದಲ್ಲಿ 17ಕ್ಕೂ ಹೆಚ್ಚು ಸಾವು
- ಗೋಕರ್ಣದ ಪ್ರಯಾಣಿಕರೇ ಹೆಚ್ಚಿನವರು
- ಎನ್‌ಎಚ್ 48ರಲ್ಲಿ ಲಾರಿ–ಬಸ್ ಡಿಕ್ಕಿ, ಭಾರೀ ದುರಂತ
ಚಿತ್ರದುರ್ಗ (ಡಿ.25): ನಸುಕಿನ ಹೊತ್ತಿನಲ್ಲಿ ನಡೆದ ಭೀಕರ ರಸ್ತೆ ಅಪಘಾತವು (Chitradurga Bus Fire Tragedy) ಉತ್ತರ ಕನ್ನಡ ಭಾಗವನ್ನೇ ಶೋಕದಲ್ಲಿ ಮುಳುಗಿಸಿದೆ. ಹಿರಿಯೂರು ತಾಲೂಕಿನ ಗೊರ್ಲತ್ತು ಕ್ರಾಸ್ ಸಮೀಪ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಲಾರಿ ಡಿವೈಡರ್ ದಾಟಿ ಎದುರಿನಿಂದ ಬರುತ್ತಿದ್ದ ಸೀಬರ್ಡ್ ಸ್ಲೀಪರ್ ಕೋಚ್ ಬಸ್‌ಗೆ ಡಿಕ್ಕಿ ಹೊಡೆದ ಪರಿಣಾಮ, ಬಸ್ ಕ್ಷಣಗಳಲ್ಲಿ ಬೆಂಕಿಗಾಹುತಿಯಾಯಿತು.
ಡಿಕ್ಕಿಯ ತೀವ್ರತೆಯಿಂದ ಬಸ್ ಸಂಪೂರ್ಣವಾಗಿ ಸುಟ್ಟು ಕರಕಲಾಗಿದ್ದು, ಕನಿಷ್ಠ 17ಕ್ಕೂ ಹೆಚ್ಚು ಪ್ರಯಾಣಿಕರು ಸಜೀವ ದಹನಗೊಂಡಿದ್ದಾರೆ. ಮೃತರಲ್ಲಿ ಹೆಚ್ಚಿನವರು ಗೋಕರ್ಣ ಮೂಲದವರಾಗಿರುವ ಶಂಕೆ ವ್ಯಕ್ತವಾಗಿದ್ದು, ಸ್ಥಳೀಯರ ಆಕ್ರಂದನ ಮುಗಿಲು ಮುಟ್ಟಿದೆ. ಇನ್ನೂ 9 ಮಂದಿಯನ್ನು ಗಂಭೀರ ಸ್ಥಿತಿಯಲ್ಲಿ ರಕ್ಷಿಸಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಪ್ರಯಾಣ ಮಾರ್ಗ ಮತ್ತು ಬಸ್ ವಿವರ:
ಮೆಜೆಸ್ಟಿಕ್‌ನಿಂದ ಹೊರಟಿದ್ದ ಖಾಸಗಿ ಸೀಬರ್ಡ್ ಸ್ಲೀಪರ್ ಬಸ್ ಶಿವಮೊಗ್ಗ, ಹೊನ್ನಾವರ ಮಾರ್ಗವಾಗಿ ಗೋಕರ್ಣಕ್ಕೆ ತೆರಳುತ್ತಿತ್ತು. 32 ಆಸನ ಸಾಮರ್ಥ್ಯದ ಈ ಬಸ್‌ನಲ್ಲಿ 29 ಪ್ರಯಾಣಿಕರು ಪ್ರಯಾಣಿಸುತ್ತಿದ್ದರು. ಇವರಲ್ಲಿ ಗೋಕರ್ಣಕ್ಕೆ ತೆರಳುತ್ತಿದ್ದವರೇ ಹೆಚ್ಚಿನ ಸಂಖ್ಯೆಯಲ್ಲಿದ್ದರು ಎಂದು ತಿಳಿದುಬಂದಿದೆ.
ಇದನ್ನೂ ಓದಿ: ಚಿತ್ರದುರ್ಗ ಹೆದ್ದಾರಿಯಲ್ಲಿ ಭೀಕರ ಅಪಘಾತ: ಹೊತ್ತಿ ಉರಿದ ಸ್ಲೀಪರ್ ಬಸ್, 17ಕ್ಕೂ ಹೆಚ್ಚು ಸಾವು
ರಕ್ಷಣಾ ಕಾರ್ಯಾಚರಣೆ ಮತ್ತು ತನಿಖೆ:
ಅಪಘಾತದ ಮಾಹಿತಿ ತಿಳಿಯುತ್ತಿದ್ದಂತೆ ಪೊಲೀಸರು ಹಾಗೂ ಅಗ್ನಿಶಾಮಕ ದಳ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ನಡೆಸಿದರು. ಬೆಂಕಿ ನಂದಿಸಲು ಸಾಕಷ್ಟು ಸಮಯ ಹಿಡಿದಿದ್ದು, ಸುಟ್ಟು ಕರಕಲಾದ ದೇಹಗಳ ಗುರುತು ಪತ್ತೆ ಕಷ್ಟಕರವಾಗಿದೆ. ಲಾರಿ ಚಾಲಕನ ನಿರ್ಲಕ್ಷ್ಯವೇ ಅಪಘಾತಕ್ಕೆ ಕಾರಣ ಎಂಬ ಪ್ರಾಥಮಿಕ ಮಾಹಿತಿ ಲಭ್ಯವಾಗಿದ್ದು, ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.
ಹೆದ್ದಾರಿಯಲ್ಲಿ ಭಾರೀ ಸಂಚಾರ ಅಸ್ತವ್ಯಸ್ತ:
ಈ ದುರಂತದ ಹಿನ್ನೆಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಸುಮಾರು 30 ಕಿಲೋಮೀಟರ್ ವ್ಯಾಪ್ತಿಯಲ್ಲಿ ಟ್ರಾಫಿಕ್ ಜಾಮ್ ಉಂಟಾಗಿದೆ. ಮುಂಬೈ ಸಂಪರ್ಕಿಸುವ ಪ್ರಮುಖ ಹೆದ್ದಾರಿಯಲ್ಲಿ ವಾಹನಗಳು ಗಂಟೆಗಳ ಕಾಲ ನಿಂತುಹೋಗಿದ್ದವು.






