ಜಿಮ್‌ನಲ್ಲಿ ವರ್ಕೌಟ್ ಮಾಡುತ್ತಿದ್ದ ವೇಳೆ ಕುಸಿದು ಬಿದ್ದು ವಿದ್ಯಾರ್ಥಿ ಸಾವು
ಪುತ್ತೂರಿನ ಬೊಳುವಾರಿನ ಜಿಮ್‌ನಲ್ಲಿ ವರ್ಕೌಟ್ ಮಾಡುತ್ತಿದ್ದ 20 ವರ್ಷದ ಕಾಲೇಜು ವಿದ್ಯಾರ್ಥಿ ಶಮಿಕ್ ರೈ ಏಕಾಏಕಿ ಕುಸಿದು ಬಿದ್ದು ಮೃತಪಟ್ಟ ಘಟನೆ ಶನಿವಾರ ನಡೆದಿದೆ.

ಪುತ್ತೂರಿನ (Puttur) ಬೊಳುವಾರಿನ ಜಿಮ್‌ನಲ್ಲಿ (Gym) ವರ್ಕೌಟ್ ಮಾಡುತ್ತಿದ್ದ ಕಾಲೇಜು ವಿದ್ಯಾರ್ಥಿಯೊಬ್ಬರು ಏಕಾಏಕಿ ಕುಸಿದು ಬಿದ್ದು ಮೃತಪಟ್ಟಿರುವ ಘಟನೆ ಶನಿವಾರ ನಡೆದಿದೆ. ಮೃತರನ್ನು ಆರ್ಯಾಪು ಗ್ರಾಮದ ಕುಂಜೂರುಪಂಜ ನಿವಾಸಿ ರಮೇಶ್ ರೈ ಅವರ ಪುತ್ರ ಶಮಿಕ್ ರೈ (20) ಎಂದು ಗುರುತಿಸಲಾಗಿದೆ.
ಶಮಿಕ್ ರೈ ಅವರು ಪುತ್ತೂರಿನ ಖಾಸಗಿ ಕಾಲೇಜಿನಲ್ಲಿ ಬಿ.ಕಾಂ. (B.Com) ವ್ಯಾಸಂಗ ಮಾಡುತ್ತಿದ್ದರು. ವಿದ್ಯಾಭ್ಯಾಸದ ಜೊತೆಗೆ ಸಿಎ ಪರೀಕ್ಷೆ (CA Exam) ಎದುರಿಸಲು ಸಿದ್ಧತೆ ನಡೆಸುತ್ತಿದ್ದರು. ಪ್ರತಿಭಾನ್ವಿತ ವಿದ್ಯಾರ್ಥಿಯಾಗಿದ್ದ ಅವರ ಅಕಾಲಿಕ ಸಾವಿನಿಂದ ಕುಟುಂಬಸ್ಥರು ಹಾಗೂ ಸ್ನೇಹಿತರಲ್ಲಿ ದುಃಖ ಆವರಿಸಿದೆ.
ಕಳೆದ ಹಲವು ಸಮಯಗಳಿಂದ ಶಮಿಕ್ ನಿಯಮಿತವಾಗಿ ಜಿಮ್‌ಗೆ ತೆರಳಿ ವ್ಯಾಯಾಮ ಮಾಡುತ್ತಿದ್ದರು ಎನ್ನಲಾಗಿದೆ. ಎಂದಿನಂತೆ ಶನಿವಾರವೂ ಜಿಮ್‌ಗೆ ತೆರಳಿ ವರ್ಕೌಟ್ ಮಾಡುತ್ತಿದ್ದ ವೇಳೆ ಏಕಾಏಕಿ ಕುಸಿದು ಬಿದ್ದಿದ್ದಾರೆ.
ಕೂಡಲೇ ಅವರನ್ನು ಆಸ್ಪತ್ರೆಗೆ (Hospital) ಕರೆದೊಯ್ಯಲಾಯಿತಾದರೂ, ಅದಾಗಲೇ ಮೃತಪಟ್ಟಿದ್ದರು ಎಂದು ತಿಳಿದುಬಂದಿದೆ. ಸಾವಿಗೆ ನಿಖರ ಕಾರಣ ಏನು ಎಂಬುದು ಇನ್ನಷ್ಟೇ ಸ್ಪಷ್ಟವಾಗಬೇಕಿದೆ.
ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ಮೃತದೇಹದ ಮರಣೋತ್ತರ ಪರೀಕ್ಷೆ (Postmortem) ನಡೆಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ (Puttur Police) ಪ್ರಕರಣ ದಾಖಲಾಗಿದ್ದು, ಪೊಲೀಸರು ಅಗತ್ಯ ತನಿಖೆ ಕೈಗೊಂಡಿದ್ದಾರೆ.
ಶಮಿಕ್ ರೈ ಅವರ ನಿಧನದ ಸುದ್ದಿ ತಿಳಿದು ಶಾಸಕ ಅಶೋಕ್ ಕುಮಾರ್ ರೈ (Ashok Kumar Rai) ಸೇರಿದಂತೆ ವಿವಿಧ ಕ್ಷೇತ್ರಗಳ ಗಣ್ಯರು ಮೃತದೇಹದ ಅಂತಿಮ ದರ್ಶನ ಪಡೆದು ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ. ತಂದೆ, ತಾಯಿ ಹಾಗೂ ಸಹೋದರಿಯನ್ನು ಅಗಲಿರುವ ಶಮಿಕ್ ಅವರ ಕುಟುಂಬದಲ್ಲಿ ಇದೀಗ ಶೋಕ ಮಡುಗಟ್ಟಿದೆ.



