ದುಬೈ ಸಂಕಷ್ಟ: ವಿದೇಶದಲ್ಲಿ ಸಿಲುಕಿರುವ ಕನ್ನಡಿಗರ ಬಗ್ಗೆ ಡಿಸಿಎಂ ಪ್ರತಿಕ್ರಿಯೆ
ಮಧ್ಯಪ್ರಾಚ್ಯದಲ್ಲಿ ಉಲ್ಬಣಗೊಂಡ ಇಸ್ರೇಲ್–ಇರಾನ್ ಸಂಘರ್ಷದ ನಡುವೆ ದುಬೈನಲ್ಲಿ ಸಿಲುಕಿರುವ ಕನ್ನಡಿಗರ ಸಂಪರ್ಕ ಕಡಿತಗೊಂಡಿದೆ. ಭರತ್ ರೆಡ್ಡಿ ಸೇರಿದಂತೆ ಅನೇಕರ ವಿಚಾರವಾಗಿ ಡಿಸಿಎಂ ಆತಂಕ ವ್ಯಕ್ತಪಡಿಸಿ, ಕೇಂದ್ರ ಸರ್ಕಾರ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

Dubai Crisis: ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಇಸ್ರೇಲ್–ಇರಾನ್ ಸಂಘರ್ಷದ ಪರಿಣಾಮವಾಗಿ ದುಬೈ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಇರುವ ಕನ್ನಡಿಗರ ಕುಟುಂಬಗಳು ಆತಂಕದಲ್ಲಿ ದಿನಗಳನ್ನು ಕಳೆಯುತ್ತಿವೆ. ಅವರಲ್ಲಿ ಭರತ್ ರೆಡ್ಡಿ ಎಂಬ ಕನ್ನಡಿಗನೊಂದಿಗೆ ಸಂಪರ್ಕ ಸಂಪೂರ್ಣವಾಗಿ ಕಡಿತಗೊಂಡಿರುವ ವಿಚಾರ ಹೆಚ್ಚು ಚರ್ಚೆಗೆ ಗ್ರಾಸವಾಗಿದೆ.
ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಬೆಂಗಳೂರಿನಲ್ಲಿ ಮಾತನಾಡುತ್ತಾ, “ನಾವು ಸ್ವತಃ ಸಂಪರ್ಕಿಸಲು ಪ್ರಯತ್ನಿಸಿದ್ದೇವೆ. ಆದರೆ ನಮ್ಮ ಕಾಂಟ್ಯಾಕ್ಟ್‌ಗೆ ಸಿಗುತ್ತಿಲ್ಲ” ಎಂದು ಸ್ಪಷ್ಟಪಡಿಸಿದರು. ಈ ಮಾತುಗಳು ವಿದೇಶದಲ್ಲಿರುವವರ ಕುಟುಂಬಗಳಿಗೆ ಮತ್ತಷ್ಟು ಆತಂಕ ತಂದಿವೆ.
ಕೇಂದ್ರದ ಜವಾಬ್ದಾರಿ, ರಾಜ್ಯದ ಒತ್ತಡ
ದುಬೈನಲ್ಲಿ ಇಬ್ಬರು ಶಾಸಕರು ಸಹ ಇರುವ ಮಾಹಿತಿ ನೀಡಿದ ಡಿಸಿಎಂ, ದೆಹಲಿಯ ರೆಸಿಡೆಂಟ್ ಕಮಿಷನರ್ ಸಂಪರ್ಕದಲ್ಲಿರಲು ಸೂಚಿಸಲಾಗಿದೆ ಎಂದು ಹೇಳಿದರು. ಲಕ್ಷಾಂತರ ಭಾರತೀಯರು ಅಲ್ಲಿದ್ದಾರೆ. ಕರ್ನಾಟಕ ಮತ್ತು ಕೇರಳದ ಜನರ ಸಂಖ್ಯೆ ಹೆಚ್ಚಿದೆ. ಅವರ ಸುರಕ್ಷತೆ ಕೇಂದ್ರ ಸರ್ಕಾರದ ಹೊಣೆ ಎಂದು ಅವರು ಒತ್ತಾಯಿಸಿದರು.
ರಾಜ್ಯ ಸರ್ಕಾರ ಪ್ರತ್ಯೇಕ ಹೆಲ್ಪ್‌ಲೈನ್ ಆರಂಭಿಸುವ ಯೋಚನೆ ಇಲ್ಲವೆಂದು ಹೇಳಿದ ಅವರು, ಯಾವುದೇ ಅಧಿಕೃತ ಮಾಹಿತಿ ವಿದೇಶಾಂಗ ಇಲಾಖೆಯಿಂದಲೇ ಬರಬೇಕು ಎಂದು ಸ್ಪಷ್ಟಪಡಿಸಿದರು. ಆದರೆ ಅಗತ್ಯ ಒತ್ತಡ ಹೇರಿ ಕ್ರಮ ಕೈಗೊಳ್ಳುವಂತೆ ಮಾಡುವ ಭರವಸೆ ನೀಡಿದರು.
ಮಕ್ಕಳ ಮೇಲಿನ ದಾಳಿಗಳಿಗೆ ಖಂಡನೆ
ಇಸ್ರೇಲ್–ಇರಾನ್ ಸಂಘರ್ಷದ ನಡುವೆ ಶಾಲೆಗಳ ಮೇಲಿನ ದಾಳಿಗಳು ನಡೆದಿರುವ ವರದಿಗಳನ್ನೂ ಡಿಸಿಎಂ ಖಂಡಿಸಿದರು. “ನಮ್ಮ ದೇಶ ಶಾಂತಿಯನ್ನು ನಂಬುತ್ತದೆ. ಮಕ್ಕಳ ಮೇಲೆ ದಾಳಿ ಯಾವುದೇ ರೀತಿಯಲ್ಲೂ ಸಮರ್ಥನೀಯವಲ್ಲ” ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ದುಬೈ ಹಾಗೂ ಇತರ ದೇಶಗಳಲ್ಲಿ ಇರುವ ಕನ್ನಡ ಸಂಘಟನೆಗಳು ಸಿಲುಕಿರುವವರಿಗೆ ಆತ್ಮಸ್ಥೈರ್ಯ ತುಂಬಬೇಕು ಎಂದು ಮನವಿ ಮಾಡಿದರು. ವಿದೇಶದಲ್ಲಿ ಕೆಲಸಮಾಡುತ್ತಿರುವ ಕನ್ನಡಿಗರ ಕುಟುಂಬಗಳು ಸುರಕ್ಷಿತ ಮರಳುವ ದಿನದ ನಿರೀಕ್ಷೆಯಲ್ಲಿ ಕಾದಿವೆ.



