ಬೆಳಗಾವಿ: ಕೃಷಿ ಹೊಂಡದಲ್ಲಿ ಮುಳುಗಿ ತಂದೆ-ಮಗ ದಾರುಣ ಸಾವು - Belagavi Tragedy
ಬೆಳಗಾವಿ ಜಿಲ್ಲೆಯ ಮಳಗಲಿ ಗ್ರಾಮದಲ್ಲಿ ಸಂಭವಿಸಿದ ದುರ್ಘಟನೆ ಎರಡು ಜೀವಗಳನ್ನು ಬಲಿ ಪಡೆದಿದೆ. ತಂದೆ ಮತ್ತು ಮಗ ನೀರಿನಲ್ಲಿ ಮುಳುಗಿ ಸಾವು ಕಂಡಿದ್ದು, ಮತ್ತೋರ್ವ ಬಾಲಕನನ್ನು ಸ್ಥಳೀಯರು ರಕ್ಷಿಸಿದ್ದಾರೆ.

- ಕೃಷಿ ಹೊಂಡದಲ್ಲಿ ಬಿದ್ದು ತಂದೆ ಮತ್ತು ಮಗ ದಾರುಣ ಸಾವು
- ಬೆಳಗಾವಿಯ ಸವದತ್ತಿ ತಾಲ್ಲೂಕಿನ ಮಳಗಲಿ ಗ್ರಾಮದಲ್ಲಿ ದುರ್ಘಟನೆ
- ಬಾಲಕನನ್ನು ಸ್ಥಳೀಯರು ಬಚಾವ್ ಮಾಡಿ ಆಸ್ಪತ್ರೆಗೆ ಸೇರಿಸಿದರು
ಬೆಳಗಾವಿ (Belagavi) ಜಿಲ್ಲೆಯ ಸವದತ್ತಿ (Savadatti) ತಾಲ್ಲೂಕಿನ ಮಳಗಲಿ ಗ್ರಾಮದಲ್ಲಿ ಭಾನುವಾರ ಆಘಾತಕಾರಿ ಘಟನೆ ನಡೆದಿದೆ. ಕೃಷಿ ಹೊಂಡದಲ್ಲಿ ನೀರು ತರಲು ಹೋದ ತಂದೆ ಹಾಗೂ ಮಗ ಇಬ್ಬರೂ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಇದರಿಂದಾಗಿ ಊರಿನಲ್ಲಿ ಶೋಕದ ವಾತಾವರಣ ನಿರ್ಮಾಣವಾಗಿತ್ತು..
ಮೃತರಾಗಿರುವವರು ಮುರಗೋಡ ಗ್ರಾಮದ ಬಸವರಾಜ ಕೆಂಗೇರಿ (40) ಮತ್ತು ಅವರ ಪುತ್ರ ಧರೆಪ್ಪ ಬಸವರಾಜ ಕೆಂಗೇರಿ (14) ಆಗಿದ್ದಾರೆ. ಇವರು ಮಳಗಲಿ ಗ್ರಾಮದ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದರು. ಅಲ್ಲಿ ಸೋಯಾಬಿನ್ ಬೆಳೆಗೆ ಕೀಟನಾಶಕ ಸಿಂಪಡಿಸಲು ಬಂದಾಗ ಈ ದುರ್ಘಟನೆ ಸಂಭವಿಸಿದೆ.
ಇದನ್ನೂ ಓದಿ: ಧರ್ಮಸ್ಥಳ ಪ್ರಕರಣ: ತನಿಖೆಯಿಂದ ಸತ್ಯ ಬಯಲಾಗಲಿದೆ; ಜಿ. ಪರಮೇಶ್ವರ್
ಪೊಲೀಸರ ಪ್ರಕಾರ, ನೀರು ತರಲು ಹೋಗಿದ್ದ ಮಗ ಧರೆಪ್ಪ ಹಾಗೂ ಅವರ ಜೊತೆಗೆ ಇದ್ದ ಮತ್ತೊಬ್ಬ ಬಾಲಕ ಬಾಗಪ್ಪ ಕೃಷಿ ಹೊಂಡಕ್ಕೆ (pond) ನೀರು ತರಲು ಹೋದಾಗ ಕಾಲು ಜಾರಿ ಬಿದ್ದಿದ್ದರು. ಅವರನ್ನ ರಕ್ಷಿಸಲು ತಕ್ಷಣ ತಾಯಿ ಜೋರಾಗಿ ಕೂಗಿದ ನಂತರ ತಂದೆ ಬಸವರಾಜ ಹೊಂಡಕ್ಕೆ ಧುಮುಕಿ ಇಬ್ಬರನ್ನು ರಕ್ಷಿಸಲು ಯತ್ನಿಸಿದರು. ಆದರೆ, ತಂದೆ ಮತ್ತು ಮಗ ಇಬ್ಬರೂ ನೀರಿನಲ್ಲಿ ಮುಳುಗಿ ಪ್ರಾಣ ಕಳೆದುಕೊಂಡರು.
ಈ ವೇಳೆ ಪಕ್ಕದ ಜಮೀನಿನಲ್ಲಿ ಇದ್ದ ಕೆಲರು ಧಾವಿಸಿ ಮೂವರನ್ನೂ ಹೊರತೆಗೆಯಲೂ ಪ್ರಯತ್ನಿಸಿದರು. ಅದೃಷ್ಟವಶಾತ್ ಬಾಗಪ್ಪ ಬದುಕುಳಿದಿದ್ದು, ತಕ್ಷಣ ಅವರನ್ನು ಬೈಲಹೊಂಗಲ (Bailhongal) ತಾಲ್ಲೂಕು ಆಸ್ಪತ್ರೆಗೆ ದಾಖಲಿಸಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ: ಭಾರೀ ಮಳೆ, ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಿಗೆ ರೆಡ್ ಅಲರ್ಟ್
ಸ್ಥಳಕ್ಕೆ ಮುರಗೋಡ (Muragoad) ಪೊಲೀಸ್ ಠಾಣಾ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತರ ಕುಟುಂಬದ ಆಕ್ರಂದನದಿಂದ ಸ್ಥಳದಲ್ಲಿ ಭಾವುಕ ವಾತಾವರಣ ನಿರ್ಮಾಣವಾಗಿತ್ತು. ಈ ಕುರಿತು ಪ್ರಕರಣ ದಾಖಲಾಗಿದೆ.
Father and Son Drown in Belagavi Farm Pond, Boy Rescued







