ಶಿವಮೊಗ್ಗ: ನದಿಯಲ್ಲಿ ಈಜಲು ಹೋಗಿದ್ದ ಬೆಂಗಳೂರು ಮೂಲದ ನಾಲ್ವರು ಯುವಕರು ನಾಪತ್ತೆ
ಶಿವಮೊಗ್ಗದಲ್ಲಿ ಮದುವೆ ಸಮಾರಂಭಕ್ಕೆ ಬಂದಿದ್ದ ಯುವಕರು ಪ್ರವಾಸದ ಉದ್ದೇಶದಿಂದ ಮಹಿಷಿ ನದಿಗೆ ತೆರಳಿದ್ದರು. ಒಬ್ಬನನ್ನು ರಕ್ಷಿಸಲು ಮುಂದಾದ ಮೂವರೂ ನೀರಿನ ಸೆಳೆತಕ್ಕೆ ಸಿಲುಕಿ ನಾಪತ್ತೆಯಾಗಿದ್ದು, ಶೋಧ ಕಾರ್ಯಾಚರಣೆ ಮುಂದುವರಿದಿದೆ.

- ಬೆಂಗಳೂರಿನ ನಾಲ್ವರು ಯುವಕರು ನಾಪತ್ತೆ
- ಒಬ್ಬನ ರಕ್ಷಣೆಗೆ ಹೋಗಿ ಮೂವರೂ ಮುಳುಗಡೆ
- ಅಗ್ನಿಶಾಮಕ ಸಿಬ್ಬಂದಿಯಿಂದ ತೀವ್ರ ಶೋಧ
ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಹೆದ್ದೂರು ಸಮೀಪದ ಮಹಿಷಿ ನದಿಯಲ್ಲಿ ಸಂಭವಿಸಿದ ದುರ್ಘಟನೆಯೊಂದು ಆತಂಕ ಮೂಡಿಸಿದೆ. ಗುರುವಾರ ಸಂಜೆ ನದಿಯಲ್ಲಿ ಈಜಲು ತೆರಳಿದ್ದ ಬೆಂಗಳೂರಿನ ನಾಲ್ವರು ಯುವಕರು ನೀರಿನಲ್ಲಿ ಮುಳುಗಿ ನಾಪತ್ತೆಯಾಗಿದ್ದಾರೆ. ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಶೋಧ ಕಾರ್ಯ ಆರಂಭಿಸಿದ್ದಾರೆ.
ನಾಪತ್ತೆಯಾದವರನ್ನು ಬೆಂಗಳೂರಿನ ಕತ್ರಿಗುಪ್ಪೆ ನಿವಾಸಿಗಳಾದ ಕಾರ್ತಿಕ್ (31), ನಕುಲ್ (19), ಪವನ್ (30) ಮತ್ತು ಚೇತನ್ (19) ಎಂದು ಗುರುತಿಸಲಾಗಿದೆ. ಇವರೆಲ್ಲರೂ ಶಿವಮೊಗ್ಗದಲ್ಲಿ ನಡೆಯುತ್ತಿದ್ದ ಮದುವೆ ಸಮಾರಂಭದಲ್ಲಿ ಭಾಗವಹಿಸಲು ಬೆಂಗಳೂರಿನಿಂದ ಬಂದಿದ್ದರು. ಮದುವೆ ಕಾರ್ಯಕ್ರಮದ ಬಳಿಕ ಪ್ರವಾಸಿ ತಾಣವೊಂದನ್ನು ಹುಡುಕಲು ಗೂಗಲ್ (Google) ಮೊರೆ ಹೋಗಿ, ಎರಡು ಟಿಟಿ ವಾಹನಗಳಲ್ಲಿ ಮಹಿಷಿ ಗ್ರಾಮದ ಅಶ್ವಥನಾರಾಯಣ ದೇವಸ್ಥಾನದ ಸಮೀಪಕ್ಕೆ ತೆರಳಿದ್ದರು ಎನ್ನಲಾಗಿದೆ.
ಸಂಜೆಯ ವೇಳೆಗೆ ದೇವಸ್ಥಾನದ ಹಿಂಭಾಗದಲ್ಲಿರುವ ನದಿಯ ಬಳಿ ಯುವಕರು ಸಮಯ ಕಳೆಯುತ್ತಿದ್ದರು. ಈ ವೇಳೆ ಅವರಲ್ಲಿ ಒಬ್ಬಾತ ನೀರಿಗೆ ಇಳಿದಿದ್ದು, ಕೆಲವೇ ಕ್ಷಣಗಳಲ್ಲಿ ನೀರಿನಲ್ಲಿ ಮುಳುಗಲಾರಂಭಿಸಿದ್ದಾನೆ. ಇದನ್ನು ಗಮನಿಸಿದ ಉಳಿದ ಮೂವರು ಆತನನ್ನು ರಕ್ಷಿಸಲು ನದಿಗೆ ಇಳಿದಿದ್ದಾರೆ. ಆದರೆ, ನದಿಯ ನೀರಿನ ಸೆಳೆತಕ್ಕೆ ನಾಲ್ವರೂ ಸಿಲುಕಿ ಕಣ್ಮರೆಯಾಗಿದ್ದಾರೆ ಎಂದು ತಿಳಿದುಬಂದಿದೆ.
ದುರಂತದ ಮಾಹಿತಿ ಸಿಗುತ್ತಿದ್ದಂತೆ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿದ್ದಾರೆ. ನದಿಯಲ್ಲಿ ನಾಪತ್ತೆಯಾದವರಿಗಾಗಿ ತೀವ್ರ ಶೋಧ ಕಾರ್ಯಾಚರಣೆ (Search Operation) ನಡೆಸಲಾಗುತ್ತಿದೆ. ನಾಲ್ವರು ಯುವಕರ ಪತ್ತೆಗಾಗಿ ಸ್ಥಳೀಯರು ಕೂಡ ಆತಂಕದಿಂದ ಕಾಯುತ್ತಿದ್ದಾರೆ.




