ನೇತ್ರಾವತಿ ನದಿ ತೀರದಲ್ಲಿ ರಾಶಿ ರಾಶಿ ಆಧಾರ್ ಕಾರ್ಡ್ ಪತ್ತೆ! ತನಿಖೆಗೆ ಸೂಚನೆ

ಮಂಗಳೂರಿನ ಫರಂಗಿಪೇಟೆ ಸಮೀಪ ನೇತ್ರಾವತಿ ನದಿ ತೀರದಲ್ಲಿ ನೂರಾರು ಆಧಾರ್ ಕಾರ್ಡ್ ಪತ್ತೆಯಾಗಿವೆ. ಜನರಿಗೆ ತಲುಪಬೇಕಿದ್ದ ಕಾರ್ಡ್‌ಗಳು ನೀರಿನಲ್ಲಿ ಸಿಕ್ಕಿದ್ದು ಅಂಚೆ ಇಲಾಖೆಯ ನಿರ್ಲಕ್ಷ್ಯವೋ ಎಂಬ ಅನುಮಾನದಿಂದ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಂಗಳೂರು (Mangaluru): ಮಂಗಳೂರಿನ ನೇತ್ರಾವತಿ ನದಿ ತೀರದಲ್ಲಿ ನೂರಾರು ಆಧಾರ್ ಕಾರ್ಡ್‌ಗಳು (Aadhaar Cards) ಪತ್ತೆಯಾದ ಘಟನೆ ಸ್ಥಳೀಯರಲ್ಲಿ ಆಶ್ಚರ್ಯ ಹಾಗೂ ಆಕ್ರೋಶಕ್ಕೆ ಕಾರಣವಾಗಿದೆ. ಮಂಗಳೂರು ವಿಧಾನಸಭಾ ಕ್ಷೇತ್ರದ ಪುದು ಗ್ರಾಮದ ಫರಂಗಿಪೇಟೆ ಬಳಿ ಈ ಕಾರ್ಡ್‌ಗಳು ನದಿ ತೀರದಲ್ಲಿ ಬಿದ್ದಿರುವುದು ಗಮನಕ್ಕೆ ಬಂದಿದೆ.

ಸ್ಥಳೀಯರು ನದಿ ತೀರದಲ್ಲಿ ಎಲ್ಲೆಂದರಲ್ಲಿ ಚದುರಿಕೊಂಡಿದ್ದ ಆಧಾರ್ ಕಾರ್ಡ್‌ಗಳನ್ನು ಕಂಡು ತಕ್ಷಣ ಪುದು ಗ್ರಾಮ ಪಂಚಾಯತ್ ಅಧ್ಯಕ್ಷರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಅಧ್ಯಕ್ಷರು ಸ್ಥಳಕ್ಕೆ ಭೇಟಿ ನೀಡಿ ಸಾರ್ವಜನಿಕರ ಸಹಾಯದಿಂದ ಹಲವಾರು ಕಾರ್ಡ್‌ಗಳನ್ನು ಸಂಗ್ರಹಿಸಿದ್ದಾರೆ.

ಗ್ರಾಮಸ್ಥರ ಆರೋಪದ ಪ್ರಕಾರ, ಈ ಕಾರ್ಡ್‌ಗಳು ಅಂಚೆ ಇಲಾಖೆಯಿಂದ ಜನರ ಮನೆಗಳಿಗೆ ತಲುಪಬೇಕಾಗಿದ್ದವು. ಆದರೆ ಯಾವುದೋ ಕಾರಣದಿಂದ ಅವು ಜನರ ಕೈಗೆ ತಲುಪದೇ ನದಿ ತೀರದಲ್ಲಿ ಪತ್ತೆಯಾಗಿರುವುದು ಅಧಿಕಾರಿಗಳ ನಿರ್ಲಕ್ಷ್ಯವನ್ನು ತೋರಿಸುತ್ತಿದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಗ್ರಾಮದ ಹಲವಾರು ನಿವಾಸಿಗಳು ತಮ್ಮ ಕುಟುಂಬದವರ ಆಧಾರ್ ಕಾರ್ಡ್‌ಗಳೂ ಇದೇ ರೀತಿ ನದಿಯಲ್ಲಿ ಸಿಕ್ಕಿವೆ ಎಂದು ಹೇಳಿದ್ದಾರೆ. ವಿಳಾಸ ಅಥವಾ ಹೆಸರು ಬದಲಾವಣೆಗಾಗಿ ಹಣ ಪಾವತಿಸಿ ಹೊಸ ಕಾರ್ಡ್ ಬರಲು ಕಾಯುತ್ತಿದ್ದವರು ಈಗ ಅವು ನೀರಿನಲ್ಲಿ ಬಿದ್ದಿರುವುದನ್ನು ಕಂಡು ಆಕ್ರೋಶಗೊಂಡಿದ್ದಾರೆ.

ಈ ಘಟನೆ ಬೆಳಕಿಗೆ ಬಂದ ನಂತರ ಸ್ಥಳೀಯ ಶಾಸಕರಾದ ಹಾಗೂ ವಿಧಾನಸಭೆ ಸ್ಪೀಕರ್ ಆಗಿರುವ ಯು.ಟಿ. ಖಾದರ್ ಅವರು ಪ್ರಕರಣದ ಕುರಿತು ಗಂಭೀರವಾಗಿ ಗಮನಹರಿಸಿದ್ದಾರೆ. ಆಧಾರ್ ಕಾರ್ಡ್‌ಗಳು ನದಿ ತೀರದಲ್ಲಿ ಪತ್ತೆಯಾಗಲು ಕಾರಣವೇನು ಎಂಬುದನ್ನು ಸಂಪೂರ್ಣವಾಗಿ ತನಿಖೆ ನಡೆಸಿ ತಪ್ಪಿತಸ್ಥರನ್ನು ಪತ್ತೆಹಚ್ಚುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಸಂಬಂಧಪಟ್ಟ ಯುಐಡಿಎಐ ಯೋಜನಾ ವ್ಯವಸ್ಥಾಪಕರಿಗೆ ಕೂಡಲೇ ತನಿಖೆ ನಡೆಸಿ ಕಾನೂನು ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಲಾಗಿದೆ. ಈ ಘಟನೆಯ ಬಳಿಕ ಜನರಿಗೆ ತಲುಪಬೇಕಾದ ದಾಖಲೆಗಳ ಸುರಕ್ಷತೆ ಮತ್ತು ವಿತರಣಾ ವ್ಯವಸ್ಥೆ ಬಗ್ಗೆ ಪ್ರಶ್ನೆಗಳು ಉದ್ಭವಿಸಿವೆ.

Satish Raj Goravigere

12 ವರ್ಷಗಳ ಪತ್ರಿಕಾ ಅನುಭವ ಹೊಂದಿರುವ ಸತೀಶ್ ರಾಜ್ ಗೊರವಿಗೆರೆ ರವರು, 2019ರಲ್ಲಿ ಕನ್ನಡ ನ್ಯೂಸ್ ಟುಡೇ ಸ್ಥಾಪಿಸಿದವರು. ಬೆಂಗಳೂರು, ಕರ್ನಾಟಕ ಹಾಗೂ ರಾಷ್ಟ್ರೀಯ… More »

Related Stories