ಕುಕ್ಕೆ ಸುಬ್ರಹ್ಮಣ್ಯ to ಬೆಂಗಳೂರು ಬರುತ್ತಿದ್ದ ಬಸ್‌ಗೆ ಬೆಂಕಿ; 37 ಪ್ರಯಾಣಿಕರು ಪಾರು
ಸುಬ್ರಹ್ಮಣ್ಯ-ಗುಂಡ್ಯ ಹೆದ್ದಾರಿಯ ಎರ್ಮಾಯಿಲ್ ಬಳಿ ಬೆಂಗಳೂರಿಗೆ ತೆರಳುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್‌ಗೆ ಬೆಂಕಿ ಹೊತ್ತಿಕೊಂಡಿದ್ದು, ಚಾಲಕನ ಸಮಯಪ್ರಜ್ಞೆಯಿಂದ 37 ಪ್ರಯಾಣಿಕರು ಸುರಕ್ಷಿತವಾಗಿ ಪಾರಾಗಿದ್ದಾರೆ.

ಕುಕ್ಕೆ ಸುಬ್ರಹ್ಮಣ್ಯದಿಂದ ಬೆಂಗಳೂರಿನತ್ತ (Kukke Subrahmanya to Bengaluru) ತೆರಳುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ (KSRTC Bus) ಬೆಂಕಿಗಾಹುತಿಯಾದ ಘಟನೆ ಶನಿವಾರ ರಾತ್ರಿ ಸುಬ್ರಹ್ಮಣ್ಯ-ಗುಂಡ್ಯ ರಾಜ್ಯ ಹೆದ್ದಾರಿಯ ಎರ್ಮಾಯಿಲ್ ಬಳಿ ನಡೆದಿದೆ. ಅದೃಷ್ಟವಶಾತ್ ಬಸ್‌ನಲ್ಲಿದ್ದ 37 ಪ್ರಯಾಣಿಕರು ಯಾವುದೇ ಅಪಾಯವಿಲ್ಲದೆ ಪಾರಾಗಿದ್ದಾರೆ.
ಕುಕ್ಕೆ ಸುಬ್ರಹ್ಮಣ್ಯದಿಂದ ಪ್ರಯಾಣಿಕರನ್ನು ಕರೆದೊಯ್ಯುತ್ತಿದ್ದ ಬಿ.ಸಿ.ರೋಡ್ ಡಿಪೋಗೆ ಸೇರಿದ ಬಸ್ ಎರ್ಮಾಯಿಲ್ ಸಮೀಪ ಸಂಚರಿಸುತ್ತಿದ್ದಾಗ ಏಕಾಏಕಿ ಹೊಗೆ ಕಾಣಿಸಿಕೊಂಡಿದೆ. ಇದನ್ನು ಗಮನಿಸಿದ ಚಾಲಕ ಕೂಡಲೇ ಬಸ್ ನಿಲ್ಲಿಸಿ ಪ್ರಯಾಣಿಕರಿಗೆ ಎಚ್ಚರಿಕೆ ನೀಡಿದ್ದಾರೆ.
ಪ್ರಯಾಣಿಕರು ಆತಂಕಕ್ಕೆ ಒಳಗಾಗುವ ಮುನ್ನವೇ ಎಲ್ಲರನ್ನೂ ತಕ್ಷಣ ಬಸ್‌ನಿಂದ ಕೆಳಗಿಳಿಸುವಲ್ಲಿ ಚಾಲಕ ಯಶಸ್ವಿಯಾಗಿದ್ದಾರೆ. 37 ಮಂದಿ ಸುರಕ್ಷಿತವಾಗಿ ಹೊರಬಂದ ಕೆಲವೇ ಕ್ಷಣಗಳಲ್ಲಿ ಬಸ್‌ನಲ್ಲಿ ಬೆಂಕಿ ತೀವ್ರವಾಗಿ ವ್ಯಾಪಿಸಿದ್ದು, ನೋಡನೋಡುತ್ತಿದ್ದಂತೆ ಸಂಪೂರ್ಣ ಬಸ್ ಬೆಂಕಿಯ ಕೆನ್ನಾಲಿಗೆಗೆ ಸಿಲುಕಿದೆ.
ಬೆಂಕಿಯ ತೀವ್ರತೆ ಹೆಚ್ಚಾದ ಪರಿಣಾಮ ಬಸ್‌ನ ಬಹುತೇಕ ಭಾಗ ಸುಟ್ಟು ಕರಕಲಾಗಿದೆ. ಘಟನೆ ನಡೆದ ಸಂದರ್ಭದಲ್ಲಿ ಸುಬ್ರಹ್ಮಣ್ಯ-ಗುಂಡ್ಯ ರಾಜ್ಯ ಹೆದ್ದಾರಿಯಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು.
ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳೀಯರು ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಪರಿಸ್ಥಿತಿ ನಿಯಂತ್ರಿಸಲು ಮುಂದಾಗಿದ್ದಾರೆ. ಬೆಂಕಿ ಕಾಣಿಸಿಕೊಳ್ಳಲು ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ. ಬಸ್‌ನ ಇಂಜಿನ್ ಭಾಗದಲ್ಲಿ ತಾಂತ್ರಿಕ ದೋಷ (Technical Fault) ಉಂಟಾಗಿತೇ ಅಥವಾ ಬೇರೆ ಕಾರಣವಿದೆಯೇ ಎಂಬ ಬಗ್ಗೆ ಪರಿಶೀಲನೆ ನಡೆಯಬೇಕಿದೆ.
ಘಟನೆಯಿಂದ ಉಂಟಾದ ನಷ್ಟದ ಪ್ರಮಾಣದ ಬಗ್ಗೆಯೂ ಅಧಿಕೃತ ಮಾಹಿತಿ ಇನ್ನಷ್ಟೇ ಲಭ್ಯವಾಗಬೇಕಿದೆ. ಬೆಂಕಿಯ ಕಾರಣ ತಿಳಿಯಲು ಅಧಿಕಾರಿಗಳು ತನಿಖೆ (Investigation) ನಡೆಸುತ್ತಿದ್ದಾರೆ.
ಚಾಲಕ ಸಮಯಪ್ರಜ್ಞೆಯಿಂದ ನಡೆದುಕೊಂಡು ತಕ್ಷಣ ಬಸ್ ನಿಲ್ಲಿಸಿ ಎಲ್ಲ ಪ್ರಯಾಣಿಕರನ್ನು ಸುರಕ್ಷಿತವಾಗಿ ಹೊರಗೆ ಕಳುಹಿಸಿದ್ದರಿಂದ ದೊಡ್ಡ ಅನಾಹುತ ತಪ್ಪಿದಂತಾಗಿದೆ. ಚಾಲಕನ ತ್ವರಿತ ನಿರ್ಧಾರದಿಂದ 37 ಜೀವಗಳು ಅಪಾಯದಿಂದ ಪಾರಾಗಿವೆ.



