ಕಾರು ಮತ್ತು ಸ್ಕೂಟರ್ ನಡುವೆ ಭೀಕರ ಅಪಘಾತ: ಬೈಕ್ ಸವಾರ ಸಾವು
ಕುಂದಾಪುರದ ರಾಷ್ಟ್ರೀಯ ಹೆದ್ದಾರಿ 66ರ ಅರಾಟೆ ಸೇತುವೆ ಬಳಿ ಕಾರು ಮತ್ತು ಸ್ಕೂಟರ್ ನಡುವೆ ಸಂಭವಿಸಿದ ಅಪಘಾತದಲ್ಲಿ ಅಜಿತ್ ಪೌಲ್ ಲೂಯಿಸ್ ಮೃತಪಟ್ಟಿದ್ದು, ಘಟನೆಯಿಂದ ಹೆದ್ದಾರಿಯಲ್ಲಿ ಭಾರೀ ಸಂಚಾರ ದಟ್ಟಣೆ ಉಂಟಾಯಿತು.

ಕುಂದಾಪುರ: ರಾಷ್ಟ್ರೀಯ ಹೆದ್ದಾರಿ 66ರ (National Highway 66) ಅರಾಟೆ ಸೇತುವೆ ಬಳಿ ಕಾರು ಮತ್ತು ಸ್ಕೂಟರ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಸವಾರ ಮೃತಪಟ್ಟಿದ್ದಾರೆ. ಸೋಮವಾರ ಬೆಳಗ್ಗೆ ಈ ದುರ್ಘಟನೆ ನಡೆದಿದೆ.
ಮೃತರನ್ನು ಕುಂದಾಪುರ ನಗರದ ಜೆಎಲ್‌ಬಿ ರಸ್ತೆಯ ವಡೇರಹೋಬಳಿ ನಿವಾಸಿ ಅಜಿತ್ ಪೌಲ್ ಲೂಯಿಸ್ (55) ಎಂದು ಗುರುತಿಸಲಾಗಿದೆ. ಇವರು ದೆಹಲಿಯ ಖಾಸಗಿ ಕಂಪನಿಯೊಂದರಲ್ಲಿ ಜನರಲ್ ಮ್ಯಾನೇಜರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಮೆಕ್ಯಾನಿಕಲ್ ಎಂಜಿನಿಯರ್ ಆಗಿದ್ದರು.
ತಾಯಿಯ ಅನಾರೋಗ್ಯದ ಹಿನ್ನೆಲೆಯಲ್ಲಿ ಸುಮಾರು 8ರಿಂದ 10 ದಿನಗಳ ಹಿಂದೆ ಊರಿಗೆ ಬಂದಿದ್ದರು. ಸಾಮಾನ್ಯವಾಗಿ ವರ್ಷದಲ್ಲಿ ನಾಲ್ಕೈದು ಬಾರಿ ಕುಂದಾಪುರಕ್ಕೆ ಭೇಟಿ ನೀಡುತ್ತಿದ್ದರು. ಆದರೆ, ಈ ಬಾರಿ ಕುಟುಂಬದೊಂದಿಗೆ ಸಮಯ ಕಳೆಯಲು ಬಂದಿದ್ದ ಅವರು ಅಪಘಾತದಲ್ಲಿ ಮೃತಪಟ್ಟಿರುವುದು ದುಃಖಕ್ಕೆ ಕಾರಣವಾಗಿದೆ.
ಇದನ್ನೂಓದಿ : ಬೆಳಗಾವಿಯಲ್ಲಿ ಭೀಕರ ಅಪಘಾತ: ಟ್ರ್ಯಾಕ್ಟರ್‌ಗೆ ಟ್ರಕ್ ಡಿಕ್ಕಿ, ಮೂವರ ಸಾವು
ಪೊಲೀಸರ ಪ್ರಾಥಮಿಕ ಮಾಹಿತಿಯ ಪ್ರಕಾರ, ಅಜಿತ್ ಅವರು ಕುಂದಾಪುರದಿಂದ ತ್ರಾಸಿ ಕಡೆಗೆ ಸ್ಕೂಟರ್‌ನಲ್ಲಿ ತೆರಳುತ್ತಿದ್ದರು. ಈ ವೇಳೆ ಕಾರು ಅಜಾಗರೂಕತೆಯಿಂದ ಬಂದು ಸ್ಕೂಟರ್‌ಗೆ ಢಿಕ್ಕಿ ಹೊಡೆದಿದೆ ಎನ್ನಲಾಗಿದೆ. ಢಿಕ್ಕಿಯ ರಭಸಕ್ಕೆ ರಸ್ತೆಗೆ ಎಸೆಯಲ್ಪಟ್ಟ ಅಜಿತ್ ಅವರ ತಲೆ ಮತ್ತು ಕಾಲುಗಳಿಗೆ ಗಂಭೀರ ಗಾಯಗಳಾಗಿದ್ದವು.
ಅಪಘಾತದ ಬಳಿಕ ಸ್ಥಳಕ್ಕೆ ಧಾವಿಸಿದ ಆ್ಯಂಬುಲೆನ್ಸ್ ಚಾಲಕ ಹಾಗೂ ಅವರ ತಂಡ ಗಾಯಾಳುವನ್ನು ತಕ್ಷಣ ಕುಂದಾಪುರದ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದರು. ಆದರೆ, ಗಾಯಾಳುವನ್ನು ಪರೀಕ್ಷಿಸಿದ ವೈದ್ಯರು ಅವರು ಮೃತಪಟ್ಟಿರುವುದಾಗಿ ಘೋಷಿಸಿದರು.
ಅಪಘಾತದ ಪರಿಣಾಮ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸಂಚಾರಕ್ಕೂ ತೀವ್ರ ಅಡಚಣೆ ಉಂಟಾಯಿತು. ಘಟನಾ ಸ್ಥಳದ ಎರಡೂ ಬದಿಗಳಲ್ಲಿ ನೂರಕ್ಕೂ ಹೆಚ್ಚು ವಾಹನಗಳು ಸಾಲುಗಟ್ಟಿ ನಿಂತಿದ್ದರಿಂದ ಭಾರೀ ಸಂಚಾರ ದಟ್ಟಣೆ (Traffic Jam) ಉಂಟಾಗಿತ್ತು.
ಬಿಸಿಲಿನ ನಡುವೆ ವಾಹನ ಸವಾರರು ಸುಮಾರು ಒಂದು ಗಂಟೆ ಕಾಲ ಪರದಾಡುವಂತಾಯಿತು. ಬಳಿಕ ಸ್ಥಳಕ್ಕೆ ಬಂದ ಪೊಲೀಸರು ವಾಹನಗಳನ್ನು ತೆರವುಗೊಳಿಸಿ ಸಂಚಾರಕ್ಕೆ ವ್ಯವಸ್ಥೆ ಮಾಡಿದರು.
ಕರ್ನಾಟಕ ರಾಜ್ಯದ ಮೂಲೆಮೂಲೆಗಳ ಕನ್ನಡ ಸುದ್ದಿಗಳ ಜೊತೆಗೆ ದಿನದ ಪ್ರಮುಖ ಬೆಳವಣಿಗೆಗಳನ್ನು Kannada News Today ಮೂಲಕ ತಿಳಿಯಿರಿ.



