ಮೈಕ್ರೋ ಫೈನಾನ್ಸ್ ಕಿರುಕುಳ: ತಾಯಿಯ ಆತ್ಮಹತ್ಯೆಯ ಬಳಿಕ ಮಗನೂ ಪ್ರಾಣತ್ಯಾಗ
ಬೆಳಗಿನ ಜಾವ ಹಲಗೂರು ಕೆರೆಯಲ್ಲಿ ರಂಜಿತ್ ಶವ ಪತ್ತೆಯಾಗಿದೆ. ಎರಡು-ಮೂರು ದಿನಗಳ ಹಿಂದೆ ಆತ ಆತ್ಮಹತ್ಯೆ ಮಾಡಿಕೊಂಡಿರಬಹುದೆಂದು ಶಂಕಿಸಲಾಗಿದೆ.
ಮಂಡ್ಯ (Mandya) : ಮಳವಳ್ಳಿ ತಾಲ್ಲೂಕಿನ ಕೊನ್ನಾಪುರ ಗ್ರಾಮದಲ್ಲಿ ಆರ್ಥಿಕ ಸಂಕಷ್ಟ ಹಾಗೂ ಮೈಕ್ರೋ ಫೈನಾನ್ಸ್ (Microfinance) ಸಂಸ್ಥೆಯ ಕಿರುಕುಳದ ಪರಿಣಾಮ ತಾಯಿ-ಮಗ (Mother and Son) ಆತ್ಮಹತ್ಯೆಗೆ ಶರಣಾದ ದುರ್ಘಟನೆ ನಡೆದಿದೆ. ಕೆಲ ದಿನಗಳ ಹಿಂದಷ್ಟೇ ತಾಯಿ ಪ್ರೇಮಾ ಆತ್ಮಹತ್ಯೆ ಮಾಡಿಕೊಂಡಿದ್ದರೆ, ಇದೀಗ ಆಘಾತವನ್ನು ಸಹಿಸಲಾರದೆ ಮಗನೂ ಪ್ರಾಣ ಕಳೆದುಕೊಂಡಿದ್ದಾನೆ.
ನಾಲ್ಕು ದಿನಗಳ ಹಿಂದೆ ಪ್ರೇಮಾ ಕ್ರಿಮಿನಾಶಕ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಳು. ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾದರೂ, ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದರು. ತಾಯಿಯನ್ನು ಕಳೆದುಕೊಂಡ ಶೋಕದಲ್ಲಿ ಮಗ ರಂಜಿತ್ ದುಃಖದಿಂದ ಜೀವನದಲ್ಲಿ ನಿರಾಸೆಯಾಗಿದ್ದ. ತಾಯಿಯ ಸಾವಿನಿಂದಾಗಿ ಮನನೊಂದು, ಅನಾರೋಗ್ಯದಿಂದ ಬಳಲುತ್ತಿದ್ದ ಆತ, ಮುಂದಿನ ಜೀವನ ಹೇಗೆ ಎಂಬ ಚಿಂತೆಯಲ್ಲಿ ಹಲಗೂರು ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ.
ಇಂದು (ಫೆಬ್ರವರಿ 01 ರಂದು) ಬೆಳಗಿನ ಜಾವ ಹಲಗೂರು ಕೆರೆಯಲ್ಲಿ ರಂಜಿತ್ ಶವ ಪತ್ತೆಯಾಗಿದೆ. ಎರಡು-ಮೂರು ದಿನಗಳ ಹಿಂದೆ ಆತ ಆತ್ಮಹತ್ಯೆ ಮಾಡಿಕೊಂಡಿರಬಹುದೆಂದು ಶಂಕಿಸಲಾಗಿದೆ.
ತಾಯಿ ಮೃತಪಟ್ಟ ದುಃಖ, ಜೊತೆಗೆ ಅಂಗವೈಕಲ್ಯದಿಂದ ಬಳಲುತ್ತಿದ್ದ ಆತ, ಮನಸ್ಸಿನಲ್ಲಿ ಏಕಾಂತದ ನೋವನ್ನು ಅನುಭವಿಸುತ್ತಿದ್ದ. ಈ ಎಲ್ಲಾ ಪರಿಸ್ಥಿತಿಗಳು ಅವನನ್ನು ಪ್ರಾಣ ಕಳೆದುಕೊಳ್ಳುವ ಹಾದಿಯತ್ತ ಒಯ್ದವು ಎಂದು ಶಂಕಿಸಲಾಗಿದೆ.
ಪ್ರೇಮಾ ಕುಟುಂಬ 2018ರಲ್ಲಿ ಉಜ್ಜೀವನ್ ಬ್ಯಾಂಕ್‌ನಿಂದ (Ujjivan small finance bank) ಅವರು 6 ಲಕ್ಷ ರೂ. ಸಾಲ (Loan) ತೆಗೆದುಕೊಂಡಿದ್ದರು. ಅವರು ಈವರೆಗೆ ಬಡ್ಡಿಯೊಂದಿಗೆ ತಕ್ಕಷ್ಟು ಹಣ ಕಟ್ಟಿದ್ದರೂ, ಇನ್ನೂ 6 ಲಕ್ಷ ರೂ. ಕಟ್ಟಬೇಕೆಂದು ಫೈನಾನ್ಸ್ ಸಂಸ್ಥೆಯವರು ತೀವ್ರ ಒತ್ತಡ ಹೇರುತ್ತಿದ್ದರು ಎನ್ನಲಾಗಿದೆ.
ಅವರ ಕಿರುಕುಳಕ್ಕೆ ಬೇಸತ್ತ ಕುಟುಂಬಕ್ಕೆ ತೀವ್ರ ಆರ್ಥಿಕ ಸಂಕಷ್ಟ ಎದುರಾಯಿತು. ಮನೆಯಲ್ಲಿ ಪ್ರತಿನಿತ್ಯ ಫೈನಾನ್ಸ್ ಸಂಸ್ಥೆಯವರು ಆಗಮಿಸಿ ಬೆದರಿಕೆ ಹಾಕುತ್ತಿದ್ದರು ಎನ್ನಲಾಗಿದೆ.
ಇದೆಲ್ಲದರ ಮಧ್ಯೆ, ತಾಯಿ ಪ್ರೇಮಾ ಸಾವಿನ ಆಘಾತವನ್ನು ಸಹಿಸಲು ಸಾಧ್ಯವಾಗದ ಮಗ ರಂಜಿತ್ ಆತ್ಮಹತ್ಯೆ ಮಾಡಿಕೊಂಡ ಘಟನೆ ಗ್ರಾಮದಲ್ಲಿ ಆಕ್ರೋಶ ಮೂಡಿಸಿದೆ. ಈ ಬಗ್ಗೆ ಕುಟುಂಬದ ಇತರ ಸದಸ್ಯರು ಅಳಲು ತೋಡಿಕೊಂಡಿದ್ದಾರೆ.
Microfinance Harassment Son Ends Life After Mother’s Suicide in Mandya