ಹೆಂಡತಿ ಮೇಲೆ ಪಿಕಪ್ ವಾಹನ ಹರಿಸಿ ಹತ್ಯೆ ಮಾಡಿದ ಗಂಡ; ಪೊಲೀಸರಿಗೆ ಶರಣು
ಸಾಲ ತೀರಿಸಲು ಮನೆಯಲ್ಲಿದ್ದ ಆಕಳನ್ನು ಮಾರಾಟ ಮಾಡುವ ವಿಚಾರಕ್ಕೆ ದಂಪತಿ ನಡುವೆ ಜಗಳ ಆರಂಭವಾಗಿದ್ದು, ಕೊನೆಗೆ ಪತಿ ಪಿಕಪ್ ವಾಹನ ಹರಿಸಿ ಪತ್ನಿಯನ್ನು ಹತ್ಯೆ ಮಾಡಿದ್ದಾನೆ.

ಜೈಪುರ: ಸಾಲ ತೀರಿಸಲು ಆಕಳನ್ನು ಮಾರಾಟ ಮಾಡುವಂತೆ ಪತಿ ಒತ್ತಾಯಿಸಿದ್ದು, ಇದಕ್ಕೆ ಪತ್ನಿ ವಿರೋಧ ವ್ಯಕ್ತಪಡಿಸಿದ್ದೇ ಘಟನೆಗೆ ಕಾರಣ ಎನ್ನಲಾಗಿದೆ. ಕೋಪಗೊಂಡ ಪತಿ ಪಿಕಪ್ ವಾಹನವನ್ನು ಪತ್ನಿಯ ಮೇಲೆ ಹರಿಸಿ ಕೊಂದಿದ್ದಾನೆ.
ರಾಜಸ್ಥಾನದ (Rajasthan) ಸಿಕಾರ್ ಜಿಲ್ಲೆಯ ಕೋಲಿಡಾ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಮೃತ ಮಹಿಳೆಯನ್ನು 52 ವರ್ಷದ ಚುಂಕಿ ದೇವಿ ಎಂದು ಗುರುತಿಸಲಾಗಿದ್ದು, ಆಕೆಯ ಪತಿ 56 ವರ್ಷದ ಚುನ್ನೀಲಾಲ್ ಕುಮಾವತ್ ಕೊಲೆ ಆರೋಪ ಎದುರಿಸುತ್ತಿದ್ದಾನೆ.
ಪೊಲೀಸರ ಪ್ರಾಥಮಿಕ ತನಿಖೆಯ ಪ್ರಕಾರ, ಚುನ್ನೀಲಾಲ್ ಸುಮಾರು 15 ಲಕ್ಷ ರೂಪಾಯಿ ಸಾಲ ಮಾಡಿಕೊಂಡಿದ್ದ. ಈ ಸಾಲದಿಂದ ಹೊರಬರಲು ಇಬ್ಬರು ಪುತ್ರರ ಬಳಿ ಆರ್ಥಿಕ ನೆರವು ಕೇಳಿದ್ದರೂ, ಅವರ ಆದಾಯ ಕಡಿಮೆ ಇದ್ದ ಕಾರಣ ನಿರೀಕ್ಷಿತ ಸಹಾಯ ಸಿಕ್ಕಿರಲಿಲ್ಲ. ಹೀಗಾಗಿ ಮನೆಯಲ್ಲಿದ್ದ ಆಕಳನ್ನು ಮಾರಾಟ ಮಾಡಿ ಸಾಲದ ಒಂದು ಭಾಗವನ್ನು ತೀರಿಸಲು ಆತ ನಿರ್ಧರಿಸಿದ್ದ ಎನ್ನಲಾಗಿದೆ.
ಬುಧವಾರ ಮಧ್ಯಾಹ್ನ ಸುಮಾರು 3ರಿಂದ 4 ಗಂಟೆಯ ನಡುವೆ ಮನೆಗೆ ಬಂದ ಚುನ್ನೀಲಾಲ್, ಆಕಳನ್ನು ಮಾರುವಂತೆ ಪತ್ನಿಗೆ ತಿಳಿಸಿದ್ದಾನೆ. ಆದರೆ ಚುಂಕಿ ದೇವಿ ಇದಕ್ಕೆ ಒಪ್ಪದಿದ್ದಾಗ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ. ವಾಗ್ವಾದ ತೀವ್ರಗೊಂಡ ಬಳಿಕ ಪತ್ನಿಯ ಮೇಲೆ ಕೋಪಗೊಂಡ ಆತ, ಮನೆಯಿಂದ ಸುಮಾರು 100 ಮೀಟರ್ ದೂರದಲ್ಲಿ ತನ್ನ ಪಿಕಪ್ ವಾಹನವನ್ನು ಆಕೆಯ ಮೇಲೆ ಹರಿಸಿದ್ದಾನೆ ಎಂದು ತನಿಖೆಯಲ್ಲಿ ತಿಳಿದುಬಂದಿದೆ.
ಹತ್ಯೆ ಬಳಿಕ ನೇರವಾಗಿ ಪೊಲೀಸ್ ಠಾಣೆಗೆ ಹೋದ ಆರೋಪಿ
ಘಟನೆ ನಡೆದ ನಂತರ ಆರೋಪಿ ಚುನ್ನೀಲಾಲ್ ಪೊಲೀಸ್ ಠಾಣೆಗೆ ತೆರಳಿ ಪತ್ನಿಯನ್ನು ತಾನೇ ಕೊಂದಿರುವುದಾಗಿ ಒಪ್ಪಿಕೊಂಡಿದ್ದಾನೆ ಎಂದು ವರದಿಯಾಗಿದೆ. ಚಾಲಕನಾಗಿ ಕೆಲಸ ಮಾಡುತ್ತಿದ್ದ ಆತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಈ ಕುರಿತು ಮಾಹಿತಿ ನೀಡಿರುವ ಠಾಣಾಧಿಕಾರಿ ರಾಕೇಶ್ ಕುಮಾರ್ ಮೀನಾ, ಕುಟುಂಬದಲ್ಲಿ ಹಣಕಾಸಿನ ವಿಚಾರವಾಗಿ ಆಗಾಗ ಜಗಳ ನಡೆಯುತ್ತಿತ್ತು. ಆರೋಪಿಗೆ ಸುಮಾರು 15 ಲಕ್ಷ ರೂಪಾಯಿ ಸಾಲವಿದ್ದ ಸಂಗತಿ ಪ್ರಾಥಮಿಕ ತನಿಖೆಯಲ್ಲಿ ಬೆಳಕಿಗೆ ಬಂದಿದೆ ಎಂದು ತಿಳಿಸಿದ್ದಾರೆ.
ದಂಪತಿಯ ಇಬ್ಬರು ಪುತ್ರರೂ ಟೈಲ್ಸ್ ಅಳವಡಿಸುವ ಕೆಲಸ ಮಾಡುತ್ತಿದ್ದಾರೆ. ಹಿರಿಯ ಮಗ ಪತ್ನಿಯೊಂದಿಗೆ ಉತ್ತರ ಪ್ರದೇಶದಲ್ಲಿ ಕೆಲಸ ಮಾಡುತ್ತಿದ್ದರೆ, ಕಿರಿಯ ಮಗ ಒಂದು ವರ್ಷದ ಹಿಂದಷ್ಟೇ ಮದುವೆಯಾಗಿದ್ದಾನೆ. ಘಟನೆ ನಡೆದ ದಿನ ಕಿರಿಯ ಮಗ ಕೆಲಸದ ನಿಮಿತ್ತ ಖಾಟುವಿನಲ್ಲಿ ಇದ್ದ ಎನ್ನಲಾಗಿದೆ.
ಸದ್ಯ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ವೈದ್ಯಕೀಯ ಪರೀಕ್ಷೆ ಸೇರಿದಂತೆ ಕಾನೂನು ಪ್ರಕ್ರಿಯೆಗಳನ್ನು ಮುಂದುವರಿಸಿದ್ದಾರೆ. ಸಣ್ಣ ಕೌಟುಂಬಿಕ ವಿಚಾರದಿಂದ ಆರಂಭವಾದ ಸಂಘರ್ಷವೊಂದು ಮಹಿಳೆಯ ಜೀವವನ್ನೇ ಬಲಿ ಪಡೆದಿರುವುದು ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.
ಕರ್ನಾಟಕ ರಾಜ್ಯದ ಮೂಲೆಮೂಲೆಗಳ ಕನ್ನಡ ಸುದ್ದಿಗಳ ಜೊತೆಗೆ ದಿನದ ಪ್ರಮುಖ ಬೆಳವಣಿಗೆಗಳನ್ನು Kannada News Today ಮೂಲಕ ತಿಳಿಯಿರಿ.








