Arul Vignesh | ಮಹಿಳಾ ಜಿಲ್ಲಾಧಿಕಾರಿ ಮೊಬೈಲ್ಗೆ ಅಸಭ್ಯ ಸಂದೇಶ; ಟಿವಿಕೆ ಶಾಸಕ ಅರುಳ್ ವಿಘ್ನೇಶ್ ಬಂಧನ
Arul Vignesh: ಮಹಿಳಾ ಜಿಲ್ಲಾಧಿಕಾರಿಯ ಮೊಬೈಲ್ಗೆ ಅಸಭ್ಯ ಸಂದೇಶ ಕಳುಹಿಸಿದ ಆರೋಪ ತಮಿಳುನಾಡಿನ ರಾಜಕೀಯದಲ್ಲಿ ಸಂಚಲನ ಮೂಡಿಸಿದೆ. ಪ್ರಕರಣದ ಗಂಭೀರತೆ ಪರಿಗಣಿಸಿರುವ ಪೊಲೀಸರು ಶಾಸಕನನ್ನು ಬಂಧಿಸಿದ್ದು, ತನಿಖೆಯ ಮೇಲೆ ಮದ್ರಾಸ್ ಹೈಕೋರ್ಟ್ ಕೂಡ ನಿಗಾ ಇರಿಸಿದೆ.

- ಟಿವಿಕೆ ಶಾಸಕ ಅರುಳ್ ವಿಘ್ನೇಶ್ ಬಂಧನ
- ಮಹಿಳಾ ಜಿಲ್ಲಾಧಿಕಾರಿಯಿಂದ ದೂರು
- ತನಿಖೆಗೆ ಹೈಕೋರ್ಟ್ ನಿರ್ದೇಶನ
ತಮಿಳುನಾಡು (Tamil Nadu): ಮಹಿಳಾ ಅಧಿಕಾರಿಗೆ ಅಸಭ್ಯ ಸಂದೇಶ ಕಳುಹಿಸಿದ ಆರೋಪದ ಮೇಲೆ ತಮಿಳಗ ವೆಟ್ರಿ ಕಳಗಂ (TVK) ಶಾಸಕ ಅರುಳ್ ವಿಘ್ನೇಶ್ (Arul Vignesh) ಅವರನ್ನು ಪೊಲೀಸರು ಬಂಧಿಸಿದ್ದಾರೆ. ಈ ಬೆಳವಣಿಗೆ ತಮಿಳುನಾಡಿನ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ.
ಕಳ್ಳಕುರಿಚಿ ಕ್ಷೇತ್ರದ ಶಾಸಕ ಅರುಳ್ ವಿಘ್ನೇಶ್ ವಿರುದ್ಧ ಮಹಿಳಾ ಜಿಲ್ಲಾಧಿಕಾರಿಯೊಬ್ಬರು ಕಿರುಕುಳದ ಆರೋಪ ಮಾಡಿ ಪೊಲೀಸರಿಗೆ ದೂರು ನೀಡಿದ್ದರು. ತಮ್ಮ ಮೊಬೈಲ್ಗೆ ಅಸಭ್ಯ ಸಂದೇಶಗಳನ್ನು ಕಳುಹಿಸಲಾಗುತ್ತಿದೆ ಎಂದು ಅವರು ದೂರಿನಲ್ಲಿ ಉಲ್ಲೇಖಿಸಿದ್ದರು. ಈ ಸಂಬಂಧ ಮೂರು ದಿನಗಳ ಹಿಂದೆಯೇ ಪ್ರಕರಣ ದಾಖಲಾಗಿತ್ತು. ಇದೀಗ ಪೊಲೀಸರು ಮುಂದಿನ ಕ್ರಮ ಕೈಗೊಂಡು ಶಾಸಕರನ್ನು ವಶಕ್ಕೆ ಪಡೆದಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದ ಮೆಟ್ಟಿಲೇರಿದ ಎಐಎಡಿಎಂಕೆ (AIADMK) ಪರ ವಕೀಲರೊಬ್ಬರು, ಶಾಸಕರ ವಿರುದ್ಧ ಕ್ರಮ ಕೈಗೊಳ್ಳುವಂತೆ ಮದ್ರಾಸ್ ಹೈಕೋರ್ಟ್ (Madras High Court) ಗಮನ ಸೆಳೆದಿದ್ದರು. ಪ್ರಕರಣದ ತನಿಖೆಯಲ್ಲಿ ಯಾವುದೇ ಲೋಪವಾಗದಂತೆ ನೋಡಿಕೊಳ್ಳಬೇಕೆಂಬುದು ಅರ್ಜಿಯ ಪ್ರಮುಖ ಉದ್ದೇಶವಾಗಿತ್ತು.
ಇದರ ಬೆನ್ನಲ್ಲೇ ಮದ್ರಾಸ್ ಹೈಕೋರ್ಟ್ ತನಿಖೆಯ ಮೇಲ್ವಿಚಾರಣೆಯನ್ನು ಐಜಿ (IG) ಹಂತದ ಅಧಿಕಾರಿಯೊಬ್ಬರು ವಹಿಸಿಕೊಳ್ಳುವಂತೆ ಸೂಚಿಸಿತ್ತು. ನ್ಯಾಯಾಲಯದ ನಿರ್ದೇಶನದ ಬಳಿಕ ಕಳ್ಳಕುರಿಚಿ ಪೊಲೀಸರು ಮಹಿಳಾ ಕಿರುಕುಳಕ್ಕೆ ಸಂಬಂಧಿಸಿದ ಕಾಯ್ದೆಯ ಐದು ಸೆಕ್ಷನ್ಗಳ ಅಡಿಯಲ್ಲಿ ಶಾಸಕನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದರು.
ಸದ್ಯ ಅರುಳ್ ವಿಘ್ನೇಶ್ ಬಂಧನವಾಗಿದ್ದು, ಪ್ರಕರಣದ ಮುಂದಿನ ತನಿಖೆ ಕುತೂಹಲ ಮೂಡಿಸಿದೆ. ಮಹಿಳಾ ಅಧಿಕಾರಿಯ ದೂರಿನ ಆಧಾರದ ಮೇಲೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.



