ಯಾವಾಗ ನೋಡಿದ್ರೂ ಜಗಳ; ಪತ್ನಿಯರನ್ನೇ ಕೊಲೆ ಮಾಡಿ ಕಾಡಿನಲ್ಲಿ ಶವ ಹೂತಿಟ್ಟ ಸಹೋದರರು
ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಇಬ್ಬರು ಸಹೋದರರು ತಮ್ಮ ಪತ್ನಿಯರನ್ನು ಹತ್ಯೆಗೈದು, ಆ್ಯಂಬುಲೆನ್ಸ್ನಲ್ಲಿ ಶವಗಳನ್ನು ಅರಣ್ಯ ಪ್ರದೇಶಕ್ಕೆ ಸಾಗಿಸಿ ಹೂತಿಟ್ಟಿರುವ ಭೀಕರ ಘಟನೆ ಜಾರ್ಖಂಡ್ನಲ್ಲಿ ಬೆಳಕಿಗೆ ಬಂದಿದೆ.

- ಇಬ್ಬರು ಮಹಿಳೆಯರ ಬರ್ಬರ ಹತ್ಯೆ
- ಆ್ಯಂಬುಲೆನ್ಸ್ನಲ್ಲಿ ಶವ ಸಾಗಿಸಿದ ಆರೋಪ
- ನಾಲ್ವರು ಕುಟುಂಬ ಸದಸ್ಯರ ಬಂಧನ
ಜಾರ್ಖಂಡ್: ಕುಟುಂಬದೊಳಗಿನ ಕಲಹ ಕೊಲೆಯಲ್ಲಿ ಅಂತ್ಯವಾಗಿರುವ ಆಘಾತಕಾರಿ ಘಟನೆ ಜಾರ್ಖಂಡ್ನ ಗುಮ್ಲಾ (Gumla) ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಇಬ್ಬರು ಸಹೋದರರು ತಮ್ಮ ಪತ್ನಿಯರನ್ನೇ ಹತ್ಯೆ ಮಾಡಿ, ಸಾಕ್ಷ್ಯ ಮರೆಮಾಚಲು ನೆರೆಯ ಸಿಮ್ಡೇಗಾ ಜಿಲ್ಲೆಯ ಅರಣ್ಯ ಪ್ರದೇಶದಲ್ಲಿ ಶವಗಳನ್ನು ಹೂತಿಟ್ಟಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಈ ಪ್ರಕರಣದಲ್ಲಿ ಶಿವಶಂಕರ್ ಸಾಹು ಮತ್ತು ನವೀನ್ ಸಾಹು ಎಂಬ ಇಬ್ಬರು ಸಹೋದರರನ್ನು ಪೊಲೀಸರು ಬಂಧಿಸಿದ್ದಾರೆ. ಇವರಿಗೆ ಸಹಾಯ ಮಾಡಿದ ಆರೋಪದ ಮೇಲೆ ತಂದೆ ಸಮೇಶ್ವರ್ ಸಾಹು ಮತ್ತು ತಾಯಿ ತಿಲೇಶ್ವರಿ ದೇವಿಯನ್ನೂ ವಶಕ್ಕೆ ಪಡೆಯಲಾಗಿದೆ. ಹತ್ಯೆಯಾದ ಮಹಿಳೆಯರನ್ನು ಮಿನಿ ಪ್ರಿಯಾ (28) ಮತ್ತು ರಾಧಿಕಾ ಕುಮಾರಿ (20) ಎಂದು ಗುರುತಿಸಲಾಗಿದೆ.
ಆ್ಯಂಬುಲೆನ್ಸ್ನಲ್ಲೇ ಶವಗಳ ಸಾಗಾಟ!
ಪೊಲೀಸರ ತನಿಖೆಯ ಪ್ರಕಾರ, ನವೆಂಬರ್ 23ರಂದು ಇಬ್ಬರು ಮಹಿಳೆಯರನ್ನು ಕೊಲೆ ಮಾಡಲಾಗಿದೆ ಎನ್ನಲಾಗಿದೆ. ಆರೋಪಿಗಳಲ್ಲಿ ಒಬ್ಬ ಆ್ಯಂಬುಲೆನ್ಸ್ ಚಾಲಕನಾಗಿದ್ದರಿಂದ, ಹತ್ಯೆಯ ಬಳಿಕ ಅದೇ ವಾಹನದಲ್ಲಿ ಇಬ್ಬರ ಮೃತದೇಹಗಳನ್ನು ಸಾಗಿಸಲಾಗಿದೆ ಎಂಬ ಮಾಹಿತಿ ಹೊರಬಂದಿದೆ.
ಗುಮ್ಲಾ ಜಿಲ್ಲೆಯಿಂದ ಸಿಮ್ಡೇಗಾ (Simdega) ಜಿಲ್ಲೆಯ ಅರಣ್ಯ ಪ್ರದೇಶಕ್ಕೆ ಶವಗಳನ್ನು ಕೊಂಡೊಯ್ದು ಅಲ್ಲಿ ಗುಂಡಿ ತೆಗೆದು ಹೂತಿಟ್ಟಿದ್ದರು ಎಂದು ತನಿಖೆಯಲ್ಲಿ ತಿಳಿದುಬಂದಿದೆ. ಪ್ರಕರಣದ ಗಂಭೀರತೆ ಅರಿತ ಪೊಲೀಸರು ಶವಗಳಿಗಾಗಿ ಶೋಧ ನಡೆಸಿ, ಕೊನೆಗೆ ಅವುಗಳನ್ನು ಹೊರತೆಗೆದಿದ್ದಾರೆ.
ಎರಡು ದಿನಗಳ ಹಿಂದಷ್ಟೇ ವಿವಾದಕ್ಕೆ ರಾಜಿ!
ಈ ಘಟನೆಯ ಮತ್ತೊಂದು ಆಘಾತಕಾರಿ ಸಂಗತಿಯೆಂದರೆ, ಕೊಲೆಗೆ ಮುನ್ನ ಕುಟುಂಬದಲ್ಲಿ ಉಂಟಾಗಿದ್ದ ಕಲಹವನ್ನು ಬಗೆಹರಿಸಿಕೊಳ್ಳುವ ಪ್ರಯತ್ನ ನಡೆದಿತ್ತು ಎನ್ನಲಾಗಿದೆ. ಇಬ್ಬರು ಮಹಿಳೆಯರ ನಡುವೆ ದೀರ್ಘಕಾಲದಿಂದ ವಿವಾದವಿದ್ದು, ಘಟನೆಗೆ ಎರಡು ದಿನಗಳ ಮೊದಲು ರಾಜಿ ಸಂಧಾನದ ಮೂಲಕ ಸಮಸ್ಯೆ ಬಗೆಹರಿದಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಆದರೆ ಈ ಸಂಧಾನದ ಬಳಿಕವೂ ಪರಿಸ್ಥಿತಿ ಸುಧಾರಿಸಿರಲಿಲ್ಲ ಎನ್ನುವುದು ತನಿಖೆಯ ವೇಳೆ ಗಮನಕ್ಕೆ ಬಂದಿದೆ. ಕುಟುಂಬದಲ್ಲಿ ಈ ಹಿಂದೆಯೂ ದಾಂಪತ್ಯ ಕಲಹಕ್ಕೆ ಸಂಬಂಧಿಸಿದ ದೂರುಗಳು ದಾಖಲಾಗಿದ್ದವು ಎಂಬ ಮಾಹಿತಿ ಪೊಲೀಸರಿಗೆ ಲಭ್ಯವಾಗಿದೆ.
ಪತ್ನಿಯರು ಕಾಣೆಯಾಗಿದ್ದಾರೆಂದು ದೂರು ನೀಡಿದ್ದ ಆರೋಪಿಗಳು
ಹತ್ಯೆಯ ಬಳಿಕ ಯಾರಿಗೂ ಅನುಮಾನ ಬರಬಾರದೆಂಬ ಉದ್ದೇಶದಿಂದ ಇಬ್ಬರು ಸಹೋದರರು ಪೊಲೀಸ್ ಠಾಣೆಗೆ ತೆರಳಿ ತಮ್ಮ ಪತ್ನಿಯರು ನಾಪತ್ತೆಯಾಗಿದ್ದಾರೆ ಎಂದು ದೂರು ನೀಡಿದ್ದರು. ಮಂಗಳವಾರ ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ವಿಚಾರಣೆ ಆರಂಭಿಸಿದ್ದರು.
ಆದರೆ ಸಹೋದರರು ನೀಡಿದ ಮಾಹಿತಿಯಲ್ಲಿ ಹಲವು ವ್ಯತ್ಯಾಸಗಳು ಕಂಡುಬಂದಿದ್ದರಿಂದ ಪೊಲೀಸರಿಗೆ ಅನುಮಾನ ಮೂಡಿತು. ಬಳಿಕ ಇಬ್ಬರನ್ನೂ ಪ್ರತ್ಯೇಕವಾಗಿ ವಿಚಾರಣೆ ನಡೆಸಿದಾಗ ಪ್ರಕರಣದ ಸತ್ಯಾಂಶ ಹೊರಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ವಿಚಾರಣೆ ವೇಳೆ ಆರೋಪಿಗಳು ಕೊಲೆಯ ಬಗ್ಗೆ ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ.
ಕೊಲೆಗೆ ಬಳಸಿದ ಕೊಡಲಿ, ಆ್ಯಂಬುಲೆನ್ಸ್ ವಶಕ್ಕೆ
ತನಿಖೆಯ ಮುಂದುವರಿದ ಭಾಗವಾಗಿ ಪೊಲೀಸರು ಅರಣ್ಯ ಪ್ರದೇಶದಲ್ಲಿ ಹೂತಿಟ್ಟಿದ್ದ ಇಬ್ಬರು ಮಹಿಳೆಯರ ಮೃತದೇಹಗಳನ್ನು ಹೊರತೆಗೆದಿದ್ದಾರೆ. ಹತ್ಯೆಗೆ ಬಳಸಲಾಗಿದೆ ಎನ್ನಲಾದ ಕೊಡಲಿಯನ್ನೂ ವಶಪಡಿಸಿಕೊಂಡಿದ್ದಾರೆ. ಶವಗಳನ್ನು ಸಾಗಿಸಲು ಬಳಸಿದ್ದ ಆ್ಯಂಬುಲೆನ್ಸ್ ಅನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.
ಗುಮ್ಲಾ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿಸ್ ಬಿನ್ ಜಮಾ ಪ್ರಕರಣದ ತನಿಖೆ ಮುಂದುವರಿದಿದೆ ಎಂದು ತಿಳಿಸಿದ್ದಾರೆ. ಈ ಕೃತ್ಯದಲ್ಲಿ ಕುಟುಂಬದ ಇತರ ಸದಸ್ಯರ ಪಾತ್ರವಿದೆಯೇ, ಹತ್ಯೆಗೆ ನಿಖರ ಕಾರಣವೇನು ಎಂಬುದರ ಬಗ್ಗೆಯೂ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ. ನಾಲ್ವರ ಬಂಧನದ ಬಳಿಕ ಪ್ರಕರಣದ ಹಲವು ಆಯಾಮಗಳು ತನಿಖೆಯಿಂದ ಹೊರಬರುವ ನಿರೀಕ್ಷೆಯಿದೆ.



