ಬೆಂಗಳೂರು: ಆಶಾ ಕಾರ್ಯಕರ್ತೆಯರ ಜೊತೆ ಇಂದು ಸಿಎಂ ಡಿಕೆ ಶಿವಕುಮಾರ್ ಸಭೆ!
ಆಶಾ ಕಾರ್ಯಕರ್ತೆಯರ ಬೇಡಿಕೆಗಳ ಕುರಿತು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಇಂದು ಅಧಿಕಾರಿಗಳೊಂದಿಗೆ ಚರ್ಚೆ ನಡೆಸುವ ಸಾಧ್ಯತೆ ಇದೆ. ಆದರೆ ಸಂಘದ ಪ್ರತಿನಿಧಿಗಳ ಜತೆಗಿನ ನೇರ ಸಭೆ ಬಗ್ಗೆ ಇನ್ನೂ ಅಧಿಕೃತ ಖಚಿತತೆ ಸಿಕ್ಕಿಲ್ಲ. ಫ್ರೀಡಂ ಪಾರ್ಕ್‌ನಲ್ಲಿ ಹೋರಾಟ ಮುಂದುವರಿದಿದ್ದು ಪರಿಹಾರಕ್ಕಾಗಿ ಕಾರ್ಯಕರ್ತೆಯರು ಕಾಯುತ್ತಿದ್ದಾರೆ.

- ಆಶಾ ಕಾರ್ಯಕರ್ತೆಯರ ಪ್ರತಿಭಟನೆ 11ನೇ ದಿನಕ್ಕೆ
- ಅಧಿಕಾರಿಗಳೊಂದಿಗೆ ಸಿಎಂ ಚರ್ಚೆ ಸಾಧ್ಯತೆ
- ಸಂಘದ ಪ್ರತಿನಿಧಿಗಳಿಗೆ ಇನ್ನೂ ಸಭೆಯ ಮಾಹಿತಿ ಇಲ್ಲ
ರಾಜಧಾನಿ ಬೆಂಗಳೂರಿನ (Bengaluru) ಫ್ರೀಡಂ ಪಾರ್ಕ್‌ನಲ್ಲಿ (Freedom Park) ಆಶಾ ಕಾರ್ಯಕರ್ತೆಯರು ನಡೆಸುತ್ತಿರುವ ಅನಿರ್ದಿಷ್ಟಾವಧಿ ಪ್ರತಿಭಟನೆಗೆ ಇನ್ನೂ ಪರಿಹಾರ ಸಿಕ್ಕಿಲ್ಲ. ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಹೋರಾಟ ನಡೆಸುತ್ತಿರುವ ಕಾರ್ಯಕರ್ತೆಯರೊಂದಿಗೆ ಮುಖ್ಯಮಂತ್ರಿ ನೇರವಾಗಿ ಮಾತುಕತೆ ನಡೆಸುತ್ತಾರೆಯೇ ಎಂಬ ಕುತೂಹಲ ಮುಂದುವರಿದಿದೆ. ಈ ನಡುವೆ ಶುಕ್ರವಾರ (ನ.27) ಪ್ರಮುಖ ಇಲಾಖೆಗಳ ಅಧಿಕಾರಿಗಳೊಂದಿಗೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ (D.K. Shivakumar) ಸಭೆ ನಡೆಸುವ ಸಾಧ್ಯತೆ ವ್ಯಕ್ತವಾಗಿದೆ.
ಆರೋಗ್ಯ ಮತ್ತು ಹಣಕಾಸು ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿ, ಆಶಾ ಕಾರ್ಯಕರ್ತೆಯರ ಬೇಡಿಕೆಗಳನ್ನು ಈಡೇರಿಸಲು ಇರುವ ಅವಕಾಶಗಳನ್ನು ಪರಿಶೀಲಿಸುವುದು ಸರ್ಕಾರದ ಮುಂದಿರುವ ಉದ್ದೇಶ ಎನ್ನಲಾಗಿದೆ. ಅಗತ್ಯವಿದ್ದರೆ ಸಂಘದ ಮುಖಂಡರನ್ನೂ ಈ ಸಭೆಗೆ ಆಹ್ವಾನಿಸುವ ಸಾಧ್ಯತೆಯಿದೆ. ಆದರೆ ಕಾರ್ಯಕರ್ತೆಯರ ಸಂಘಕ್ಕೆ ಮುಖ್ಯಮಂತ್ರಿಗಳೊಂದಿಗಿನ ಸಭೆಯ ಬಗ್ಗೆ ಈವರೆಗೆ ಅಧಿಕೃತ ಮಾಹಿತಿ ಬಂದಿಲ್ಲ.
ಎಐಯುಟಿಯುಸಿ (AIUTUC) ಸಂಯೋಜಿತ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ನೇತೃತ್ವದಲ್ಲಿ ನಡೆಯುತ್ತಿರುವ ಹೋರಾಟ ಗುರುವಾರಕ್ಕೆ ಹತ್ತು ದಿನ ಪೂರೈಸಿದೆ. ಶುಕ್ರವಾರ ಪ್ರತಿಭಟನೆ 11ನೇ ದಿನಕ್ಕೆ ಕಾಲಿಟ್ಟಿದೆ. ಪ್ರತಿಭಟನೆ ಹಿಂಪಡೆಯುವಂತೆ ಸರ್ಕಾರದಿಂದ ಮನವಿ ಬಂದಿದ್ದರೂ, ಬೇಡಿಕೆಗಳ ಬಗ್ಗೆ ಸ್ಪಷ್ಟ ನಿರ್ಧಾರ ಪ್ರಕಟವಾಗುವವರೆಗೆ ಸ್ಥಳದಿಂದ ತೆರಳುವುದಿಲ್ಲ ಎಂಬ ನಿಲುವಿನಲ್ಲಿ ಕಾರ್ಯಕರ್ತೆಯರು ಮುಂದುವರಿದಿದ್ದಾರೆ.
ಇದಕ್ಕೂ ಮೊದಲು ಗುರುವಾರ ಮುಖ್ಯಮಂತ್ರಿ ಅವರ ಪ್ರಧಾನ ಸಲಹೆಗಾರ ಜಿ.ಸಿ.ಚಂದ್ರಶೇಖರ್ (G.C. Chandrashekhar) ಅವರು ಸಂಘದ ಪದಾಧಿಕಾರಿಗಳೊಂದಿಗೆ ಸುದೀರ್ಘ ಮಾತುಕತೆ ನಡೆಸಿದ್ದರು. ಕಾರ್ಯಕರ್ತೆಯರ ಸಮಸ್ಯೆಗಳನ್ನು ಆಲಿಸಿ, ಬೇಡಿಕೆಗಳ ಬಗ್ಗೆ ಚರ್ಚಿಸುವಂತೆ ಮುಖ್ಯಮಂತ್ರಿ ಸೂಚನೆ ನೀಡಿದ ಹಿನ್ನೆಲೆಯಲ್ಲಿ ಈ ಸಭೆ ನಡೆದಿತ್ತು.
ಸಭೆಯಲ್ಲಿ ಸಂಘದ ಮುಖಂಡರು ತಮ್ಮ ಬೇಡಿಕೆಗಳನ್ನು ವಿವರವಾಗಿ ಮಂಡಿಸಿ, ಅವುಗಳನ್ನು ತುರ್ತಾಗಿ ಈಡೇರಿಸುವಂತೆ ಮನವಿ ಮಾಡಿದರು. ಎಲ್ಲ ವಿಚಾರಗಳನ್ನು ಆಲಿಸಿದ ಚಂದ್ರಶೇಖರ್, ಮುಖ್ಯಮಂತ್ರಿಗಳ ಗಮನಕ್ಕೆ ತಂದು ಮುಂದಿನ ಮಾಹಿತಿ ನೀಡುವುದಾಗಿ ಭರವಸೆ ನೀಡಿದ್ದರು.
ಆದರೆ ಗುರುವಾರವೇ ಅಂತಿಮ ನಿರ್ಧಾರ ಹೊರಬೀಳುವ ನಿರೀಕ್ಷೆಯಲ್ಲಿದ್ದ ಕಾರ್ಯಕರ್ತೆಯರಿಗೆ ಯಾವುದೇ ಸ್ಪಷ್ಟ ಉತ್ತರ ಸಿಗಲಿಲ್ಲ. ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಲು ಸಾಧ್ಯವಾಗದ ಕಾರಣ ಬೇಡಿಕೆಗಳ ಕುರಿತು ಅಧಿಕೃತ ನಿರ್ಧಾರ ತಿಳಿಸಲು ಸಾಧ್ಯವಾಗಿಲ್ಲ ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಡಿ.ನಾಗಲಕ್ಷ್ಮಿ (D. Nagalakshmi) ತಿಳಿಸಿದ್ದಾರೆ.
ಶುಕ್ರವಾರ ಮುಖ್ಯಮಂತ್ರಿಗಳೊಂದಿಗೆ ಮಾತನಾಡಿ ಸಭೆಯ ದಿನಾಂಕದ ಬಗ್ಗೆ ಮಾಹಿತಿ ನೀಡುವುದಾಗಿ ಸಲಹೆಗಾರರು ತಿಳಿಸಿರುವುದಾಗಿ ನಾಗಲಕ್ಷ್ಮಿ ಹೇಳಿದ್ದಾರೆ. ನವೆಂಬರ್ 27ರಂದು ಸಭೆ ನಡೆಸಲು ಸಾಧ್ಯವಾದರೆ ವ್ಯವಸ್ಥೆ ಮಾಡಲಾಗುವುದು. ಇಲ್ಲದಿದ್ದರೆ ಮುಂದಿನ ದಿನಾಂಕ ನಿಗದಿಪಡಿಸುವುದಾಗಿ ಭರವಸೆ ನೀಡಿದ್ದಾರೆ.
ಸದ್ಯ ಆಶಾ ಕಾರ್ಯಕರ್ತೆಯರ ಹೋರಾಟ ಮುಂದುವರಿದಿದ್ದು, ಸರ್ಕಾರದ ಮುಂದಿನ ನಡೆ ಏನಾಗಲಿದೆ ಎಂಬುದರ ಮೇಲೆ ಎಲ್ಲರ ಗಮನ ನೆಟ್ಟಿದೆ. ಮುಖ್ಯಮಂತ್ರಿಗಳ ಸಭೆ ನಡೆದರೆ ಬೇಡಿಕೆಗಳಿಗೆ ಪರಿಹಾರ ಸಿಗಬಹುದೇ ಎಂಬ ನಿರೀಕ್ಷೆಯಲ್ಲಿ ಸಂಘದ ಸದಸ್ಯರು ಕಾಯುತ್ತಿದ್ದಾರೆ.




