ಬೆಳಗಾವಿ ಜಿಲ್ಲಾ ನ್ಯಾಯಾಲಯಕ್ಕೆ ಬಾಂಬ್ ಬೆದರಿಕೆ! ಕೋರ್ಟ್ ಆವರಣದಲ್ಲಿ ಪೊಲೀಸರ ತಪಾಸಣೆ
ಬೆಳಗಾವಿ ಜಿಲ್ಲಾ ನ್ಯಾಯಾಲಯವನ್ನು ಗುರಿಯಾಗಿಸಿಕೊಂಡು ಬಂದ ಇ-ಮೇಲ್ ಸಂದೇಶದಿಂದ ಕೆಲಕಾಲ ಆತಂಕ ಉಂಟಾಯಿತು. ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು, ಬಾಂಬ್ ಪತ್ತೆ ದಳದೊಂದಿಗೆ ಪರಿಶೀಲನೆ ನಡೆಸಿ ಯಾವುದೇ ಸ್ಫೋಟಕ ಪತ್ತೆಯಾಗದಿರುವುದನ್ನು ಖಚಿತಪಡಿಸಿದರು.

- ಇ-ಮೇಲ್ ಮೂಲಕ ಬಾಂಬ್ ಬೆದರಿಕೆ
- ಕೋರ್ಟ್ ಆವರಣದಲ್ಲಿ ಪೊಲೀಸರ ತಪಾಸಣೆ
- ಪರಿಶೀಲನೆಯಲ್ಲಿ ಸ್ಫೋಟಕ ವಸ್ತು ಪತ್ತೆಯಾಗಿಲ್ಲ
Bomb Threat to Belagavi Court: ಬೆಳಗಾವಿ ಜಿಲ್ಲಾ ನ್ಯಾಯಾಲಯಕ್ಕೆ ಬಾಂಬ್ ಇಟ್ಟಿರುವುದಾಗಿ ಬೆದರಿಕೆ ಸಂದೇಶ ಬಂದ ಹಿನ್ನೆಲೆಯಲ್ಲಿ ಗುರುವಾರ (ನವೆಂಬರ್ 26) ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ನ್ಯಾಯಾಲಯದ ಕಟ್ಟಡವನ್ನು ಸ್ಫೋಟಿಸುವುದಾಗಿ ಎಚ್ಚರಿಕೆ ನೀಡಿದ್ದ ಇ-ಮೇಲ್ (Email Threat) ಅಧಿಕಾರಿಗಳ ಗಮನಕ್ಕೆ ಬಂದ ತಕ್ಷಣ ಭದ್ರತಾ ಕ್ರಮಗಳನ್ನು ಕೈಗೊಳ್ಳಲಾಯಿತು.
ವಿಷಯ ತಿಳಿಯುತ್ತಿದ್ದಂತೆ ಬೆಳಗಾವಿಯ ಮಾರ್ಕೆಟ್ ಪೊಲೀಸ್ ಠಾಣೆಯ (Market Police Station) ಸಿಬ್ಬಂದಿ ಸ್ಥಳಕ್ಕೆ ಆಗಮಿಸಿದರು. ಮುನ್ನೆಚ್ಚರಿಕೆ ಕ್ರಮವಾಗಿ ನ್ಯಾಯಾಲಯದ ಸುತ್ತಮುತ್ತ ಭದ್ರತೆ ಹೆಚ್ಚಿಸಿ, ಪರಿಶೀಲನಾ ಕಾರ್ಯ ಆರಂಭಿಸಿದರು.
ಬಳಿಕ ಬಾಂಬ್ ನಿಷ್ಕ್ರಿಯ ದಳ (Bomb Disposal Squad) ಹಾಗೂ ಶ್ವಾನದಳವನ್ನು ಕರೆಸಿ ನ್ಯಾಯಾಲಯದ ಒಳಭಾಗ, ಹೊರಭಾಗ ಸೇರಿದಂತೆ ಸಂಪೂರ್ಣ ಆವರಣದಲ್ಲಿ ತಪಾಸಣೆ ನಡೆಸಲಾಯಿತು. ಎರಡು ನ್ಯಾಯಾಲಯಗಳ ಕಟ್ಟಡಗಳಲ್ಲಿಯೂ ಸ್ಫೋಟಕಗಳಿಗಾಗಿ ಹುಡುಕಾಟ ನಡೆಸಿದ ಸಿಬ್ಬಂದಿ ಪ್ರತಿಯೊಂದು ಭಾಗವನ್ನೂ ಪರಿಶೀಲಿಸಿದರು.
ದೀರ್ಘ ಪರಿಶೀಲನೆಯ ಬಳಿಕ ಯಾವುದೇ ಅನುಮಾನಾಸ್ಪದ ವಸ್ತು ಅಥವಾ ಸ್ಫೋಟಕ ಪತ್ತೆಯಾಗಲಿಲ್ಲ. ಹೀಗಾಗಿ ಬಂದಿದ್ದ ಬಾಂಬ್ ಬೆದರಿಕೆ ಹುಸಿ ಎಂಬುದು ಖಚಿತವಾಯಿತು. ಪೊಲೀಸರ ತ್ವರಿತ ಕಾರ್ಯಾಚರಣೆಯಿಂದಾಗಿ ನ್ಯಾಯಾಲಯದ ಆವರಣದಲ್ಲಿ ಉಂಟಾಗಿದ್ದ ಆತಂಕ ದೂರವಾಯಿತು.




