ಬೆಂಗಳೂರು ಚೆನ್ನೈ ಎಕ್ಸ್‌ಪ್ರೆಸ್ ಹೈವೇ ರಸ್ತೆ ಪಕ್ಕ ಗೋಣಿ ಚೀಲದಲ್ಲಿ ಮಹಿಳೆಯ ಶವ ಪತ್ತೆ
ಕೋಲಾರದ ಕೆಜಿಎಫ್ ಸಮೀಪ ಚೆನ್ನೈ-ಬೆಂಗಳೂರು ಎಕ್ಸ್‌ಪ್ರೆಸ್ ಹೈವೇ ಸರ್ವೀಸ್ ರಸ್ತೆಯ ಬಳಿ ಮಹಿಳೆಯ ಮೃತದೇಹವನ್ನು ಗೋಣಿ ಚೀಲದಲ್ಲಿ ಸುತ್ತಿ ಎಸೆಯಲಾಗಿದೆ. ಘಟನೆ ತಿಳಿದು ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.

- ಗೋಣಿ ಚೀಲದಲ್ಲಿ ಮಹಿಳೆಯ ಮೃತದೇಹ ಪತ್ತೆ
- ಉಸಿರುಗಟ್ಟಿಸಿ ಕೊಲೆ ಮಾಡಿರುವ ಶಂಕೆ
- ಹಂತಕರಿಗಾಗಿ ಪೊಲೀಸರಿಂದ ವಿಶೇಷ ತಂಡ ರಚನೆ
ಕೆಜಿಎಫ್: ಜನರು ಸಂಚರಿಸುವ ಹೆದ್ದಾರಿಯ ಪಕ್ಕದಲ್ಲೇ ಮಹಿಳೆಯೊಬ್ಬರ ಮೃತದೇಹವನ್ನು ಯಾರಿಗೂ ಅನುಮಾನ ಬಾರದ ರೀತಿಯಲ್ಲಿ ವಿಲೇವಾರಿ ಮಾಡಲು ಯತ್ನಿಸಿರುವ ಭೀಕರ ಘಟನೆ ಕೋಲಾರ ಜಿಲ್ಲೆಯ ಕೆಜಿಎಫ್ (KGF) ತಾಲೂಕಿನ ಸುಂದರಪಾಳ್ಯ ಗ್ರಾಮದ ಬಳಿ ನಡೆದಿದೆ. ನವೆಂಬರ್ 27ರ ಬೆಳಗ್ಗೆ ಪಾರ್ಸೆಲ್‌ನಂತೆ ಸುತ್ತಿಟ್ಟಿದ್ದ ವಸ್ತುವಿನೊಳಗೆ ಮಹಿಳೆಯ ಶವ ಪತ್ತೆಯಾಗಿದ್ದು, ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.
ಚೆನ್ನೈ-ಬೆಂಗಳೂರು ಎಕ್ಸ್‌ಪ್ರೆಸ್ ಹೈವೇಗೆ (Chennai-Bengaluru Expressway) ಹೊಂದಿಕೊಂಡಿರುವ ಸರ್ವೀಸ್ ರಸ್ತೆಯ ಬದಿಯಲ್ಲಿ ಅನುಮಾನಾಸ್ಪದವಾಗಿ ಸುತ್ತಿಟ್ಟಿದ್ದ ದೊಡ್ಡ ಗಂಟು ಕಂಡುಬಂದಿತ್ತು. ಅದರೊಳಗಿಂದ ದುರ್ವಾಸನೆ ಬರುತ್ತಿದ್ದುದನ್ನು ಗಮನಿಸಿದ ಸ್ಥಳೀಯರು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬೇತಮಂಗಲ ಪೊಲೀಸರು ಸ್ಥಳಕ್ಕೆ ಬಂದು ಗಂಟನ್ನು ಪರಿಶೀಲಿಸಿದಾಗ ಮಹಿಳೆಯ ಮೃತದೇಹ ಇರುವುದು ಗೊತ್ತಾಗಿದೆ.
ಮೃತ ಮಹಿಳೆಗೆ ಸುಮಾರು 35ರಿಂದ 40 ವರ್ಷ ವಯಸ್ಸಾಗಿರಬಹುದು ಎಂದು ಅಂದಾಜಿಸಲಾಗಿದೆ. ಆಕೆಯನ್ನು ಉಸಿರುಗಟ್ಟಿಸಿ ಹತ್ಯೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಬಳಿಕ ಮೃತದೇಹವನ್ನು ಕುಳಿತ ಸ್ಥಿತಿಯಲ್ಲಿ ಇರಿಸಿ ಕೈಕಾಲುಗಳನ್ನು ಕಟ್ಟಿ ಗೋಣಿ ಚೀಲದೊಳಗೆ ತುಂಬಲಾಗಿದೆ. ಅದರ ಮೇಲೆ ಪ್ಲಾಸ್ಟಿಕ್ ಹೊದಿಕೆ ಹಾಕಿ ಪಾರ್ಸೆಲ್ ಪ್ಯಾಕಿಂಗ್ ಮಾಡುವ ರೀತಿಯಲ್ಲಿ ಟೇಪ್ ಸುತ್ತಲಾಗಿದೆ.
ಇಷ್ಟೇ ಅಲ್ಲದೆ, ಶವವನ್ನು ಸಾಗಿಸಲು ಅನುಕೂಲವಾಗುವಂತೆ ವಾಷಿಂಗ್ ಮಷಿನ್ ಟ್ರಾಲಿಯ ಮೇಲೆ ಇರಿಸಿ ಕಟ್ಟಲಾಗಿತ್ತು ಎನ್ನಲಾಗಿದೆ. ಮೇಲ್ನೋಟಕ್ಕೆ ಸಾಮಾನ್ಯ ಸರಕಿನಂತೆ ಕಾಣುವ ರೀತಿಯಲ್ಲಿ ಸಿದ್ಧಪಡಿಸಿ ರಸ್ತೆ ಬದಿಯಲ್ಲಿ ಎಸೆದು ಹೋಗಿರುವುದು ಪೊಲೀಸರನ್ನೂ ಬೆಚ್ಚಿಬೀಳಿಸಿದೆ.
ಪೊಲೀಸ್ ಅಧಿಕಾರಿಗಳಿಂದ ಸ್ಥಳ ಪರಿಶೀಲನೆ
ವಿಷಯ ತಿಳಿಯುತ್ತಿದ್ದಂತೆ ಕೆಜಿಎಫ್ ಪೊಲೀಸ್ ವರಿಷ್ಠಾಧಿಕಾರಿ ಶಿವಾಂಶು ರಜಪೂತ್, ಡಿವೈಎಸ್ಪಿ ಲಕ್ಷ್ಮಯ್ಯ ಸೇರಿದಂತೆ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಶ್ವಾನದಳ, ಬೆರಳಚ್ಚು ತಜ್ಞರು ಹಾಗೂ ಸೋಕೋ (SOCO) ತಂಡದ ಸಿಬ್ಬಂದಿ ಕೂಡ ಪರಿಶೀಲನೆ ನಡೆಸಿ ಅಗತ್ಯ ಸಾಕ್ಷ್ಯಗಳನ್ನು ಸಂಗ್ರಹಿಸಿದ್ದಾರೆ.
ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಮಹಿಳೆಯ ಗುರುತು ಪತ್ತೆಹಚ್ಚುವುದು ಈಗ ಪೊಲೀಸರ ಮೊದಲ ಆದ್ಯತೆಯಾಗಿದೆ. ಆಕೆಯ ಬಳಿ ಯಾವುದೇ ಗುರುತಿನ ಚೀಟಿ ಅಥವಾ ವೈಯಕ್ತಿಕ ವಸ್ತುಗಳು ಪತ್ತೆಯಾಗಿವೆಯೇ ಎಂಬುದನ್ನೂ ಪರಿಶೀಲಿಸಲಾಗುತ್ತಿದೆ.
ಕಾರಿನಲ್ಲಿ ಬಂದು ಶವ ಎಸೆದಿರುವ ಶಂಕೆ
ಮಹಿಳೆಯ ಮೃತದೇಹವನ್ನು ಬೇರೆಡೆಯಿಂದ ವಾಹನದಲ್ಲಿ ತಂದು ಇಲ್ಲಿ ಎಸೆದಿರಬಹುದು ಎಂಬ ಅನುಮಾನ ಪೊಲೀಸರಿಗೆ ಇದೆ. ಈ ಹಿನ್ನೆಲೆಯಲ್ಲಿ ಹೆದ್ದಾರಿ ಟೋಲ್‌ಗಳಲ್ಲಿ ಅಳವಡಿಸಿರುವ ಸಿಸಿಟಿವಿ (CCTV) ಕ್ಯಾಮೆರಾಗಳ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದೆ. ಅನುಮಾನಾಸ್ಪದವಾಗಿ ಸಂಚರಿಸಿದ ವಾಹನಗಳ ಮಾಹಿತಿ ಸಂಗ್ರಹಿಸುವ ಕಾರ್ಯವೂ ನಡೆಯುತ್ತಿದೆ ಎನ್ನಲಾಗಿದೆ.
ಸುಂದರಪಾಳ್ಯ ಪ್ರದೇಶವು ಆಂಧ್ರಪ್ರದೇಶ ಮತ್ತು ತಮಿಳುನಾಡು ಗಡಿಗಳಿಗೆ ಸಮೀಪದಲ್ಲಿರುವುದರಿಂದ, ಹೊರರಾಜ್ಯದಿಂದ ಮೃತದೇಹವನ್ನು ತಂದು ಎಸೆದಿರುವ ಸಾಧ್ಯತೆಯನ್ನೂ ಪೊಲೀಸರು ತಳ್ಳಿಹಾಕಿಲ್ಲ. ಈ ಹಿನ್ನೆಲೆಯಲ್ಲಿ ಗಡಿ ಭಾಗದ ಪೊಲೀಸ್ ಠಾಣೆಗಳಿಗೂ ಮಾಹಿತಿ ನೀಡಲಾಗಿದೆ.
ಹಂತಕರ ಪತ್ತೆಗೆ ಎರಡು ವಿಶೇಷ ತಂಡ
ಪ್ರಕರಣದ ತನಿಖೆಯನ್ನು ಚುರುಕುಗೊಳಿಸಿರುವ ಬೇತಮಂಗಲ ಪೊಲೀಸರು, ಮಹಿಳೆಯ ಗುರುತು ಪತ್ತೆ ಹಾಗೂ ಕೊಲೆ ಮಾಡಿದವರನ್ನು ಬಂಧಿಸಲು ಎರಡು ವಿಶೇಷ ತಂಡಗಳನ್ನು ರಚಿಸಿದ್ದಾರೆ. ಮಹಿಳೆಯನ್ನು ಎಲ್ಲಿ ಹತ್ಯೆ ಮಾಡಲಾಗಿದೆ, ಯಾರು ಈ ಕೃತ್ಯ ಎಸಗಿದ್ದಾರೆ ಮತ್ತು ಶವವನ್ನು ಹೆದ್ದಾರಿ ಪಕ್ಕಕ್ಕೆ ತಂದು ಎಸೆದಿರುವ ಉದ್ದೇಶವೇನು ಎಂಬ ಹಲವು ಪ್ರಶ್ನೆಗಳಿಗೆ ಉತ್ತರ ಹುಡುಕಲಾಗುತ್ತಿದೆ.
ಸದ್ಯ ಪ್ರಕರಣದ ಹಿಂದೆ ಯಾರಿದ್ದಾರೆ ಎಂಬುದು ತಿಳಿದುಬಂದಿಲ್ಲ. ಮರಣೋತ್ತರ ಪರೀಕ್ಷೆ, ವಿಧಿವಿಜ್ಞಾನ ವರದಿ ಮತ್ತು ಸಿಸಿಟಿವಿ ಪರಿಶೀಲನೆಯಿಂದ ತನಿಖೆಗೆ ಮಹತ್ವದ ಸುಳಿವು ಸಿಗುವ ನಿರೀಕ್ಷೆಯಿದೆ.



