PMAY-U 2.0 | ಸ್ವಂತ ಮನೆ ಇಲ್ಲದವರಿಗೆ ₹2.50 ಲಕ್ಷ ನೆರವು; ಬಡವರಿಗೆ ಮೋದಿಜಿ ಸರ್ಕಾರದಿಂದ ಭರ್ಜರಿ ಕೊಡುಗೆ
PMAY-U 2.0: ಸ್ವಂತ ಮನೆ ಹೊಂದುವ ಕನಸು ನನಸಾಗಿಸಲು ಕೇಂದ್ರ ಸರ್ಕಾರದಿಂದ ಹೊಸ ಅವಕಾಶ ಸಿಕ್ಕಿದೆ. ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ಅರ್ಹ ಕುಟುಂಬಗಳಿಗೆ ಮನೆ ನಿರ್ಮಾಣ ಹಾಗೂ ಖರೀದಿಗೆ ಆರ್ಥಿಕ ನೆರವು ದೊರೆಯಲಿದೆ.

- ಮನೆ ನಿರ್ಮಾಣಕ್ಕೆ ₹2.50 ಲಕ್ಷದವರೆಗೆ ನೆರವು
- ಗೃಹ ಸಾಲದ ಬಡ್ಡಿಗೂ ಸಬ್ಸಿಡಿ
- ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ
PMAY-U 2.0: ಸ್ವಂತ ಮನೆ ಕಟ್ಟಿಕೊಳ್ಳಬೇಕು ಎಂಬ ಆಸೆ ಅನೇಕರಿಗಿದೆ. ಆದರೆ ಜಾಗ ಖರೀದಿ, ಕಟ್ಟಡ ಸಾಮಗ್ರಿ ಮತ್ತು ನಿರ್ಮಾಣ ವೆಚ್ಚ ಹೆಚ್ಚಾಗಿರುವುದರಿಂದ ಬಡ ಹಾಗೂ ಮಧ್ಯಮ ವರ್ಗದ ಕುಟುಂಬಗಳಿಗೆ ಇದು ಸುಲಭದ ಕೆಲಸವಲ್ಲ. ಇಂತಹ ಕುಟುಂಬಗಳಿಗೆ ನೆರವಾಗಲು ಕೇಂದ್ರ ಸರ್ಕಾರದ (Central Government) ಪ್ರಧಾನ ಮಂತ್ರಿ ಆವಾಸ್ ಯೋಜನೆ (PMAY-U 2.0) ಅಡಿಯಲ್ಲಿ ಹೊಸ ಮನೆಗಳ ಮಂಜೂರಾತಿ ಪ್ರಕ್ರಿಯೆ ಮುಂದುವರಿದಿದೆ.
ಇತ್ತೀಚೆಗೆ ನಡೆದ ಕೇಂದ್ರ ಆಮೋದ ಮತ್ತು ಮೇಲ್ವಿಚಾರಣಾ ಸಮಿತಿಯ 11ನೇ ಸಭೆಯಲ್ಲಿ ನಗರ ಪ್ರದೇಶಗಳಿಗಾಗಿ 1.75 ಲಕ್ಷ ಮನೆಗಳಿಗೆ ಅಂತಿಮ ಅನುಮೋದನೆ ನೀಡಲಾಗಿದೆ. ಇದರ ಜೊತೆಗೆ ಮತ್ತೊಂದು 1.5 ಲಕ್ಷ ಮನೆಗಳಿಗೆ ತಾತ್ವಿಕ ಒಪ್ಪಿಗೆ ನೀಡಲಾಗಿದೆ. ಇದರಿಂದ ಅರ್ಹ ಫಲಾನುಭವಿಗಳಿಗೆ ಮನೆ ನಿರ್ಮಾಣ ಅಥವಾ ಖರೀದಿಗೆ ಸರ್ಕಾರದ ಆರ್ಥಿಕ ನೆರವು ಪಡೆಯುವ ಅವಕಾಶ ಸಿಗಲಿದೆ.
ಮಹಿಳೆಯರ ಹೆಸರಿಗೂ ಸಿಗಲಿದೆ ಆದ್ಯತೆ
ಈ ಯೋಜನೆಯಡಿ ಮನೆ ಮಾಲೀಕತ್ವಕ್ಕೆ ಸಂಬಂಧಿಸಿದಂತೆ ಕುಟುಂಬದ ಮಹಿಳಾ ಸದಸ್ಯೆಯ ಹೆಸರಿನಲ್ಲಿ ಅಥವಾ ಪತಿ-ಪತ್ನಿ ಜಂಟಿ ಹೆಸರಿನಲ್ಲಿ ಆಸ್ತಿ ನೋಂದಣಿ ಮಾಡಬೇಕೆಂಬ ನಿಯಮವಿದೆ. ಇದರಿಂದ ಕುಟುಂಬದಲ್ಲಿ ಮಹಿಳೆಯರ ಆಸ್ತಿ ಹಕ್ಕಿಗೂ ಹೆಚ್ಚಿನ ಮಹತ್ವ ಸಿಗಲಿದೆ.
ಯಾರಿಗೆ ಸಿಗಲಿದೆ ಈ ಸೌಲಭ್ಯ?
ಯೋಜನೆಯ ಪ್ರಯೋಜನ ಪಡೆಯಲು ಕೆಲವು ಪ್ರಮುಖ ಅರ್ಹತಾ ನಿಯಮಗಳನ್ನು ಪಾಲಿಸಬೇಕು. ಅರ್ಜಿದಾರರು ಅಥವಾ ಅವರ ಕುಟುಂಬದ ಸದಸ್ಯರಾದ ಪತಿ, ಪತ್ನಿ ಮತ್ತು ಅವಿವಾಹಿತ ಮಕ್ಕಳು ದೇಶದ ಯಾವುದೇ ಭಾಗದಲ್ಲಿಯೂ ಸ್ವಂತ ಪಕ್ಕಾ ಮನೆ ಹೊಂದಿರಬಾರದು.
ಆದಾಯದ ಆಧಾರದ ಮೇಲೆ ಫಲಾನುಭವಿಗಳನ್ನು ವಿವಿಧ ವರ್ಗಗಳಾಗಿ ವಿಂಗಡಿಸಲಾಗಿದೆ. ಆರ್ಥಿಕವಾಗಿ ದುರ್ಬಲ ವರ್ಗದ (EWS) ಕುಟುಂಬಗಳ ವಾರ್ಷಿಕ ಆದಾಯ ₹3 ಲಕ್ಷದೊಳಗಿರಬೇಕು. ಕಡಿಮೆ ಆದಾಯ ವರ್ಗದ (LIG) ಕುಟುಂಬಗಳಿಗೆ ₹6 ಲಕ್ಷದವರೆಗೆ ಹಾಗೂ ಮಧ್ಯಮ ಆದಾಯ ವರ್ಗದ (MIG) ಕುಟುಂಬಗಳಿಗೆ ₹9 ಲಕ್ಷದವರೆಗೆ ಆದಾಯ ಮಿತಿ ನಿಗದಿಪಡಿಸಲಾಗಿದೆ.
ಗೃಹ ಸಾಲದ (Home Loan) ಬಡ್ಡಿ ಸಬ್ಸಿಡಿ ಪಡೆಯಲು ಬಯಸುವವರು ಹೆಚ್ಚುವರಿ ಷರತ್ತುಗಳನ್ನು ಪೂರೈಸಬೇಕು. ಈ ವಿಭಾಗದಲ್ಲಿ ಮನೆಯ ಗರಿಷ್ಠ ಬೆಲೆ ₹35 ಲಕ್ಷ ಹಾಗೂ ಗೃಹ ಸಾಲದ ಮೊತ್ತ ₹25 ಲಕ್ಷ ಮೀರಬಾರದು ಎಂಬ ನಿಯಮಗಳಿವೆ.
ಎಷ್ಟು ಹಣದ ನೆರವು ಸಿಗುತ್ತದೆ?
ಈ ಯೋಜನೆಯಲ್ಲಿ ಫಲಾನುಭವಿಗಳಿಗೆ ಆಯ್ಕೆ ಮಾಡಿಕೊಂಡಿರುವ ವಿಭಾಗ ಮತ್ತು ಅರ್ಹತೆಯ ಆಧಾರದ ಮೇಲೆ ನೆರವು ಸಿಗುತ್ತದೆ. ಸ್ವಂತ ಜಾಗ ಹೊಂದಿದ್ದು ಮನೆ ನಿರ್ಮಾಣ ಮಾಡುವ ಅರ್ಹ ಕುಟುಂಬಗಳಿಗೆ (BLC) ₹2.50 ಲಕ್ಷದವರೆಗೆ ಆರ್ಥಿಕ ಸಹಾಯ ದೊರೆಯಬಹುದು.
ಸರ್ಕಾರ ಅಥವಾ ಖಾಸಗಿ ಸಂಸ್ಥೆಗಳು ನಿರ್ಮಿಸಿರುವ ಕೈಗೆಟುಕುವ ದರದ ಮನೆಗಳನ್ನು ಖರೀದಿಸುವವರಿಗೂ (AHP) ನಿಯಮಾನುಸಾರ ನೆರವು ಸಿಗುತ್ತದೆ. ಇನ್ನು ಗೃಹ ಸಾಲದ ಬಡ್ಡಿ (Home Loan Interest) ಸಬ್ಸಿಡಿ ಯೋಜನೆಯಡಿ (ISS) ಅರ್ಹ ಫಲಾನುಭವಿಗಳಿಗೆ ಒಟ್ಟು ₹1.80 ಲಕ್ಷದವರೆಗೆ ಬಡ್ಡಿ ಸಹಾಯಧನ ಪಡೆಯುವ ಅವಕಾಶವಿದೆ.
ಬಾಡಿಗೆ ಮನೆ ಸೌಲಭ್ಯಕ್ಕೆ ಸಂಬಂಧಿಸಿದಂತೆ (ARH) ಮತ್ತೊಂದು ವಿಭಾಗವೂ ಯೋಜನೆಯಲ್ಲಿದೆ. ಯಾವ ವಿಭಾಗಕ್ಕೆ ಅರ್ಜಿ ಸಲ್ಲಿಸುತ್ತೀರಿ ಎಂಬುದರ ಆಧಾರದ ಮೇಲೆ ನೆರವು ಮತ್ತು ಷರತ್ತುಗಳು ಬದಲಾಗುತ್ತವೆ.
ಅರ್ಜಿ ಸಲ್ಲಿಸಲು ಯಾವ ದಾಖಲೆಗಳು ಬೇಕು?
ಅರ್ಜಿದಾರರು ತಮ್ಮ ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್, ಆದಾಯ ಪ್ರಮಾಣಪತ್ರ, ಬ್ಯಾಂಕ್ ಖಾತೆಯ ವಿವರಗಳನ್ನು ಸಿದ್ಧವಾಗಿಟ್ಟುಕೊಳ್ಳಬೇಕು. ಉದ್ಯೋಗದಲ್ಲಿರುವವರು ಸಂಬಳದ ಚೀಟಿ ಅಥವಾ ಆದಾಯ ತೆರಿಗೆ ರಿಟರ್ನ್ಸ್ (ITR) ದಾಖಲೆಗಳನ್ನು ನೀಡಬೇಕಾಗಬಹುದು.
ಮನೆ ನಿರ್ಮಾಣಕ್ಕೆ ಸಂಬಂಧಿಸಿದಂತೆ ಜಮೀನಿನ ಮಾಲೀಕತ್ವ ದಾಖಲೆ ಅಥವಾ ಹಂಚಿಕೆ ಪತ್ರವೂ ಅಗತ್ಯವಾಗಬಹುದು. ದೇಶದ ಯಾವುದೇ ಭಾಗದಲ್ಲಿಯೂ ಪಕ್ಕಾ ಮನೆ ಇಲ್ಲ ಎಂಬ ಸ್ವಯಂ ಘೋಷಣಾ ಪತ್ರವನ್ನು ಸಲ್ಲಿಸಬೇಕು. ಅರ್ಜಿದಾರರ ಕುಟುಂಬದ ಸದಸ್ಯರ ದಾಖಲೆಗಳನ್ನೂ ಕೇಳಬಹುದು.
ಮೊಬೈಲ್ನಲ್ಲೇ ಆನ್ಲೈನ್ ಅರ್ಜಿ ಸಲ್ಲಿಸಿ
ಯೋಜನೆಗೆ ಅರ್ಜಿ ಸಲ್ಲಿಸಲು ಪ್ರಧಾನ ಮಂತ್ರಿ ಆವಾಸ್ ಯೋಜನೆಯ ನಗರ ವಿಭಾಗದ ಅಧಿಕೃತ ಪೋರ್ಟಲ್ಗೆ ಭೇಟಿ ನೀಡಬೇಕು.
- ಅಧಿಕೃತ PMAY-U 2.0 ವೆಬ್ಸೈಟ್ ತೆರೆಯಿರಿ.
- ‘Apply for PMAY-U 2.0’ ಆಯ್ಕೆ ಮಾಡಿ.
- ರಾಜ್ಯ ಮತ್ತು ವಾರ್ಷಿಕ ಆದಾಯದ ವಿವರ ನೀಡಿ.
- ನಿಮ್ಮ ಅಗತ್ಯಕ್ಕೆ ಅನುಗುಣವಾಗಿ BLC, AHP, ARH ಅಥವಾ ISS ವಿಭಾಗ ಆಯ್ಕೆ ಮಾಡಿ.
- ಆಧಾರ್ ಸಂಖ್ಯೆ, ಹೆಸರು ಮತ್ತು ಮೊಬೈಲ್ ಸಂಖ್ಯೆ ನಮೂದಿಸಿ.
- ಆಧಾರ್ಗೆ ಲಿಂಕ್ ಆಗಿರುವ ಮೊಬೈಲ್ಗೆ ಬರುವ OTP ಪರಿಶೀಲಿಸಿ.
- ಕುಟುಂಬ, ವಿಳಾಸ, ಬ್ಯಾಂಕ್ ಖಾತೆ ಹಾಗೂ ಆಸ್ತಿ ವಿವರ ಭರ್ತಿ ಮಾಡಿ.
- ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಿ ಅರ್ಜಿ ಸಲ್ಲಿಸಿ.
- ಕೊನೆಯಲ್ಲಿ ಸಿಗುವ ಅರ್ಜಿ ಸಂಖ್ಯೆಯನ್ನು ಸುರಕ್ಷಿತವಾಗಿ ಇಟ್ಟುಕೊಳ್ಳಿ.
ಅರ್ಜಿ ಸಲ್ಲಿಸುವ ಮುನ್ನ ನಿಮ್ಮ ಅರ್ಹತೆ ಮತ್ತು ಆಯ್ಕೆ ಮಾಡಿಕೊಂಡಿರುವ ಯೋಜನೆಯ ಷರತ್ತುಗಳನ್ನು ಅಧಿಕೃತ ಪೋರ್ಟಲ್ನಲ್ಲಿ ಪರಿಶೀಲಿಸಿಕೊಳ್ಳಿ. ಮನೆ ನಿರ್ಮಾಣದ ಕನಸು ಹೊಂದಿರುವವರು ಈ ಅವಕಾಶದ ಬಗ್ಗೆ ಮಾಹಿತಿ ಪಡೆದುಕೊಳ್ಳಬಹುದು.




