Mushroom Farming । ಬೆಂಗಳೂರು ಹೊಸಕೋಟೆಯಲ್ಲಿ ಉಚಿತ ಅಣಬೆ ಬೇಸಾಯ ತರಬೇತಿ; ಇಲ್ಲಿದೆ ಮಾಹಿತಿ
Free Mushroom Farming Training: ಉಪ ಉದ್ಯೋಗ ಆರಂಭಿಸಿ ಸ್ವಂತ ಆದಾಯ ಗಳಿಸುವ ಆಸಕ್ತರಿಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆಯಲ್ಲಿ ಅವಕಾಶ ಸಿಕ್ಕಿದೆ. ಹತ್ತು ದಿನಗಳ ಈ ಶಿಬಿರದಲ್ಲಿ ತರಬೇತಿ ಜೊತೆಗೆ ಊಟ ಮತ್ತು ವಸತಿ ಸೌಲಭ್ಯವೂ ಸಂಪೂರ್ಣ ಉಚಿತವಾಗಿದೆ.

- 10 ದಿನಗಳ ಕಾಲ ಉಚಿತ ಅಣಬೆ ತರಬೇತಿ
- ಪುರುಷರು, ಮಹಿಳೆಯರಿಗೆ ಅವಕಾಶ
- ಊಟ ಮತ್ತು ವಸತಿ ಉಚಿತ
ಬೆಂಗಳೂರು (Bengaluru): ಸ್ವಂತ ಉದ್ಯೋಗ ಆರಂಭಿಸಬೇಕು, ಕೃಷಿಯ ಮೂಲಕ ಆದಾಯ ಗಳಿಸಬೇಕು ಎಂದುಕೊಂಡಿರುವ ನಿರುದ್ಯೋಗಿಗಳಿಗೆ ಒಳ್ಳೆಯ ಅವಕಾಶವೊಂದು ಲಭಿಸಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕಿನ ಸೊಣ್ಣಹಳ್ಳಿಪುರದಲ್ಲಿರುವ ಕೆನರಾ ಬ್ಯಾಂಕ್ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆ (Canara Bank RSETI) ವತಿಯಿಂದ ಅಣಬೆ ಬೇಸಾಯದ (Mushroom Cultivation) ಕುರಿತು ಉಚಿತ ತರಬೇತಿ ಶಿಬಿರ ಆಯೋಜಿಸಲಾಗಿದೆ.
ಡಿಸೆಂಬರ್ 7, 2026ರಿಂದ ಸತತ 10 ದಿನಗಳ ಕಾಲ ನಡೆಯಲಿರುವ ಈ ಶಿಬಿರದಲ್ಲಿ ಅಣಬೆ ಕೃಷಿ ಕುರಿತು ತರಬೇತಿ ನೀಡಲಾಗುತ್ತದೆ. ಕೃಷಿ ಹಿನ್ನೆಲೆ ಇಲ್ಲದಿದ್ದರೂ ಸ್ವಂತ ಉದ್ಯಮ ಆರಂಭಿಸುವ ಆಸಕ್ತಿ ಹೊಂದಿರುವವರು ಈ ಅವಕಾಶವನ್ನು ಬಳಸಿಕೊಳ್ಳಬಹುದು. ಕರ್ನಾಟಕದ ಯಾವುದೇ ಜಿಲ್ಲೆಯ ನಿರುದ್ಯೋಗಿ ಪುರುಷರು ಮತ್ತು ಮಹಿಳೆಯರು ಅರ್ಜಿ ಸಲ್ಲಿಸಲು ಅವಕಾಶವಿದೆ.
ಯಾರಿಗೆ ಅವಕಾಶ?
ತರಬೇತಿಗೆ ಸೇರಲು ಬಯಸುವ ಅಭ್ಯರ್ಥಿಗಳಿಗೆ 18ರಿಂದ 50 ವರ್ಷ ವಯೋಮಿತಿ ನಿಗದಿಪಡಿಸಲಾಗಿದೆ. ಕನ್ನಡ ಓದಲು ಮತ್ತು ಬರೆಯಲು ತಿಳಿದಿರಬೇಕು. ಗ್ರಾಮೀಣ ಪ್ರದೇಶದ ಬಿಪಿಎಲ್ (BPL) ಕುಟುಂಬಗಳಿಗೆ ಸೇರಿದ ಅಭ್ಯರ್ಥಿಗಳಿಗೆ ಆಯ್ಕೆಯಲ್ಲಿ ಮೊದಲ ಆದ್ಯತೆ ನೀಡಲಾಗುತ್ತದೆ.
ಈ ಶಿಬಿರದ ವಿಶೇಷವೆಂದರೆ ಅಭ್ಯರ್ಥಿಗಳಿಗೆ ಯಾವುದೇ ತರಬೇತಿ ಶುಲ್ಕ ಇರುವುದಿಲ್ಲ. ಹತ್ತು ದಿನಗಳ ಅವಧಿಯಲ್ಲಿ ತರಬೇತಿಯ ಜೊತೆಗೆ ಊಟ ಮತ್ತು ವಸತಿ ವ್ಯವಸ್ಥೆಯನ್ನೂ ಸಂಸ್ಥೆಯೇ ಉಚಿತವಾಗಿ ಒದಗಿಸಲಿದೆ. ತರಬೇತಿ ಪೂರ್ಣಗೊಳಿಸಿದವರಿಗೆ ಕೇಂದ್ರ ಸರ್ಕಾರದ ಗ್ರಾಮೀಣ ಸಚಿವಾಲಯದ ವತಿಯಿಂದ ಪ್ರಮಾಣಪತ್ರ (Certificate) ನೀಡಲಾಗುತ್ತದೆ.
ಡಿಸೆಂಬರ್ 4ರಂದು ನೇರ ಸಂದರ್ಶನ
ಆಸಕ್ತರು ಡಿಸೆಂಬರ್ 4, 2026ರಂದು ಬೆಳಿಗ್ಗೆ 10 ಗಂಟೆಗೆ ಸೊಣ್ಣಹಳ್ಳಿಪುರದ ತರಬೇತಿ ಸಂಸ್ಥೆಯಲ್ಲಿ ನಡೆಯುವ ಸಂದರ್ಶನಕ್ಕೆ ಹಾಜರಾಗಬೇಕು. ಬರುವಾಗ ತಮ್ಮ ವಿದ್ಯಾರ್ಹತೆ ಮತ್ತು ವಿಳಾಸಕ್ಕೆ ಸಂಬಂಧಿಸಿದ ದಾಖಲೆಗಳನ್ನು ಕಡ್ಡಾಯವಾಗಿ ತರಬೇಕು.
ನೇರವಾಗಿ ಸಂದರ್ಶನಕ್ಕೆ ಬರಲು ಸಾಧ್ಯವಾಗದವರು ಅದೇ ದಿನದೊಳಗೆ ದೂರವಾಣಿ ಮೂಲಕ ಸಂಪರ್ಕಿಸಿ ಹೆಸರು ನೋಂದಾಯಿಸಿಕೊಳ್ಳಬಹುದು. ಹೆಚ್ಚಿನ ಮಾಹಿತಿಗಾಗಿ ಸಂಸ್ಥೆಯ ನಿರ್ದೇಶಕರು ಈ ಕೆಳಗಿನ ದೂರವಾಣಿ ಸಂಖ್ಯೆಗಳನ್ನು ಸಂಪರ್ಕಿಸುವಂತೆ ತಿಳಿಸಿದ್ದಾರೆ.
ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆಗಳು:
8970476050
9591514154
6363139123
9686248369
9886935603
ತರಬೇತಿ ಸ್ಥಳ: ಕೆನರಾ ಬ್ಯಾಂಕ್ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆ, ಸೊಣ್ಣಹಳ್ಳಿಪುರ, ಹಸಿಗಾಳ ಅಂಚೆ, ಹೊಸಕೋಟೆ ತಾಲೂಕು, ಬೆಂಗಳೂರು ಗ್ರಾಮಾಂತರ ಜಿಲ್ಲೆ.





