ಕರ್ನಾಟಕ ಹವಾಮಾನ: ಬೆಂಗಳೂರು, ಮೈಸೂರು ಸೇರಿದಂತೆ ಗುಡುಗು, ಬಿರುಗಾಳಿ ಸಹಿತ ಮಳೆ
Karnataka Weather: ರಾಜ್ಯದಲ್ಲಿ ವಿವಿಧ ಭಾಗಗಳಲ್ಲಿ ಮುಂಗಾರು ಕ್ಷೀಣಿಸಿದ್ದು, ಕರಾವಳಿ ಮತ್ತು ಉತ್ತರ ಒಳನಾಡಿನಲ್ಲಿ ಒಣ ಹವೆ ಮುಂದುವರಿಯಲಿದೆ. ದಕ್ಷಿಣ ಒಳನಾಡಿನ ಬೆಂಗಳೂರು, ಮೈಸೂರು ಸೇರಿದಂತೆ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಬೆಂಗಳೂರು (Bengaluru), ಸೆಪ್ಟೆಂಬರ್ 13: ಕರ್ನಾಟಕದಲ್ಲಿ ಮುಂಗಾರು (Karnataka Monsoon) ಚಟುವಟಿಕೆ ನಿಧಾನಗೊಂಡಿದ್ದು, ರಾಜ್ಯದ ಬಹುತೇಕ ಭಾಗಗಳಲ್ಲಿ ಒಣ ಹವೆ ಮುಂದುವರಿಯುವ ಸಾಧ್ಯತೆಯಿದೆ. ಕೆಲ ಜಿಲ್ಲೆಗಳಲ್ಲಿ ಮಾತ್ರ ಹಗುರ ಮಳೆಯಾಗುವ (Rain Update) ಮುನ್ಸೂಚನೆ ಇದ್ದು, ಒಟ್ಟಾರೆ ಹವಾಮಾನದಲ್ಲಿ (Weather) ಮಿಶ್ರ ಪರಿಸ್ಥಿತಿ ಕಂಡುಬರಲಿದೆ.
ಇಂದಿನ ಮುನ್ಸೂಚನೆಯಂತೆ ಕರಾವಳಿ ಭಾಗದಲ್ಲಿ ಉತ್ತರ ಕನ್ನಡ ಜಿಲ್ಲೆಯ ಕೆಲ ಪ್ರದೇಶಗಳಲ್ಲಿ ತುಂತುರು ಮಳೆಯಾಗಬಹುದು. ಆದರೆ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮಳೆಯ ನಿರೀಕ್ಷೆ ಇಲ್ಲ. ಈ ಭಾಗಗಳಲ್ಲಿ ಮೋಡ ಕವಿದ ವಾತಾವರಣದ ನಡುವೆ ಶುಷ್ಕ ಹವೆ ಮುಂದುವರಿಯಬಹುದು.
ಉತ್ತರ ಒಳನಾಡಿನಲ್ಲೂ ಇದೇ ರೀತಿಯ ಪರಿಸ್ಥಿತಿ ಇರಲಿದೆ. ಬೀದರ್ ಮತ್ತು ಕಲಬುರಗಿ ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಹಗುರ ಮಳೆಯಾಗುವ ಸಾಧ್ಯತೆ ಇದ್ದರೆ, ಉಳಿದ ಜಿಲ್ಲೆಗಳಲ್ಲಿ ಒಣ ಹಾಗೂ ಮೋಡಕವಿದ ವಾತಾವರಣ ಇರಲಿದೆ.
ದಕ್ಷಿಣ ಒಳನಾಡಿನಲ್ಲಿ ಚಾಮರಾಜನಗರ, ರಾಮನಗರ ಮತ್ತು ಕೋಲಾರ ಜಿಲ್ಲೆಗಳ ಕೆಲವು ಪ್ರದೇಶಗಳಲ್ಲಿ ಸಣ್ಣ ಪ್ರಮಾಣದ ಮಳೆಯಾಗುವ ಸಾಧ್ಯತೆಯಿದೆ. ಹೀಗಾಗಿ ಈ ಭಾಗಗಳ ಜನರು ಸ್ಥಳೀಯ ಹವಾಮಾನ ಬದಲಾವಣೆಗಳನ್ನು ಗಮನಿಸುವುದು ಸೂಕ್ತವಾಗಿದೆ.
ನಾಳೆಯ ಮುನ್ಸೂಚನೆಯಲ್ಲಿ ಪ್ರಮುಖ ಬದಲಾವಣೆ ದಕ್ಷಿಣ ಒಳನಾಡಿನಲ್ಲಿ ಕಂಡುಬರಲಿದೆ. ಮೈಸೂರು (Mysuru), ಮಂಡ್ಯ, ಚಾಮರಾಜನಗರ, ರಾಮನಗರ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಹಾಗೂ ಕೋಲಾರ ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಬಿರುಗಾಳಿ ಹಾಗೂ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ.
ಗಂಟೆಗೆ ಸುಮಾರು 30ರಿಂದ 40 ಕಿ.ಮೀ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆಯಿದ್ದು, ಹಗುರದಿಂದ ಸಾಧಾರಣ ಮಳೆ ಬೀಳಬಹುದು. ಇದರಿಂದ ಹೊರಾಂಗಣ ಕೆಲಸ, ಕೃಷಿ ಚಟುವಟಿಕೆ ಹಾಗೂ ಪ್ರಯಾಣದ ಸಂದರ್ಭದಲ್ಲಿ ಜನರು ಮುನ್ನೆಚ್ಚರಿಕೆ ವಹಿಸುವುದು ಒಳಿತು.
ಇನ್ನು ಕರಾವಳಿ ಕರ್ನಾಟಕ ಮತ್ತು ಉತ್ತರ ಒಳನಾಡಿನ ಬಹುತೇಕ ಜಿಲ್ಲೆಗಳಲ್ಲಿ ನಾಳೆ ಒಣ ಹವೆ (Dry Weather) ಮುಂದುವರಿಯಲಿದೆ ಎಂದು ಮುನ್ಸೂಚನೆ ತಿಳಿಸಿದೆ. ದಕ್ಷಿಣ ಒಳನಾಡಿನಲ್ಲಿ ಮಾತ್ರ ಮಳೆ (Rainfall) ಹಾಗೂ ಗುಡುಗು ಸಹಿತ ವಾತಾವರಣಕ್ಕೆ ಹೆಚ್ಚು ಅವಕಾಶವಿದೆ.



