ಗಣೇಶ ಹಬ್ಬದ ಹಿನ್ನೆಲೆ ಸೆ.14 ರಂದು ಮುಳ್ಳಯ್ಯನಗಿರಿಗೆ ಪ್ರವಾಸಿಗರಿಗೆ ಪ್ರವೇಶ ನಿರ್ಬಂಧ
ಗೌರಿ-ಗಣೇಶ ಹಬ್ಬದ ಹಿನ್ನೆಲೆಯಲ್ಲಿ ಮುಳ್ಳಯ್ಯನಗಿರಿ, ಸೀತಾಳಯ್ಯನಗಿರಿ ಹಾಗೂ ಬಾಬಾಬುಡನ್‌ಗಿರಿ ಭಾಗಗಳಿಗೆ ಸೆಪ್ಟೆಂಬರ್ 14ರಂದು ಪ್ರವಾಸಿಗರಿಗೆ ಪ್ರವೇಶ ನಿರ್ಬಂಧಿಸಲಾಗಿದೆ. ಭಕ್ತರ ಅನುಕೂಲಕ್ಕಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ.

- ಸೆ.14 ರಂದು ಮುಳ್ಳಯ್ಯನಗಿರಿಗೆ ಪ್ರವೇಶ ನಿರ್ಬಂಧ
- ಗೌರಿ-ಗಣೇಶ ಹಬ್ಬಕ್ಕೆ ಸಾವಿರಾರು ಭಕ್ತರ ಆಗಮನ
- ಟ್ರಾಫಿಕ್ ಜಾಮ್ ತಪ್ಪಿಸಲು ಪ್ರವಾಸ ಮುಂದೂಡಲು ಮನವಿ
ಚಿಕ್ಕಮಗಳೂರು (Chikkamagaluru), ಸೆಪ್ಟೆಂಬರ್ 12: ಗೌರಿ-ಗಣೇಶ ಹಬ್ಬದ (Gowri-Ganesha Festival) ಹಿನ್ನೆಲೆಯಲ್ಲಿ ಚಿಕ್ಕಮಗಳೂರಿನ ಪ್ರಸಿದ್ಧ ಗಿರಿಧಾಮಗಳಿಗೆ ತೆರಳಲು ಸಿದ್ಧತೆ ಮಾಡಿಕೊಂಡಿದ್ದ ಪ್ರವಾಸಿಗರಿಗೆ ಜಿಲ್ಲಾಡಳಿತ ಮಹತ್ವದ ಸೂಚನೆ ನೀಡಿದೆ. ಸೆಪ್ಟೆಂಬರ್ 14ರಂದು ಒಂದು ದಿನದ ಮಟ್ಟಿಗೆ ಮುಳ್ಳಯ್ಯನಗಿರಿ ಸೇರಿದಂತೆ ಚಂದ್ರದ್ರೋಣ ಪರ್ವತ ಸಾಲಿನ ಪ್ರಮುಖ ಪ್ರವಾಸಿ ತಾಣಗಳಿಗೆ ಪ್ರವಾಸಿಗರ ಪ್ರವೇಶವನ್ನು ನಿರ್ಬಂಧಿಸಲಾಗಿದೆ.
ಹಬ್ಬದ ದಿನ ಮುಳ್ಳಯ್ಯನಗಿರಿ, ಸೀತಾಳಯ್ಯನಗಿರಿ ಹಾಗೂ ಶ್ರೀ ಗುರು ನಾರುಕಂತೆ ಮಠದ ಸುತ್ತಮುತ್ತ ಭಕ್ತರ ಸಂಖ್ಯೆ ಹೆಚ್ಚಾಗುವ ನಿರೀಕ್ಷೆಯಿದೆ. ಚೌತಿ ಆಚರಣೆಗಾಗಿ ಸುತ್ತಮುತ್ತಲಿನ 40ಕ್ಕೂ ಹೆಚ್ಚು ಗ್ರಾಮಗಳಿಂದ ಸಾವಿರಾರು ಭಕ್ತರು ಆಗಮಿಸುವ ಸಾಧ್ಯತೆಯಿದೆ. ಹಣ್ಣು-ಕಾಯಿ ಮಾಡಿಸುವುದು ಹಾಗೂ ಚೌತಿ ಕಾಯಿ ಹೊಡೆಯುವಂತಹ ಸಾಂಪ್ರದಾಯಿಕ ಆಚರಣೆಗಳು ಇಲ್ಲಿ ನಡೆಯಲಿವೆ.
ಈ ಹಿನ್ನೆಲೆಯಲ್ಲಿ ಭಕ್ತರ ಧಾರ್ಮಿಕ ಆಚರಣೆಗಳಿಗೆ ಯಾವುದೇ ಅಡಚಣೆಯಾಗದಂತೆ ಜಿಲ್ಲಾಡಳಿತ ಮುಂಜಾಗ್ರತಾ ಕ್ರಮ ಕೈಗೊಂಡಿದೆ. ಹಲವು ವರ್ಷಗಳಿಂದ ನಡೆದುಕೊಂಡು ಬರುತ್ತಿರುವ ಸಂಪ್ರದಾಯಕ್ಕೆ ತೊಂದರೆಯಾಗದಂತೆ ಹಬ್ಬದ ದಿನ ಪ್ರವಾಸಿಗರ ಪ್ರವೇಶಕ್ಕೆ ತಾತ್ಕಾಲಿಕವಾಗಿ ಬ್ರೇಕ್ ಹಾಕಲಾಗಿದೆ.
ಇದರ ಜೊತೆಗೆ ಪ್ರವಾಸಿಗರ ವಾಹನಗಳು ಹೆಚ್ಚಿನ ಸಂಖ್ಯೆಯಲ್ಲಿ ಬಂದರೆ ಗಿರಿಧಾಮದ ರಸ್ತೆಯಲ್ಲಿ ಸಂಚಾರ ದಟ್ಟಣೆ (Traffic) ಉಂಟಾಗುವ ಸಾಧ್ಯತೆಯಿದೆ. ಸಾವಿರಾರು ಭಕ್ತರು ಒಂದೇ ಸಮಯದಲ್ಲಿ ಆಗಮಿಸುವ ಸಂದರ್ಭದಲ್ಲಿ ಪ್ರವಾಸಿಗರ ವಾಹನಗಳಿಂದ ಟ್ರಾಫಿಕ್ ಜಾಮ್ ಉಂಟಾದರೆ ಸ್ಥಳೀಯರು ಹಾಗೂ ಭಕ್ತರಿಗೆ ತೊಂದರೆಯಾಗಬಹುದು. ಇದನ್ನು ತಪ್ಪಿಸುವ ಉದ್ದೇಶದಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.
ಮುಳ್ಳಯ್ಯನಗಿರಿ ಮಾತ್ರವಲ್ಲದೆ ಸೀತಾಳಯ್ಯನಗಿರಿ, ಇನಾಂ ದತ್ತಾತ್ರೇಯ ಬಾಬಾಬುಡನ್ ಸ್ವಾಮಿ ದರ್ಗಾ ಹಾಗೂ ಮಾಣಿಕ್ಯಧಾರಾ ಪ್ರದೇಶಗಳಿಗೂ ಸೆಪ್ಟೆಂಬರ್ 14ರಂದು ಪ್ರವಾಸಿಗರು ತೆರಳದಂತೆ ಸೂಚಿಸಲಾಗಿದೆ. ಒಂದು ದಿನದ ಮಟ್ಟಿಗೆ ತಮ್ಮ ಪ್ರವಾಸವನ್ನು ಮುಂದೂಡುವಂತೆ ಜಿಲ್ಲಾಡಳಿತ ಮನವಿ ಮಾಡಿದೆ.
ಹಬ್ಬದ ಸಂದರ್ಭದಲ್ಲಿ ಭಕ್ತರ ಸಂಚಾರಕ್ಕೆ ಆದ್ಯತೆ ನೀಡುವುದರ ಜೊತೆಗೆ ಯಾವುದೇ ರೀತಿಯ ಗೊಂದಲ ಅಥವಾ ಸಂಚಾರ ಸಮಸ್ಯೆ (Traffic Jam) ಉಂಟಾಗದಂತೆ ಅಗತ್ಯ ಮುನ್ನೆಚ್ಚರಿಕೆ ವಹಿಸಲಾಗುತ್ತಿದೆ. ಪ್ರವಾಸಿಗರು ಜಿಲ್ಲಾಡಳಿತದ ಮನವಿಗೆ ಸ್ಪಂದಿಸಿ ಸೆಪ್ಟೆಂಬರ್ 14ರ ಪ್ರವಾಸವನ್ನು ಮುಂದೂಡಬೇಕು ಎಂದು ಚಿಕ್ಕಮಗಳೂರು ಜಿಲ್ಲಾಧಿಕಾರಿ ಭನ್ವರ್ ಸಿಂಗ್ ಮೀನಾ (Bhanwar Singh Meena) ಮನವಿ ಮಾಡಿದ್ದಾರೆ.
ಹೀಗಾಗಿ ಗೌರಿ-ಗಣೇಶ ಹಬ್ಬದಂದು ಮುಳ್ಳಯ್ಯನಗಿರಿ ಸೇರಿದಂತೆ ಈ ಪ್ರಮುಖ ಪ್ರದೇಶಗಳಿಗೆ ಪ್ರವಾಸದ ಪ್ಲ್ಯಾನ್ ಮಾಡಿಕೊಂಡಿರುವವರು ದಿನಾಂಕವನ್ನು ಬದಲಾಯಿಸಿಕೊಳ್ಳಬೇಕಿದೆ. ಹಬ್ಬದ ಆಚರಣೆ ಮುಗಿದ ಬಳಿಕ ಪ್ರವಾಸಕ್ಕೆ ತೆರಳುವಂತೆ ಜಿಲ್ಲಾಡಳಿತ ಸೂಚಿಸಿದೆ.



