ಚಿಕ್ಕಬಳ್ಳಾಪುರ: ಓಮ್ನಿ ಹಾಗೂ ಗೂಡ್ಸ್ ವಾಹನ ಮುಖಾಮುಖಿ ಡಿಕ್ಕಿ! ಮೂವರು ಮಹಿಳೆಯರು ಸಾವು

ಚಿಕ್ಕಬಳ್ಳಾಪುರದ ಶಿಡ್ಲಘಟ್ಟ ತಾಲೂಕಿನ ಕೊತ್ತನೂರು ಗೇಟ್ ಬಳಿ ಓಮ್ನಿ ಕಾರು ಮತ್ತು ಮಿನಿ ಗೂಡ್ಸ್ ವಾಹನ ಮುಖಾಮುಖಿ ಡಿಕ್ಕಿಯಾಗಿ ಮೂವರು ಮಹಿಳಾ ಕೂಲಿ ಕಾರ್ಮಿಕರು ಮೃತಪಟ್ಟಿದ್ದಾರೆ. ಹಲವರು ಗಾಯಗೊಂಡಿದ್ದಾರೆ.

ಚಿಕ್ಕಬಳ್ಳಾಪುರ (Chikkaballapur): ಹೂವು ಕಟಾವು ಕೆಲಸಕ್ಕೆ ತೆರಳುತ್ತಿದ್ದ ಕೂಲಿ ಕಾರ್ಮಿಕರನ್ನು ಕರೆದೊಯ್ಯುತ್ತಿದ್ದ ಓಮ್ನಿ ಕಾರು ಮತ್ತು ಮಿನಿ ಗೂಡ್ಸ್ ವಾಹನ (Goods Vehicle) ನಡುವೆ ಮುಖಾಮುಖಿ ಡಿಕ್ಕಿಯಾಗಿ ಮೂವರು ಮಹಿಳೆಯರು ಮೃತಪಟ್ಟಿರುವ ಘಟನೆ ಶಿಡ್ಲಘಟ್ಟ ತಾಲೂಕಿನ ಕೊತ್ತನೂರು ಗೇಟ್ (Kothanuru Gate) ಬಳಿ ನಡೆದಿದೆ.

ಮಲ್ಲಿಕಾರ್ಜುನಪುರ ಗ್ರಾಮದ ರೂಪಾ (30), ಮುನಿಚಿನ್ನಮ್ಮ (40) ಹಾಗೂ ರತ್ನಮ್ಮ (45) ಮೃತಪಟ್ಟವರು ಎಂದು ಗುರುತಿಸಲಾಗಿದೆ. ಅಪಘಾತದ (Road Accident) ತೀವ್ರತೆಗೆ ಮೂವರೂ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.

ಮಲ್ಲಿಕಾರ್ಜುನಪುರ ಗ್ರಾಮದ ಸುಮಾರು 10 ಮಂದಿ ಕೂಲಿ ಕಾರ್ಮಿಕರನ್ನು ರಾಮಚಂದ್ರಪ್ಪ ಎಂಬುವರು ಓಮ್ನಿ ಕಾರಿನಲ್ಲಿ ಹುಜುಗೂರು ಗ್ರಾಮದ ಕಡೆಗೆ ಕರೆದೊಯ್ಯುತ್ತಿದ್ದರು. ಹೂವು ಕಟಾವು ಕೆಲಸಕ್ಕಾಗಿ ಕಾರ್ಮಿಕರು ತೆರಳುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ.

ಕೊತ್ತನೂರು ಗೇಟ್ ಸಮೀಪ ಓಮ್ನಿ ಕಾರು ಸಾಗುತ್ತಿದ್ದಾಗ ಎದುರಿನಿಂದ ಬಂದ ಮಿನಿ ಗೂಡ್ಸ್ ವಾಹನಕ್ಕೆ ಡಿಕ್ಕಿಯಾಗಿದೆ ಎನ್ನಲಾಗಿದೆ. ಮುಖಾಮುಖಿ ಡಿಕ್ಕಿಯ ರಭಸಕ್ಕೆ ವಾಹನಗಳಲ್ಲಿದ್ದ ಕೆಲವರು ಗಾಯಗೊಂಡಿದ್ದು, ಸ್ಥಳದಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು.

ಅಪಘಾತದ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳೀಯರು ನೆರವಿಗೆ ಧಾವಿಸಿ ಗಾಯಾಳುಗಳನ್ನು ಹೊರತೆಗೆದಿದ್ದಾರೆ. ಗಾಯಗೊಂಡವರನ್ನು ತಕ್ಷಣ ಶಿಡ್ಲಘಟ್ಟ ತಾಲೂಕು ಆಸ್ಪತ್ರೆಗೆ (Shidlaghatta Taluk Hospital) ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಅಪಘಾತದಲ್ಲಿ ಮೃತಪಟ್ಟ ಮೂವರು ಮಹಿಳೆಯರ ಕುಟುಂಬಸ್ಥರಿಗೆ ವಿಷಯ ತಿಳಿಯುತ್ತಿದ್ದಂತೆ ದುಃಖದ ವಾತಾವರಣ ನಿರ್ಮಾಣವಾಗಿದೆ. ದಿನಗೂಲಿ ಕೆಲಸಕ್ಕೆ ತೆರಳುತ್ತಿದ್ದವರ ಕುಟುಂಬಗಳಿಗೆ ಈ ಘಟನೆ ಆಘಾತ ತಂದಿದೆ.

ಘಟನೆ ಸಂಬಂಧ ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ (Shidlaghatta Rural Police) ಪ್ರಕರಣ ದಾಖಲಾಗಿದ್ದು, ಪೊಲೀಸರು ಸ್ಥಳ ಪರಿಶೀಲನೆ ನಡೆಸಿ ಅಪಘಾತದ ನಿಖರ ಕಾರಣದ ಕುರಿತು ತನಿಖೆ ಮುಂದುವರಿಸಿದ್ದಾರೆ.

English Summary▼

Satish Raj Goravigere

12 ವರ್ಷಗಳ ಪತ್ರಿಕಾ ಅನುಭವ ಹೊಂದಿರುವ ಸತೀಶ್ ರಾಜ್ ಗೊರವಿಗೆರೆ ರವರು, 2019ರಲ್ಲಿ ಕನ್ನಡ ನ್ಯೂಸ್ ಟುಡೇ ಸ್ಥಾಪಿಸಿದವರು. ಬೆಂಗಳೂರು, ಕರ್ನಾಟಕ ಹಾಗೂ ರಾಷ್ಟ್ರೀಯ… More »

Related Stories