ಜ್ಯೋತಿಷಿ ಕಮಲಾಕರ್ ಭಟ್ ವಿರುದ್ಧ ಪೋಕ್ಸೊ ಪ್ರಕರಣ ದಾಖಲು
ವಸಂತ್ ನಾಯ್ಕ್ ಹತ್ಯೆ ಪ್ರಕರಣದ ಆರೋಪಿ ಜ್ಯೋತಿಷಿ ಕಮಲಾಕರ್ ಭಟ್ ವಿರುದ್ಧ ಬಾಲಕಿಗೆ ಲೈಂಗಿಕ ದೌರ್ಜನ್ಯ ಆರೋಪ ಕೇಳಿಬಂದಿದ್ದು, ಶಿವಮೊಗ್ಗ ತುಂಗಾನಗರ ಠಾಣೆಯಲ್ಲಿ ಪೋಕ್ಸೊ ಪ್ರಕರಣ ದಾಖಲಾಗಿದೆ.

- ಜ್ಯೋತಿಷಿ ಕಮಲಾಕರ್ ಭಟ್ ವಿರುದ್ಧ ಪೋಕ್ಸೊ ಪ್ರಕರಣ
- ಲೈಂಗಿಕ ದೌರ್ಜನ್ಯ ಆರೋಪ ಕುರಿತು ಬಾಲಕಿ ದೂರು
ಶಿವಮೊಗ್ಗ: ವಸಂತ್ ನಾಯ್ಕ್ ಹತ್ಯೆ ಪ್ರಕರಣದಲ್ಲಿ ಮೂರನೇ ಆರೋಪಿಯಾಗಿರುವ ಜ್ಯೋತಿಷಿ ಕಮಲಾಕರ್ ಭಟ್ ವಿರುದ್ಧ ಇದೀಗ ಮತ್ತೊಂದು ಗಂಭೀರ ಆರೋಪ ಹೊರಬಂದಿದೆ.
ಅಪ್ರಾಪ್ತೆಯೊಬ್ಬಳು ಲೈಂಗಿಕ ದೌರ್ಜನ್ಯ ಆರೋಪ ಮಾಡಿ ದೂರು ನೀಡಿದ ಹಿನ್ನೆಲೆಯಲ್ಲಿ ಶಿವಮೊಗ್ಗ ತುಂಗಾನಗರ ಪೊಲೀಸ್ ಠಾಣೆಯಲ್ಲಿ ಪೋಕ್ಸೊ ಪ್ರಕರಣ ದಾಖಲಿಸಲಾಗಿದೆ.
ಮಹೇಶ್ ನಾಯ್ಕ್ ಪುತ್ರಿ ಸಿದ್ದಾಪುರ ಠಾಣೆಗೆ ದೂರು ಸಲ್ಲಿಸಿದ್ದಳು. ನಂತರ ಕಾನೂನು ಪ್ರಕಾರ ಪ್ರಕರಣವನ್ನು ಶಿವಮೊಗ್ಗ ತುಂಗಾನಗರ ಠಾಣೆಗೆ ವರ್ಗಾಯಿಸಲಾಯಿತು. ದೂರಿನಲ್ಲಿ, ತಾಯಿ ಸುಚಿತ್ರಾ ಮನೆಯಲ್ಲಿ ಇಲ್ಲದ ವೇಳೆ ಶಿವಮೊಗ್ಗ ನಿವಾಸದಲ್ಲೇ ಕಮಲಾಕರ್ ಭಟ್ ದೌರ್ಜನ್ಯ ಎಸಗಿದ್ದಾರೆ ಎಂದು ಬಾಲಕಿ ಆರೋಪಿಸಿದ್ದಾಳೆ.
ಈ ಮಧ್ಯೆ, ಹತ್ಯೆ ಪ್ರಕರಣದ ತನಿಖೆ ಸಂಬಂಧ ಕಮಲಾಕರ್ ಭಟ್ ಅವರನ್ನು ಕಾರವಾರ ಜೈಲಿನಿಂದ ಸಿದ್ದಾಪುರಕ್ಕೆ ಕರೆತರಲಾಗಿತ್ತು. ಇದೀಗ ಪೋಕ್ಸೊ ಪ್ರಕರಣವೂ ದಾಖಲಾಗಿರುವುದರಿಂದ ಅವರನ್ನು ಶಿವಮೊಗ್ಗಕ್ಕೆ ಕರೆದೊಯ್ಯುವ ಸಾಧ್ಯತೆ ಇದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಪ್ರಕರಣವು ಎರಡೂ ಜಿಲ್ಲೆಗಳಲ್ಲಿ ಚರ್ಚೆಗೆ ಕಾರಣವಾಗಿದ್ದು, ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ.



