ರಸ್ತೆ ಗುಂಡಿಗೆ ಬಿದ್ದ ಬೈಕ್: ಮಹಿಳೆ ಮೇಲೆ ಹರಿದ ಟಿಪ್ಪರ್ ಲಾರಿ! ಭೀಕರ ಅಪಘಾತ
ಬಾಗಲಕೋಟೆ ಜಿಲ್ಲೆಯ ರಬಕವಿಯಲ್ಲಿ ರಸ್ತೆ ಗುಂಡಿನಿಂದ ಬೈಕ್ ನಿಯಂತ್ರಣ ತಪ್ಪಿ ಮಹಿಳೆ ಕೆಳಗೆ ಬಿದ್ದಿದ್ದು, ಹಿಂದಿನಿಂದ ಬಂದ ಟಿಪ್ಪರ್ ಹರಿದು ಗಂಭೀರವಾಗಿ ಗಾಯಗೊಂಡ ಘಟನೆ ನಡೆದಿದೆ.

ಬಾಗಲಕೋಟೆ (Bagalkot) ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ರಬಕವಿ ಪಟ್ಟಣದಲ್ಲಿ ರಸ್ತೆ ಗುಂಡಿಯೊಂದು ಮಹಿಳೆಯೊಬ್ಬರ ಪಾಲಿಗೆ ಭೀಕರ ಅಪಘಾತಕ್ಕೆ ಕಾರಣವಾಗಿದೆ. ಪತಿಯೊಂದಿಗೆ ಬೈಕ್ನಲ್ಲಿ ತೆರಳುತ್ತಿದ್ದ ಮಹಿಳೆ ರಸ್ತೆ ಗುಂಡಿನಿಂದಾಗಿ ಕೆಳಗೆ ಬಿದ್ದಿದ್ದು, ಅದೇ ವೇಳೆ ಹಿಂದಿನಿಂದ ಬಂದ ಟಿಪ್ಪರ್ ಲಾರಿ (Tipper Lorry) ಆಕೆಯ ಕಾಲಿನ ಮೇಲೆ ಹರಿದಿದೆ.
ಘಟನೆಯಲ್ಲಿ ರಬಕವಿಯ ತಬಸ್ಸುಮ್ ನದಾಫ್ (25) ಎಂಬುವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಅಪಘಾತದ ಪರಿಣಾಮ ಅವರ ಎಡಗಾಲಿಗೆ ತೀವ್ರ ಗಾಯವಾಗಿದ್ದು, ಕಾಲು ಕಟ್ ಆಗಿರುವುದಾಗಿ ತಿಳಿದುಬಂದಿದೆ.
ತಬಸ್ಸುಮ್ ಅವರು ತಮ್ಮ ಪತಿಯೊಂದಿಗೆ ದ್ವಿಚಕ್ರ ವಾಹನದಲ್ಲಿ ಹಿಂಬದಿ ಕುಳಿತು ಪ್ರಯಾಣಿಸುತ್ತಿದ್ದರು. ರಬಕವಿ ಪಟ್ಟಣದ ಚಿತ್ತರಗಿ ಆಸ್ಪತ್ರೆ ಎದುರಿನ ರಸ್ತೆಯಲ್ಲಿ ದೊಡ್ಡದಾದ ತಗ್ಗು-ಗುಂಡಿ (Pothole) ಇದ್ದು, ಬೈಕ್ನ ಚಕ್ರ ಅದಕ್ಕೆ ಬಿದ್ದಿದೆ.
ಗುಂಡಿಗೆ ಬೈಕ್ ಬಿದ್ದ ರಭಸಕ್ಕೆ ವಾಹನದ ನಿಯಂತ್ರಣ ತಪ್ಪಿದ್ದು, ತಬಸ್ಸುಮ್ ರಸ್ತೆಗೆ ಬಿದ್ದಿದ್ದಾರೆ. ಇದೇ ಸಂದರ್ಭದಲ್ಲಿ ಹಿಂದಿನಿಂದ ವೇಗವಾಗಿ ಬಂದ ಟಿಪ್ಪರ್ ಲಾರಿ ಅವರನ್ನು ತಪ್ಪಿಸಲು ಸಾಧ್ಯವಾಗದೆ ಕಾಲಿನ ಮೇಲೆ ಹರಿದಿದೆ ಎಂದು ತಿಳಿದುಬಂದಿದೆ.
ಅಪಘಾತದ ಬಳಿಕ ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಗಾಯಗೊಂಡ ಮಹಿಳೆಯನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಅವರ ಸ್ಥಿತಿಯ ಕುರಿತು ಹೆಚ್ಚಿನ ಮಾಹಿತಿ ಲಭ್ಯವಾಗಬೇಕಿದೆ.
ಘಟನೆಯ ಸಂಪೂರ್ಣ ದೃಶ್ಯ ಸಮೀಪದ ಸಿಸಿಟಿವಿ (CCTV) ಕ್ಯಾಮೆರಾದಲ್ಲಿ ಸೆರೆಯಾಗಿದೆ. ಬೈಕ್ ಗುಂಡಿಗೆ ಸಿಲುಕಿ ನಿಯಂತ್ರಣ ತಪ್ಪುವುದು, ಮಹಿಳೆ ರಸ್ತೆಗೆ ಬೀಳುವುದು ಹಾಗೂ ಬಳಿಕ ಟಿಪ್ಪರ್ ಲಾರಿ ಸಾಗುವ ದೃಶ್ಯಗಳು ಕ್ಯಾಮೆರಾದಲ್ಲಿ ದಾಖಲಾಗಿವೆ.
ರಸ್ತೆಯ ಅವೈಜ್ಞಾನಿಕ ನಿರ್ಮಾಣ ಹಾಗೂ ಅಪಾಯಕಾರಿ ಗುಂಡಿಗಳಿಂದಾಗಿ ವಾಹನ ಸವಾರರಿಗೆ ತೊಂದರೆಯಾಗುತ್ತಿದೆ ಎಂಬ ಆರೋಪಗಳ ನಡುವೆಯೇ ಈ ಘಟನೆ ನಡೆದಿದೆ. ಪ್ರಮುಖ ರಸ್ತೆಯಲ್ಲಿರುವ ಗುಂಡಿಯನ್ನು ಶೀಘ್ರ ದುರಸ್ತಿ ಮಾಡಿ, ಮತ್ತಷ್ಟು ಅಪಘಾತಗಳು ಸಂಭವಿಸದಂತೆ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.



