ಜೈಲಿನಲ್ಲಿದ್ದ ಪ್ರಜ್ವಲ್ ರೇವಣ್ಣಗೆ ಮೊಬೈಲ್ ಕೊಟ್ಟವರು ಯಾರು? ರಹಸ್ಯ ಬಯಲು, 7 ಜನರ ಮೇಲೆ ಕೇಸ್
ಪರಪ್ಪನ ಅಗ್ರಹಾರ ಜೈಲಿನಲ್ಲಿ ಪ್ರಜ್ವಲ್ ರೇವಣ್ಣ ಬಳಸಿದ್ದ ಎನ್ನಲಾದ ಮೊಬೈಲ್ ಹಾಗೂ ಸಿಮ್ ಮೂಲ ಪತ್ತೆಹಚ್ಚಿದ ಪೊಲೀಸರು, ಪ್ರಕರಣದಲ್ಲಿ ಏಳು ಮಂದಿ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ.

ಬೆಂಗಳೂರು (Bengaluru): ಪರಪ್ಪನ ಅಗ್ರಹಾರ ಜೈಲಿನಲ್ಲಿ ಮಾಜಿ ಸಂಸದ ಪ್ರಜ್ವಲ್ ರೇವಣ್ಣ (Prajwal Revanna) ಮೊಬೈಲ್ ಬಳಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಮತ್ತಷ್ಟು ಚುರುಕುಗೊಂಡಿದೆ. ಜೈಲಿನೊಳಗೆ ಮೊಬೈಲ್ ಹಾಗೂ ಸಿಮ್ ತಲುಪಿದ ಹಿಂದಿನ ಜಾಲದ ಬಗ್ಗೆ ಪೊಲೀಸರು ಮಾಹಿತಿ ಕಲೆಹಾಕಿದ್ದು, ಇದೀಗ ಏಳು ಮಂದಿಯ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಜೈಲಿನಲ್ಲಿ ಮೊಬೈಲ್ (Mobile) ಪತ್ತೆಯಾದ ಬಳಿಕ ಪೊಲೀಸರು ಅದರ ಮೂಲವನ್ನು ಪರಿಶೀಲಿಸಿದಾಗ ಡಿಜೆ ಹಳ್ಳಿ ಪ್ರದೇಶದ ಸಂಪರ್ಕವೊಂದು ಪತ್ತೆಯಾಗಿದೆ ಎನ್ನಲಾಗಿದೆ. ಈ ಸಂಬಂಧ ಪ್ರತಾಪ್ ರಾವ್, ತೌಸಿಫ್, ಸಿದ್ದಿಕ್, ಪ್ರಕಾಶ್, ಮಂಜುನಾಥ್ ಸೇರಿದಂತೆ ಏಳು ಮಂದಿಯ ವಿರುದ್ಧ ಎಫ್‌ಐಆರ್ (FIR) ದಾಖಲಾಗಿದೆ.
ಪ್ರಕರಣದ ತನಿಖೆಯಲ್ಲಿ ಮೊಬೈಲ್‌ಗೆ ಸಂಬಂಧಿಸಿದ ಸಿಮ್ ಕಾರ್ಡ್ (SIM Card) ಆಂಧ್ರಪ್ರದೇಶದ ಪುಂಗನೂರಿನಲ್ಲಿ ಖರೀದಿಯಾಗಿರುವುದು ಪತ್ತೆಯಾಗಿದೆ ಎಂದು ತಿಳಿದುಬಂದಿದೆ. ಬಳಿಕ ಅದರ ಕಾಲ್ ಡೀಟೇಲ್ಸ್ ಪರಿಶೀಲಿಸಿದಾಗ ಹಲವು ಯುವತಿಯರು ಹಾಗೂ ಕುಟುಂಬಸ್ಥರೊಂದಿಗೆ ಕರೆಗಳ ಮೂಲಕ ಸಂಪರ್ಕ ಹೊಂದಿರುವ ಮಾಹಿತಿ ಪೊಲೀಸರ ಗಮನಕ್ಕೆ ಬಂದಿದೆ ಎನ್ನಲಾಗಿದೆ.
ಈ ಪ್ರಕರಣದಲ್ಲಿ ಜೈಲಿನೊಳಗೆ ಮೊಬೈಲ್ ತಲುಪಲು ಕೆಲವರು ನೆರವು ನೀಡಿದ್ದರು ಎಂಬ ಆರೋಪವೂ ಕೇಳಿಬಂದಿದೆ. ಜೈಲಿನಲ್ಲಿದ್ದ ಸಿದ್ದಿಕ್ ಮತ್ತು ತೌಫಿಕ್ ಮೂಲಕ ಮೊಬೈಲ್ ವ್ಯವಸ್ಥೆಯಾಗಿತ್ತು ಎಂದು ತನಿಖೆಯಲ್ಲಿ ತಿಳಿದುಬಂದಿದೆ ಎನ್ನಲಾಗಿದೆ.
ತೌಫಿಕ್ ಅನಾರೋಗ್ಯದ ಕಾರಣ ಜಯನಗರ ಆಸ್ಪತ್ರೆಗೆ ದಾಖಲಾಗಿದ್ದ ಸಂದರ್ಭದಲ್ಲಿ ಮೊಬೈಲ್ ಖರೀದಿಸಿದ್ದಾನೆ ಎಂದು ಪೊಲೀಸರು ಶಂಕಿಸಿದ್ದಾರೆ. ನಂತರ ಸಿದ್ದಿಕ್ ಹೆಸರಿನಲ್ಲಿ ಸಿಮ್ ಕಾರ್ಡ್ ಪಡೆದು ಅದನ್ನು ಜೈಲಿನಲ್ಲಿ ಬಳಸಲಾಗುತ್ತಿತ್ತು ಎಂಬ ಆರೋಪವಿದೆ.
ಮೊಬೈಲ್ ಹಾಗೂ ಸಿಮ್ ಪಡೆಯಲು ದೊಡ್ಡ ಮೊತ್ತದ ಹಣ ಪಾವತಿಸಲಾಗಿತ್ತು ಎಂಬ ಮಾಹಿತಿಯೂ ತನಿಖೆಯಲ್ಲಿ ಕೇಳಿಬಂದಿದೆ. ಮೊಬೈಲ್‌ಗೆ ಸುಮಾರು ₹1 ಲಕ್ಷ ಹಾಗೂ ಸಿಮ್‌ಗಾಗಿ ₹50 ಸಾವಿರ ನೀಡಲಾಗಿತ್ತು ಎಂದು ಆರೋಪಿಸಲಾಗಿದೆ. ಈ ಹಣದ ವ್ಯವಹಾರದ ಬಗ್ಗೆ ಕೂಡ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.
ಇನ್ನು ಮೊಬೈಲ್‌ನಿಂದ ಸಂಪರ್ಕ ಹೊಂದಿದ್ದವರಿಗೂ ಪೊಲೀಸ್ ನೋಟಿಸ್ (Police Notice) ನೀಡಿ ವಿಚಾರಣೆಗೆ ಕರೆಯುವ ಸಾಧ್ಯತೆಯಿದೆ. ಕರೆಗಳ ಹಿನ್ನೆಲೆ ಹಾಗೂ ಜೈಲಿನಲ್ಲಿದ್ದ ವ್ಯಕ್ತಿಯೊಂದಿಗೆ ಅವರ ಸಂಪರ್ಕದ ಉದ್ದೇಶದ ಬಗ್ಗೆ ಮಾಹಿತಿ ಸಂಗ್ರಹಿಸಲು ಪೊಲೀಸರು ಮುಂದಾಗಿದ್ದಾರೆ ಎನ್ನಲಾಗಿದೆ.
ಈ ಹಿಂದೆ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರ ವಿರುದ್ಧ ಪ್ರಕರಣ ದಾಖಲಾಗಿತ್ತು. ತನಿಖೆ ಮುಂದುವರಿದಂತೆ ಜೈಲಿನಲ್ಲಿ ಮೊಬೈಲ್ ಬಳಕೆ ಮತ್ತು ಅದಕ್ಕೆ ನೆರವು ನೀಡಿದವರ ಕುರಿತು ಮತ್ತಷ್ಟು ಮಾಹಿತಿ ಹೊರಬಂದಿದೆ ಎನ್ನಲಾಗಿದೆ.
ಇದೀಗ ಏಳು ಮಂದಿಯ ವಿರುದ್ಧ ಪ್ರಕರಣ ದಾಖಲಾಗಿರುವ ಹಿನ್ನೆಲೆಯಲ್ಲಿ ತನಿಖೆಯ ವ್ಯಾಪ್ತಿ ವಿಸ್ತರಿಸಿದೆ. ಪೊಲೀಸ್ ತನಿಖೆ (Investigation) ಪೂರ್ಣಗೊಂಡ ಬಳಿಕ ಜೈಲಿನೊಳಗೆ ಮೊಬೈಲ್ ಹೇಗೆ ತಲುಪಿತು, ಯಾರು ನೆರವು ನೀಡಿದರು ಮತ್ತು ಹಣದ ವ್ಯವಹಾರ ನಡೆದಿದೆಯೇ ಎಂಬ ಬಗ್ಗೆ ಸ್ಪಷ್ಟ ಚಿತ್ರಣ ಸಿಗಬೇಕಿದೆ.



