ಅಶ್ಲೀಲ ಸಂದೇಶ ಪ್ರಕರಣ; ಕಾಲಿಗೆ ಬಿದ್ದ ಆರೋಪಿಗಳು: “ಕ್ಷಮಿಸಿ” ಎಂದರೂ ನೋ ಎಂದ ರಮ್ಯಾ!
ಅಶ್ಲೀಲ ಸಂದೇಶ ಪ್ರಕರಣದಲ್ಲಿ ಆರೋಪಿಗಳು ಹಾಗೂ ಕುಟುಂಬಸ್ಥರು ನ್ಯಾಯಾಲಯದಲ್ಲಿ ರಮ್ಯಾ ಬಳಿ ಕ್ಷಮೆ ಕೇಳಿ ಪ್ರಕರಣ ಹಿಂಪಡೆಯುವಂತೆ ಮನವಿ ಮಾಡಿದ್ದಾರೆ. ಆದರೆ ಕಾನೂನು ಹೋರಾಟದಿಂದ ಹಿಂದೆ ಸರಿಯುವುದಿಲ್ಲ ಎಂದು ರಮ್ಯಾ ಸ್ಪಷ್ಟಪಡಿಸಿದ್ದಾರೆ.

ಬೆಂಗಳೂರು (Bengaluru): ಸಾಮಾಜಿಕ ಜಾಲತಾಣದಲ್ಲಿ (Social Media) ನಟಿ ಹಾಗೂ ಮಾಜಿ ಸಂಸದೆ ರಮ್ಯಾ (Actress Ramya) ಅವರಿಗೆ ಅಶ್ಲೀಲ ಮತ್ತು ಅವಾಚ್ಯ ಸಂದೇಶ ಕಳುಹಿಸಿದ ಆರೋಪಕ್ಕೆ ಸಂಬಂಧಿಸಿದ ಪ್ರಕರಣದ ವಿಚಾರಣೆ ಬೆಂಗಳೂರಿನ 46ನೇ ಸಿಟಿ ಸಿವಿಲ್ ನ್ಯಾಯಾಲಯದಲ್ಲಿ ನಡೆದಿದೆ.
ವಿಚಾರಣೆ ವೇಳೆ ಪ್ರಕರಣದ ಆರೋಪಿಗಳು ಹಾಗೂ ಅವರ ಕುಟುಂಬಸ್ಥರು ರಮ್ಯಾ ಅವರ ಬಳಿ ಕ್ಷಮೆ ಕೇಳಿ, ಪ್ರಕರಣವನ್ನು ಇಲ್ಲಿಗೇ ಮುಕ್ತಾಯಗೊಳಿಸುವಂತೆ ಮನವಿ ಮಾಡಿದ್ದಾರೆ. ಆರೋಪಿಗಳು ಕಣ್ಣೀರಿಟ್ಟು ಕ್ಷಮೆ ಕೇಳಿದ್ದರೂ ರಮ್ಯಾ ತಮ್ಮ ನಿರ್ಧಾರದಿಂದ ಹಿಂದೆ ಸರಿಯಲು ನಿರಾಕರಿಸಿದ್ದಾರೆ ಎನ್ನಲಾಗಿದೆ.
ನಟ ದರ್ಶನ್ ಅವರ ಅಭಿಮಾನಿಗಳು ಎಂದು ಹೇಳಲಾಗಿರುವ ಆರೋಪಿಗಳು ನ್ಯಾಯಾಲಯದ ಆವರಣದಲ್ಲಿ ರಮ್ಯಾ ಅವರ ಕಾಲಿಗೆ ಬಿದ್ದು ಕ್ಷಮೆ ಕೇಳಿದ್ದಾರೆ ಎನ್ನಲಾಗಿದೆ. ತಮ್ಮಿಂದ ತಪ್ಪಾಗಿದೆ, ಈ ಬಾರಿ ಕ್ಷಮಿಸುವಂತೆ ಅವರು ಮನವಿ ಮಾಡಿದ್ದಾರೆ ಎಂದು ತಿಳಿದುಬಂದಿದೆ.
ಈ ಹಿಂದೆ ನಡೆದ ವಿಚಾರಣೆಯ ಸಂದರ್ಭದಲ್ಲೂ ಆರೋಪಿಗಳು ಇದೇ ರೀತಿಯ ಮನವಿ ಮಾಡಿದ್ದರು. ಇದೀಗ ಆರೋಪಿಗಳ ಕುಟುಂಬದ ಸದಸ್ಯರೂ ನ್ಯಾಯಾಲಯಕ್ಕೆ ಬಂದು ಪ್ರಕರಣ ಹಿಂಪಡೆಯುವಂತೆ ರಮ್ಯಾ ಅವರಲ್ಲಿ ಮನವಿ ಮಾಡಿದ್ದಾರೆ.
ಆದರೆ ಈ ಮನವಿಗಳಿಗೆ ಸ್ಪಂದಿಸದ ರಮ್ಯಾ, ಪ್ರಕರಣವನ್ನು ಯಾವುದೇ ಕಾರಣಕ್ಕೂ ಹಿಂಪಡೆಯುವುದಿಲ್ಲ ಎಂಬ ನಿಲುವು ವ್ಯಕ್ತಪಡಿಸಿದ್ದಾರೆ. ಮೊಬೈಲ್ ಹಾಗೂ ಇಂಟರ್ನೆಟ್ ಸೌಲಭ್ಯವಿದೆ ಎಂಬ ಕಾರಣಕ್ಕೆ ಯಾರ ವಿರುದ್ಧ ಬೇಕಾದರೂ ಅಶ್ಲೀಲವಾಗಿ ಅಥವಾ ಅವಾಚ್ಯವಾಗಿ ಬರೆಯಲು ಸಾಧ್ಯವಿಲ್ಲ ಎಂದು ಅವರು ಹೇಳಿದ್ದಾರೆ ಎನ್ನಲಾಗಿದೆ.
ಸಾಮಾಜಿಕ ಜಾಲತಾಣದಲ್ಲಿ ಮಹಿಳೆಯರ ವಿರುದ್ಧ ನಡೆಯುವ ಟ್ರೋಲಿಂಗ್ (Trolling) ಮತ್ತು ಸೈಬರ್ ದೌರ್ಜನ್ಯದ ವಿರುದ್ಧ ತಮ್ಮ ಕಾನೂನು ಹೋರಾಟ ಮುಂದುವರಿಸುವುದಾಗಿ ರಮ್ಯಾ ತಿಳಿಸಿದ್ದಾರೆ. ನ್ಯಾಯಾಲಯ ಎಷ್ಟು ಬಾರಿ ಸಾಕ್ಷ್ಯ ನೀಡಲು ಕರೆದರೂ ಹಾಜರಾಗಲು ಸಿದ್ಧ, ಆದರೆ ಆರೋಪಿಗಳಿಗೆ ಕ್ಷಮೆ ನೀಡುವ ಪ್ರಶ್ನೆಯೇ ಇಲ್ಲ ಎಂದು ಹೇಳಿದ್ದಾರೆ ಎನ್ನಲಾಗಿದೆ.
ಈ ಪ್ರಕರಣ ಮುಂದಿನ ದಿನಗಳಲ್ಲಿ ಇತರರಿಗೂ ಎಚ್ಚರಿಕೆಯ ಪಾಠವಾಗಬೇಕು ಎಂಬುದು ರಮ್ಯಾ ಅವರ ನಿಲುವಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಮತ್ತೊಬ್ಬ ಮಹಿಳೆಯ ಬಗ್ಗೆ ಕೆಟ್ಟದಾಗಿ ಕಾಮೆಂಟ್ ಮಾಡುವ ಮುನ್ನ ಹಲವು ಬಾರಿ ಯೋಚಿಸುವಂತಾಗಬೇಕು ಎಂದು ಅವರು ಹೇಳಿದ್ದಾರೆ.
ರಮ್ಯಾ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಅತ್ಯಂತ ಕೆಟ್ಟ ಪದಗಳನ್ನು ಬಳಸಿ ಸಂದೇಶಗಳನ್ನು ಕಳುಹಿಸಲಾಗಿತ್ತು. ಈ ಸಂಬಂಧ ಅವರು ಸಿಸಿಬಿ ಪೊಲೀಸರಿಗೆ (CCB Police) ದೂರು ನೀಡಿದ್ದರು. ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ತನಿಖೆ ನಡೆಸಿ, ನಿಂದನಾತ್ಮಕ ಸಂದೇಶ ಕಳುಹಿಸಿದ ಹಲವು ಆರೋಪಿಗಳನ್ನು ಬಂಧಿಸಿದ್ದರು.
ಸದ್ಯ ಪ್ರಕರಣದ ತನಿಖೆ ಪೂರ್ಣಗೊಳಿಸಿರುವ ಸಿಸಿಬಿ ಪೊಲೀಸರು ಆರೋಪಪಟ್ಟಿ (Chargesheet) ಸಲ್ಲಿಸಿದ್ದು, ನ್ಯಾಯಾಲಯದಲ್ಲಿ ವಿಚಾರಣೆ ಮುಂದುವರಿದಿದೆ.



