ಬಳ್ಳಾರಿ ವಸತಿ ಶಾಲೆಯಲ್ಲಿ ವಿದ್ಯಾರ್ಥಿ ದಾಳಿ: ಸಹಪಾಠಿ ಸಾವು, 7 ವಿದ್ಯಾರ್ಥಿಗಳ ಸ್ಥಿತಿ ಗಂಭೀರ

ಬಳ್ಳಾರಿ ಗುರುಕುಲ ವಸತಿ ಶಾಲೆಯಲ್ಲಿ ಭೀಕರ ಘಟನೆ ನಡೆದಿದೆ. ವಿದ್ಯಾರ್ಥಿಯೊಬ್ಬ ಕಬ್ಬಿಣದ ರಾಡ್ ಮತ್ತು ಚಾಕುವಿನಿಂದ ಸಹಪಾಠಿಗಳ ಮೇಲೆ ದಾಳಿ ನಡೆಸಿ ಓರ್ವ ವಿದ್ಯಾರ್ಥಿ ಸಾವನ್ನಪ್ಪಿದ್ದು, 7 ಮಂದಿ ಗಂಭೀರ ಗಾಯಗೊಂಡಿದ್ದಾರೆ.

ಬಳ್ಳಾರಿ ನಗರದ ಗುರುಕುಲ ವಸತಿ ಶಾಲೆಯಲ್ಲಿ ವಿದ್ಯಾರ್ಥಿಯೊಬ್ಬ ತನ್ನ ಸಹಪಾಠಿಗಳ ಮೇಲೆ ನಡೆಸಿದ ದಾಳಿಯಿಂದ ದುರ್ಘಟನೆ ಸಂಭವಿಸಿದೆ. ಶನಿವಾರ ತಡರಾತ್ರಿ ಈ ಘಟನೆ ನಡೆದಿದ್ದು, ಓರ್ವ ವಿದ್ಯಾರ್ಥಿ ಮೃತಪಟ್ಟಿದ್ದು, ಇನ್ನೂ ಏಳು ಮಂದಿ ಗಂಭೀರ ಗಾಯಗಳೊಂದಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಘಟನೆ ಶಾಲಾ ವಲಯದಲ್ಲಿ ಆತಂಕ ಮೂಡಿಸಿದ್ದು, ಪೋಷಕರಲ್ಲಿ ಭಾರೀ ಚಿಂತೆ ಉಂಟುಮಾಡಿದೆ.

ಮೃತ ವಿದ್ಯಾರ್ಥಿಯನ್ನು ಆಂಧ್ರಪ್ರದೇಶದ ಅದವಾನಿ ಮೂಲದ ಹೇಮಂತ್ ಎಂದು ಗುರುತಿಸಲಾಗಿದೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಬಳ್ಳಾರಿ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಕೇಂದ್ರ (ವಿಮ್ಸ್) ಆಸ್ಪತ್ರೆಗೆ ಕಳುಹಿಸಲಾಗಿದೆ. ದಾಳಿಯಲ್ಲಿ ಗಾಯಗೊಂಡಿರುವ ವಿದ್ಯಾರ್ಥಿಗಳನ್ನು ವಿಮ್ಸ್ ಹಾಗೂ ಟ್ರಾಮಾ ಕೇರ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ರಾತ್ರಿ ಮಲಗಿದ್ದ ವಿದ್ಯಾರ್ಥಿಗಳ ಮೇಲೆ ದಾಳಿ

ಘಟನೆಯ ಸಮಯದಲ್ಲಿ ವಿದ್ಯಾರ್ಥಿಗಳು ರಾತ್ರಿ ಊಟದ ಬಳಿಕ ಹಾಸ್ಟೆಲ್‌ನಲ್ಲಿ ಮಲಗಿದ್ದರೆಂದು ತಿಳಿದುಬಂದಿದೆ. ಇದೇ ವೇಳೆ ಆರೋಪಿ ವಿದ್ಯಾರ್ಥಿ ಏಕಾಏಕಿ ಕಬ್ಬಿಣದ ಮಂಚದ ರಾಡ್, ಸ್ಕ್ರೂ ಡ್ರೈವರ್, ರೇಡಿಯಮ್ ಕಟರ್ ಹಾಗೂ ಚಾಕು ಬಳಸಿ ಸಹಪಾಠಿಗಳ ಮೇಲೆ ದಾಳಿ ನಡೆಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಏಕಾಏಕಿ ನಡೆದ ಈ ದಾಳಿಯಿಂದ ಹಾಸ್ಟೆಲ್‌ನಲ್ಲಿ ಗೊಂದಲ ಮತ್ತು ಆತಂಕದ ವಾತಾವರಣ ನಿರ್ಮಾಣವಾಯಿತು.

ಈ ಘಟನೆಯಲ್ಲಿ ಒಟ್ಟು ಎಂಟು ವಿದ್ಯಾರ್ಥಿಗಳು ಗಂಭೀರವಾಗಿ ಗಾಯಗೊಂಡಿದ್ದು, ನಂತರ ಚಿಕಿತ್ಸೆ ವೇಳೆ ಹೇಮಂತ್ ಮೃತಪಟ್ಟಿದ್ದಾನೆ ಎಂದು ವೈದ್ಯರು ತಿಳಿಸಿದ್ದಾರೆ. ಇನ್ನು ಕೆಲವರ ಸ್ಥಿತಿ ಆತಂಕಕಾರಿಯಾಗಿದೆ ಎಂದು ತಿಳಿದುಬಂದಿದೆ.

ವಾರ್ಡನ್ ಮೇಲೂ ಹಲ್ಲೆ, ಬಳಿಕ ಪರಾರಿ

ದಾಳಿ ನಡೆಸಿದ ವಿದ್ಯಾರ್ಥಿ ಹಾಸ್ಟೆಲ್ ವಾರ್ಡನ್ ಮೇಲೂ ಹಲ್ಲೆ ಮಾಡಿದ ನಂತರ ಸ್ಥಳದಿಂದ ಓಡಿಹೋಗಿದ್ದಾನೆ ಎಂದು ಮಾಹಿತಿ ದೊರೆತಿದೆ. ಘಟನೆ ತಿಳಿದು ಸ್ಥಳಕ್ಕಾಗಮಿಸಿದ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

ತಡರಾತ್ರಿ ನಡೆದ ಈ ಘಟನೆ ಪೋಷಕರಲ್ಲಿ ಆತಂಕ ಉಂಟುಮಾಡಿದ್ದು, ಮಕ್ಕಳ ಸುರಕ್ಷತೆ ಬಗ್ಗೆ ಪ್ರಶ್ನೆಗಳು ಎದ್ದಿವೆ. ತಡಿಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿತ ವಿದ್ಯಾರ್ಥಿಯನ್ನು ಪತ್ತೆಹಚ್ಚಲು ಪೊಲೀಸರು ಕ್ರಮ ಕೈಗೊಂಡಿದ್ದಾರೆ.

Related Stories